janadhvani

Kannada Online News Paper

ಭಿನ್ನಮತ : ಪ್ರಭಾವಿ ನಾಯಕರಿಬ್ಬರು ಬಿಜೆಪಿಯಿಂದ ಕಾಂಗ್ರೆಸ್ ನತ್ತ

ಈ ವರದಿಯ ಧ್ವನಿಯನ್ನು ಆಲಿಸಿ


ಕಲಬುರಗಿ, ಮಾ.16- ಜಿಲ್ಲಾ ಬಿಜೆಪಿ ಘಟಕದಲ್ಲಿ ಭಿನ್ನಮತ ಭುಗಿಲೆದ್ದಿದ್ದು, ಬಿಜೆಪಿ ತೊರೆಯಲು ಇಬ್ಬರು ಪ್ರಭಾವಿ ನಾಯಕರಾದ ರಾಜ್ಯ ಬಿಜೆಪಿ ಉಪಾಧ್ಯಕ್ಷ, ಮಾಜಿ ಸಚಿವ ಬಾಬುರಾವ್ ಚೌಹ್ಹಾಣ್ ಮತ್ತು ಗುರುಮಿಟ್ಕಲ್ ಬಿಜೆಪಿ ಮುಖಂಡ ಶ್ಯಾಮರಾವ್ ಪ್ಯಾಟಿ ಬಿಜೆಪಿ ತೊರೆಯಲು ಮುಂದಾಗಿದ್ದಾರೆ ಎನ್ನಲಾಗಿದೆ.

ಲೋಕಸಭೆ ಚುನಾವಣಾ ಕಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಲೇ ಇದೆ. ಒಂದೆಡೆ ಕಾಂಗ್ರೆಸ್ ನಾಯಕರು ಪಕ್ಷ ಬಿಟ್ಟು ಬಿಜೆಪಿ ಸೇರುತ್ತಿದ್ದರೆ, ಇನ್ನೊಂದೆಡೆ ಬಿಜೆಪಿ ನಾಯಕರು ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ.

ಬಿಜೆಪಿ ಬಿಡಲು ಮುಂದಾಗಿರುವ ಶ್ಯಾಮರಾವ್ ಪ್ಯಾಟಿ ಅವರು ಈ ಹಿಂದೆ ಗುರುಮಿಟ್ಕಲ್ ಕ್ಷೇತ್ರದಿಂದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸಿ, 5 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದರು. ಆದರೆ, ಬಿಜೆಪಿ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಸಿಗದ ಹಿನ್ನೆಲೆಯಲ್ಲಿ ಪಕ್ಷ ತೊರೆಯಲು ಇದೀಗ ಅವರು ನಿರ್ಧಾರ ಮಾಡಿದ್ದಾರೆ.

ಮಾರ್ಚ್ 18ರಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಬಾಬುರಾವ್ ಚೌಹ್ಹಾಣ್ ಹಾಗೂ ಶ್ಯಾಮರಾವ್ ಪ್ಯಾಟಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಮಾವೇಶ ಕಲಬುರಗಿ ನಗರದ ಎನ್‍ವಿ ಕಾಲೇಜು ಮೈದಾನದಲ್ಲಿ ನಡೆಯಲಿದ್ದು, ಆಪರೇಷನ್ ಹಸ್ತದ ಮೂಲಕ ಮತ್ತಷ್ಟು ಬಿಜೆಪಿ ನಾಯಕರನ್ನು ತನ್ನತ್ತ ಸೆಳೆಯಲು ಕಾಂಗ್ರೆಸ್ ಯತ್ನಿಸುತ್ತಿದೆ.

error: Content is protected !! Not allowed copy content from janadhvani.com