janadhvani

Kannada Online News Paper

ನವದೆಹಲಿ(ಮಾ. 07): ಇಡೀ ದೇಶವೇ ಎದುರು ನೋಡುತ್ತಿರುವ ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಈ ಚುನಾವಣೆಯನ್ನು 7-8 ಹಂತಗಳಲ್ಲಿ ನಡೆಸಲು ಸಾಧ್ಯತೆ ಇದೆ ಎಂದು ಖಾಸಗಿ ಚಾನಲೊಂದು ವರದಿ ಮಾಡಿದೆ.

ಚುನಾವಣಾ ಆಯೋಗವು ಈ ವಾರಾಂತ್ಯದಲ್ಲಿ ಅಥವಾ ಮುಂದಿನ ವಾರದಂದು ಚುನಾವಣಾ ದಿನಾಂಕಗಳನ್ನು ಪ್ರಕಟಿಸುವ ಸಾಧ್ಯತೆ ಇದೆ. ಮಂಗಳವಾರದೊಳಗೆ ಘೋಷಣೆಯಾಗಬಹುದು. ಚುನಾವಣೆ ಆಯೋಜನೆಗೆ ಬೇಕಾದ ಎಲ್ಲಾ ರೀತಿಯ ತಯಾರಿ ಬಹುತೇಕ ಮುಕ್ತಾಯವಾಗಿದೆ ಎನ್ನಲಾಗಿದೆ. ಚುನಾವಣಾ ಸಮಿತಿಯು ಈ ತಯಾರಿಯ ಮೇಲ್ವಿಚಾರಣೆ ನಡೆಸುತ್ತಿದೆ.

ಲೋಕಸಭೆ ಚುನಾವಣೆಯ ಜೊತೆಗೆ ಆಂಧ್ರಪ್ರದೇಶ, ಒಡಿಶಾ, ಸಿಕ್ಕಿಮ್ ಮತ್ತು ಅರುಣಾಚಲಪ್ರದೇಶದ ವಿಧಾನಸಭೆ ಚುನಾವಣೆಗಳೂ ಒಟ್ಟಿಗೆ ನಡೆಯಲಿದೆ. ಅವಧಿಗೆ ಮುನ್ನವೇ ವಿಧಾನಸಭೆ ವಿಸರ್ಜನೆಗೊಂಡಿರುವ ಜಮ್ಮು-ಕಾಶ್ಮೀರದ ಚುನಾವಣೆಯೂ ಕೂಡ ಇದೇ ವೇಳೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಚುನಾವಣೆ ಸಮಿತಿಯು ಕಳೆದ ಕೆಲ ವಾರಗಳ ಹಲವು ಪರಿಶೀಲನಾ ಸಭೆಗಳನ್ನು ನಡೆಸಿ ಸಜ್ಜುಗೊಳಿಸುತ್ತಿದೆ. ದೇಶಾದ್ಯಂತ 10 ಲಕ್ಷದಷ್ಟು ಮತಗಟ್ಟೆಗಳಿಗೆ ಬೇಕಾದ ಇವಿಎಂಗಳು ಹಾಗೂ ಪೇಪರ್ ಟ್ರೇಲ್ ಮೆಷೀನ್ಗಳನ್ನು ಸಿದ್ಧ ಮಾಡಿಟ್ಟುಕೊಳ್ಳಲಾಗಿದೆ.

ಕಳೆದ ಬಾರಿಯ ಲೋಕಸಭೆ ಚುನಾವಣೆಯು 9 ಹಂತಗಳಲ್ಲಿ ನಡೆದಿತ್ತು. 2004 ಮತ್ತು 2009ರಲ್ಲಿ 4 ಹಾಗೂ 5 ಹಂತಗಳಲ್ಲಿ ಚುನಾವಣೆಗಳು ನಡೆದಿದ್ದವು. ಈ ಬಾರಿ 7 ಅಥವಾ 8 ಹಂತಗಳಲ್ಲಿ ಚುನಾವಣೆಯನ್ನು ನಡೆಸುವ ಸಾಧ್ಯತೆ ಇದೆ ಎನ್ನುತ್ತವೆ ಮೂಲಗಳು.

error: Content is protected !! Not allowed copy content from janadhvani.com