ಉಗ್ರರ ದಾಳಿಯನ್ನು ಖಂಡಿಸಿ ಫೆ.19ಕ್ಕೆ ಕರ್ನಾಟಕ ಬಂದ್

ಬೆಂಗಳೂರು(ಫೆ. 16): ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಮೊನ್ನೆ ಸಂಭವಿಸಿದ ಭೀಕರ ಉಗ್ರ ದಾಳಿ ಘಟನೆಯನ್ನು ಖಂಡಿಸಿ ಕನ್ನಡ ಪರ ಸಂಘಟನೆಗಳು ಫೆ. 19ಕ್ಕೆ ಕರ್ನಾಟಕ ಬಂದ್ಗೆ ಕರೆ ಕೊಟ್ಟಿವೆ.

ಇವತ್ತು ನಡೆದ ಸುದ್ದಿಗೋಷ್ಠಿಯಲ್ಲಿ ಕನ್ನಡ ಪರ ಹೋರಾಟಗಾರ ಹಾಗೂ ಕನ್ನಡ ಸಂಘಟನೆಗಳ ಒಕ್ಕೂಟದ ಮುಖ್ಯಸ್ಥ ವಾಟಾಳ್ ನಾಗರಾಜ್ ಈ ವಿಚಾರ ತಿಳಿಸಿದ್ದಾರೆ. ಫೆಬ್ರುವರಿ 19ರಂದು ಬೆಳಗ್ಗೆ 6ರಿಂದ ಸಂಜೆ 6ರವರೆಗೆ 12 ಗಂಟೆಗಳ ಬಂದ್ ಆಚರಿಸುವಂತೆ ವಿವಿಧ ಸಂಘಟನೆಗಳು ಕರೆ ನೀಡಿವೆ.
ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಡೆಯುವ ಈ ಬಂದ್ಗೆ ವಿವಿಧ ಕನ್ನಡಪರ ಸಂಘಟನೆಗಳ ಜೊತೆಗೆ ಕೆಎಸ್ಆರ್ಟಿಸಿಯ ಕಾರ್ಮಿಕ ಸಂಘಟನೆ ಕೂಡ ಬೆಂಬಲ ನೀಡಿದೆ.

ಫೆ. 19, ಮಂಗಳವಾರದಂದು ಬೆಳಗ್ಗೆ 10ಗಂಟೆಗೆ ಟೌನ್ಹಾಲ್ನಿಂದ ಫ್ರೀಡಂ ಪಾರ್ಕ್ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು. ಅಂದು ಹೋಟೆಲ್, ಖಾಸಗಿ ಬಸ್ಗಳು, ಶಿಕ್ಷಣ ಸಂಸ್ಥೆಗಳು, ಪೆಟ್ರೋಲ್ ಬಂಕ್ಗಳು, ಬಿಡಿಎ, ನಗರಸಭೆ, ಐಟಿ ಬಿಟಿ ಇತ್ಯಾದಿಗಳು ಮುಚ್ಚಬೇಕು. ಇಲ್ಲದಿದ್ದರೆ ಆಗುವ ಪರಿಣಾಮಕ್ಕೆ ತಾವು ಹೊಣೆಯಲ್ಲ ಎಂದು ವಾಟಾಳ್ ನಾಗರಾಜು ಎಚ್ಚರಿಕೆ ನೀಡಿದ್ದಾರೆ.
ವಾಟಾಳ್ ನಾಗರಾಜು ಇಂದು ನಡೆಸಿದ ಸುದ್ದಿಗೋಷ್ಠಿಯಲ್ಲಿ ಸಾ.ರಾ. ಗೋವಿಂದು, ಕಮಾರ್ ಮೊದಲಾದ ಕನ್ನಡಪರ ಹೋರಾಟಗಾರರು ಪಾಲ್ಗೊಂಡಿದ್ದರು. ಸುದ್ದಿಗೋಷ್ಠಿಗೆ ಮುನ್ನ ಹೋರಾಟಗಾರರು ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಯೋಧರ ಮೇಲೆ ನಡೆದಿರುವ ದಾಳಿಗೆ ಇಡೀ ಭಾರತ ದೇಶವೇ ಕಣ್ಣೀರಿಡುತ್ತಿದೆ. ಇದಕ್ಕೆ ಪ್ರತೀಕಾರ ತೀರಿಸಲೇಬೇಕು. ರಾಯಭಾರಿಯನ್ನು ವಾಪಸ್ ಕರೆಸಿಕೊಂಡ ಮಾತ್ರಕ್ಕೆ ಪ್ರಯೋಜನವಿಲ್ಲ. ಅಮೆರಿಕವು ಬಿನ್ ಲಾಡೆನ್ ಅವರನ್ನು ಹುಡುಕಿ ನುಗ್ಗಿ ಹೊರತೆಗೆದಂತೆ ಭಾರತೀಯರು ಉಗ್ರರನ್ನು ಹುಡುಕಿ ಹೊಡೆಯಬೇಕು. ಪ್ರಧಾನಿ ಅವರು ಪ್ರತೀಕಾರದ ಮಾತನಾಡಿದ್ದಾರೆ. ನಮ್ಮ ಕಣ್ಣೀರು ಆರುವ ಮುನ್ನವೇ ಪ್ರತೀಕಾರ ಆಗಲೇಬೇಕು ಎಂದು ವಾಟಾಳ್ ನಾಗರಾಜ್ ಆಗ್ರಹಿಸಿದರು.

Leave a Reply

Your email address will not be published. Required fields are marked *

error: Content is protected !!