ನ್ಯೂಝಿಲೆಂಡ್ ದಾಳಿ: 9ಕ್ಕೂ ಹೆಚ್ಚು ಭಾರತೀಯರು ನಾಪತ್ತೆ

ನವದೆಹಲಿ(ಮಾ. 15): ನ್ಯೂಝಿಲೆಂಡ್ ಕ್ರೈಸ್ಟ್ ಚರ್ಚ್ನಲ್ಲಿರುವ ಎರಡು ಮಸೀದಿಗಳ ಮೇಲೆ ಇವತ್ತು ನಡೆದ ಉಗ್ರರ ದಾಳಿ ಘಟನೆಯಲ್ಲಿ 49 ಜನರು ಬಲಿಯಾಗಿ, 20 ಮಂದಿಗೆ ಗಾಯಗಳಾಗಿದ್ದವು. ಬಹಳಷ್ಟು ಮಂದಿ ಈ ಘಟನೆಯ ನಂತರ ಕಾಣೆಯಾಗಿರುವುದಾಗಿ ವರದಿಯಾಗಿದೆ.

ಇವರ ಪೈಕಿ ಭಾರತೀಯ ಮೂಲದವರಾದ 9ಕ್ಕೂ ಹೆಚ್ಚು ಜನರು ನಾಪತ್ತೆಯಾಗಿರುವ ವಿಚಾರ ತಿಳಿದುಬಂದಿದೆ. ನ್ಯೂಜಿಲೆಂಡ್ನಲ್ಲಿ ಭಾರತದ ರಾಯಭಾರಿಯಾಗಿರುವ ಸಂಜೀವ್ ಕೊಹ್ಲಿ ಅವರೇ ಈ ಕುರಿತು ಟ್ವೀಟ್ ಮಾಡಿ, ಭಾರತೀಯ ಮೂಲದವರು ನಾಪತ್ತೆಯಾಗಿರುವುದನ್ನು ಖಚಿತಪಡಿಸಿದ್ದಾರೆ. ಆದರೆ, ಎಷ್ಟು ಮಂದಿ ಭಾರತೀಯರು ಕಾಣೆಯಾಗಿದ್ದಾರೆಂಬ ನಿಖರ ಸಂಖ್ಯೆ ಲಭಿಸಿಲ್ಲ.ಇನ್ನಷ್ಟು ಮಾಹಿತಿ ಕಲೆಹಾಕುತ್ತಿರುವುದಾಗಿ ಕೊಹ್ಲಿ ತಿಳಿಸಿದ್ದಾರೆ.ನಾಳೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

ನಗರದ ಮಧ್ಯಭಾಗದಲ್ಲಿರುವ ಅಲ್ ನೂರ್ ಮಸೀದಿ ಹಾಗೂ ಹೊರವಲಯದಲ್ಲಿರುವ ಲಿನ್ವುಡ್ ಮಸೀದಿಯ ಮೇಲೆ ಇವತ್ತು ಮಧ್ಯಾಹ್ನ ಜುಮಾ ನಮಾಝ್ ವೇಳೆ ಉಗ್ರರು ಗನ್ ದಾಳಿ ನಡೆಸಿದ್ದರು.

ಹೆಲ್ಮೆಟ್ಗೆ ಕ್ಯಾಮೆರಾ ಫಿಕ್ಸ್ ಮಾಡಿಕೊಂಡಿದ್ದ ಉಗ್ರರು ಫೇಸ್ಬುಕ್ನಲ್ಲಿ ದಾಳಿಯ ನೇರ ಪ್ರಸಾರ ಕೂಡ ಮಾಡಿದ್ದರು. ಪೊಲೀಸರು ಓರ್ವ ಮಹಿಳೆ ಸೇರಿದಂತೆ ನಾಲ್ವರು ಶಂಕಿತ ದಾಳಿಕೋರರನ್ನು ಬಂಧಿಸಿದ್ದಾರೆ.

ಉಗ್ರ ದಾಳಿಯಲ್ಲಿ ಬಲಿಯಾದವ ಎಲ್ಲಾ ವ್ಯಕ್ತಿಗಳ ಗುರುತು ಮತ್ತು ಮೂಲಗಳ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಹೈದರಾಬಾದ್ ಮೂಲದ ಅಹ್ಮದ್ ಇಕ್ಬಾಲ್ ಜಹಾಂಗೀರ್ ಎಂಬುವವರು ಈ ದಾಳಿಯಲ್ಲಿ ಮೃತಪಟ್ಟಿರುವುದು ದೃಢಪಟ್ಟಿದೆ.

ಘಟನೆಯ ಬಗ್ಗೆ ಏನಾದರೂ ಮಾಹಿತಿ ಬೇಕಿದ್ದರೆ ಅಥವಾ ಮಾಹಿತಿ ನೀಡಬೇಕಿದ್ದರೆ 021803899 ಮತ್ತು 021850033 ನಂಬರ್ಗಳನ್ನು ಸಂಪರ್ಕಿಸುವಂತೆ ಭಾರತದ ರಾಯಭಾರಿಗಳು ಮನವಿ ಮಾಡಿಕೊಂಡಿದ್ದಾರೆ

ಶಾಂತಿಪ್ರಿಯ ದೇಶವೆನಿಸಿರುವ ನ್ಯೂಝಿಲೆಂಡ್ನಲ್ಲಿ ಇಂಥ ಘಟನೆಗಳು ತೀರಾ ಅಪರೂಪ. ಕಡಿಮೆ ಜನಸಂಖ್ಯೆ ಇರುವ ಈ ದೇಶದಲ್ಲಿ ಸುಮಾರು 2 ಲಕ್ಷದಷ್ಟು ಭಾರತೀಯ ಮೂಲದ ಜನರು ವಾಸಿಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!