ಜಮಾಅತೇ ಇಸ್ಲಾಮಿ ನಿಷೇಧ:ಬಿಜೆಪಿ ನಾಯಕನ ಹೇಳಿಕೆಗೆ ಒಮರ್‌ ಅಬ್ದುಲ್ಲಾ ಖಂಡನೆ

ಜಮ್ಮು: ನಿಷೇಧಿತ ಜಮಾತ್‌–ಇ–ಇಸ್ಲಾಮಿ ಸಂಘಟನೆಯನ್ನು ಬೆಂಬಲಿಸಿದರೆ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರನ್ನು ಬಂಧಿಸಬೇಕು ಎಂದು ಬಿಜೆಪಿ ನಾಯಕ ಕವೀಂದರ್‌ ಗುಪ್ತಾ ಹೇಳಿಕೆ ನೀಡಿದ್ದಾರೆ.

ಕಣಿವೆ ರಾಜ್ಯದ ಮಾಜಿ ಉಪ ಮುಖ್ಯಮಂತ್ರಿಯೂ ಆಗಿರುವ ಗುಪ್ತಾ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಾ, ‘ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿದ್ದ ಕಾರಣ ಬಾಂಗ್ಲಾದೇಶ, ಅಫ್ಘಾನಿಸ್ತಾನ ಹಾಗೂ ಇನ್ನೂ ಕೆಲವು ದೇಶಗಳಲ್ಲಿ ಮದರಸಗಳನ್ನು ಮುಚ್ಚಲಾಗಿದೆ. ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಹರಡಲು ಸಹಕರಿಸಿದರೆ ಇಲ್ಲಿಯೂ ಮದರಸಗಳನ್ನ ನಿಷೇಧಿಸಲಾಗುವುದು. ಒಂದು ವೇಳೆ ಮೆಹಬೂಬಾ ಅವರು ಜಮಾತ್‌–ಇ–ಇಸ್ಲಾಮಿ ಸಂಘಟನೆ ಬೆಂಬಲಿಸಿದರೆ, ಅವರನ್ನೂ ಬಂಧಿಸಲೇಬೇಕು’ ಎಂದಿದ್ದರು.

ಈ ಹೇಳಿಕೆಯನ್ನು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್‌ ಕಾನ್ಫರೆನ್ಸ್‌ ಮುಖ್ಯಸ್ಥ ಒಮರ್‌ ಅಬ್ದುಲ್ಲಾ ಖಂಡಿಸಿದ್ದಾರೆ. ಮದರಸ ವಿಚಾರವಾಗಿ ಗುಪ್ತಾ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿ, ‘ಆರ್‌ಎಸ್‌ಎಸ್‌ ಶಾಖೆಗಳೂ ಗುಪ್ತಾ ಅವರಂತಹ ಕೆಟ್ಟ ಬುದ್ಧಿಯ ದೊಡ್ಡ ಮನುಷ್ಯರನ್ನು ಸೃಷ್ಟಿಸುತ್ತಿವೆ’ ಎಂದು ಕಿಡಿಕಾರಿದ್ದಾರೆ.

ಜಮಾತ್‌ ಸಂಘಟನೆಯು ಕಾನೂನುಬಾಹಿರ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದ ಆರೋಪದ ಮೇಲೆ ಕೇಂದ್ರ ಸರ್ಕಾರವು ಐದು ವರ್ಷಗಳ ಅವಧಿಗೆ ನಿಷೇಧಿಸಿತ್ತು. ಈ ನಿರ್ಧಾರವನ್ನು ಇಲ್ಲಿನ ಪ್ರಮುಖ ರಾಜಕೀಯ ಪಕ್ಷಗಳಾದ ಪಿಡಿಪಿ ಹಾಗೂ ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷಗಳು ವಿರೋಧಿಸಿದ್ದವು.

ಫೆಬ್ರುವರಿ 28ರಂದು ಕೈಗೊಂಡ ತನ್ನ ನಿರ್ಧಾರವನ್ನು ಕೇಂದ್ರ ಸರ್ಕಾರವು ಇನ್ನೊಮ್ಮೆ ಪರಿಶೀಲಿಸಬೇಕು ಎಂದು ಒಮರ್‌ ಅಬ್ದುಲ್ಲಾ ಮನವಿಮಾಡಿಕೊಂಡಿದ್ದರು. ಜಮಾತ್‌ ಸಂಘಟನೆಯನ್ನು ನಿಷೇಧಿಸಿರುವುದರಿಂದ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಮೆಹಬೂಬಾ ಎಚ್ಚರಿಕೆ ನೀಡಿದ್ದರು.

Leave a Reply

Your email address will not be published. Required fields are marked *

error: Content is protected !!