janadhvani

Kannada Online News Paper

ಈ ವರದಿಯ ಧ್ವನಿಯನ್ನು ಆಲಿಸಿ


ಕನ್ಯಾಕುಮಾರಿ: ‘ರಾಜಕೀಯ ಕಾರಣಗಳಿಗಾಗಿ ದೇಶವನ್ನು ದುರ್ಬಲಗೊಳಿಸುವಂತಹ ಕೆಲಸ ಮಾಡಬೇಡಿ’ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ವಿರೋಧಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಇಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಮೋದಿ ಮುಂದೆ ಅಧಿಕಾರದಲ್ಲಿರದಿರಬಹುದು. ಆದರೆ, ಭಾರತ ಇದ್ದೇ ಇರುತ್ತದೆ. ನಿಮ್ಮ ರಾಜಕೀಯವನ್ನು ಬಲಪಡಿಸುವುದಕ್ಕಾಗಿ ದೇಶ ದುರ್ಬಲಗೊಳಿಸುವುದು ಬೇಡ’ ಎಂದು ಹೇಳಿದರು.

‘ಭಯೋತ್ಪಾದನೆ ವಿರುದ್ಧದ ನಮ್ಮ ಹೋರಾಟವನ್ನು ಕೆಲವು ರಾಜಕೀಯ ಪಕ್ಷಗಳು ಅನುಮಾನದಿಂದ ನೋಡುತ್ತಿವೆ. ಇಂಥವರೇ ಪಾಕಿಸ್ತಾನ ಪರವಾದ ಹೇಳಿಕೆಯನ್ನು ನೀಡುತ್ತಿದ್ದಾರೆ. ಇಂತಹ ಹೇಳಿಕೆಗಳು ಪಾಕಿಸ್ತಾನದ ಸಂಸತ್‌ ಮತ್ತು ರೇಡಿಯೊ ಚಾನೆಲ್‌ಗಳಲ್ಲಿ ಪ್ರಸಾರವಾಗುತ್ತಿವೆ. ನೀವು ನಮ್ಮ ಸೇನಾ ಪಡೆಗಳನ್ನು ಅನುಮಾನದಿಂದ ನೋಡುತ್ತಿರುವಿರೋ ಅಥವಾ ಪಾಕಿಸ್ತಾನಕ್ಕೆ ಸಹಾಯ ಮಾಡುತ್ತಿರುವಿರೋ ಎಂದು ನಾನು ಅವರನ್ನು ಕೇಳಲು ಬಯಸುತ್ತೇನೆ’ ಎಂದು ಅವರು ಹೇಳಿದರು.

ಭ್ರಷ್ಟರ ವಿರುದ್ಧ ಕ್ರಮ: ‘ಕೆಲವರು ಭ್ರಷ್ಟಾಚಾರ ನಡೆಸುವುದನ್ನೇ ಜೀವನದ ವಿಧಾನವನ್ನಾಗಿಸಿಕೊಂಡಿದ್ದಾರೆ. ನಾವು ಅದಕ್ಕೆ ಅವಕಾಶ ಕೊಡುವುದಿಲ್ಲ. ಭ್ರಷ್ಟಾಚಾರ ವಿರುದ್ಧ ನಮ್ಮ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತದೆ. ಅದರ ಜೊತೆಗೆ, ಪ್ರಾಮಾಣಿಕವಾಗಿ ತೆರಿಗೆ ಪಾವತಿಸುವವರಿಗೆ ಉತ್ತೇಜನ ನೀಡುವ ಕೆಲಸವನ್ನೂ ಮಾಡುತ್ತೇವೆ’ ಎಂದು ಮೋದಿ ಹೇಳಿದರು.

‘ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಪ್ರಧಾನಮಂತ್ರಿ ಕಿಸಾನ್‌ ಯೋಜನೆಯಡಿ ರೈತರಿಗೆ ₹7.5 ಲಕ್ಷ ಕೋಟಿ ನೀಡಿದ್ದೇವೆ’ ಎಂದು ತಿಳಿಸಿದರು.

‘ಕರಾವಳಿ ರಾಜ್ಯವಾದ ತಮಿಳುನಾಡಿನಲ್ಲಿ ಮೀನುಗಾರಿಕಾ ವಲಯ ಬಲಿಷ್ಠವಾಗಿದೆ. ಹೀಗಾಗಿ, ಮೀನುಗಾರಿಕೆಗಾಗಿ ಹೊಸ ಇಲಾಖೆಯನ್ನು ಪ್ರಾರಂಭಿಸುವ ಮೂಲಕ ಎನ್‌ಡಿಎ ಸರ್ಕಾರವು ಮೀನುಗಾರರನ್ನು ಗೌರವಿಸುವ ಕೆಲಸ ಮಾಡಿದೆ’ ಎಂದು ಹೇಳಿದರು.

‘ದೇಶದ ಮೊದಲ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ತಮಿಳುನಾಡಿನವರು ಎಂಬುದು ಹೆಮ್ಮೆಯ ಸಂಗತಿ’ ಎಂದು ಅವರು ಹೇಳಿದರು.

error: Content is protected !! Not allowed copy content from janadhvani.com