janadhvani

Kannada Online News Paper

ಮರ್ಹೂಮ್ ತಾಜುಲ್ ಉಲಮಾ ರ ಬಗ್ಗೆ ರಹೀಮ್ ಟೀಕೆಯವರು ಬರೆದಿದ್ದ ಲೇಖನ ವೈರಲ್

ಈ ವರದಿಯ ಧ್ವನಿಯನ್ನು ಆಲಿಸಿ


ಮಂಗಳೂರು.ಫೆ.16: ನಮ್ಮನ್ನಗಲಿದ ರಹೀಮ್ ಟೀಕೆಯವರು 2017, ಜುಲೈ 2ರಂದು ತನ್ನ ಬ್ಲಾಗ್ ಹಾಗೂ ಫೇಸ್ಬುಕ್ ಪೇಜ್ ನಲ್ಲಿ ಸಯ್ಯಿದ್ ತಾಜುಲ್ ಉಲಮಾ ರ ಬಗ್ಗೆ ಬರೆದಿದ್ದ ಈ ಲೇಖನವು ಸಾಮಾಜಿಕ ತಾಣದಲ್ಲಿ ವೈರಲಾಗಿದೆ.

ಅಲ್ಪ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅಬ್ದುಲ್ ರಹೀಂ ಟೀಕೆಯವರು ಮಂಗಳೂರಿನ ತಮ್ಮ ಸ್ವಗೃಹದಲ್ಲಿ ಫೆ.15 ಶುಕ್ರವಾರ ನಿಧನರಾದರು.

ನೆನಪಿನ ಬುತ್ತಿಯಿಂದ..ಹೀಗೊಬ್ಬ ಮಹಾತ್ಮರ ಸನ್ನಿಧಿಯಲ್ಲಿ

ಇದು 1999ನೇ ಇಸವಿಯ ಡಿಸೆಂಬರ್ ತಿಂಗಳ ಒಂದು ವಿಷಯ. ಇಡೀ ಜಗತ್ತೇ ನೂತನ ಸಹಸ್ರಮಾನವನ್ನು ಕಾತರದಿಂದ, ಸಂಭ್ರಮದಿಂದ ಎದುರು ನೋಡುತ್ತಿದ್ದ ಸಮಯವದು. ಕಂಪ್ಯೂಟರ್, ಇಂಟರ್ನೆಟ್, ವೆಬ್ ನಮ್ಮ ದೈನಂದಿನ ಬದುಕಿಗೆ ಲಗ್ಗೆಯಿಡಲು ಹೊಂಚುಹಾಕಿ ಹವಣಿಸುತ್ತಿದ್ದ ಕಾಲಘಟ್ಟ. ನನ್ನ ಕೆಲವೊಂದು ಆಪ್ತಮಿತ್ರರು ಜೊತೆ ಸೇರಿ, ನನ್ನನ್ನೂ ಸೇರಿಸಿಕೊಂಡು, ಆಗ ತಾನೇ ಪ್ರಾಯೋಗಿಕವಾಗಿ ಪ್ರಾರಂಭಿಸಿದ್ದ ಇಂಟರ್ನೆಟ್ ಮಾಧ್ಯಮವೊಂದರ ಮೂಲಕ ಬಿತ್ತರಿಸಲು ನೂತನ ಸಹಸ್ರಮಾನದ ಸಂದೇಶಕ್ಕಾಗಿ ಜಿಲ್ಲೆಯ ವಿವಿಧ ಧರ್ಮಗಳ ಪ್ರಧಾನ ಧರ್ಮಗುರುಗಳನ್ನು ಸಂಪರ್ಕಿಸುವ ಅಭಿಯಾನವನ್ನು ಆರಂಭಿಸಿದ್ದರು. ಇಸ್ಲಾಂ ಧರ್ಮದ ಪರವಾಗಿ ಸಂದೇಶ ಕೊಡಬೇಕಾಗಿದ್ದ, ಆಗಿನ ಮಂಗಳೂರಿನ ಖಾಝಿಯಾಗಿದ್ದ ಮರಹೂಮ್ ಕೋಟ ಅಬ್ದುಲ್ ಖಾದರ್ ಮುಸ್ಲಿಯಾರ್‌ರವರು ಉಮ್ರಾ ಯಾತ್ರೆಯಲ್ಲಿದ್ದಾರೆಂದು ತಿಳಿದು ಬಂದುದರಿಂದ ಅವರ ಬದಲಿಗೆ ಉಳ್ಳಾಲದ ಖಾಝಿಯಾಗಿದ್ದ ಮರಹೂಮ್ ಸೈಯ್ಯದ್ ಅಬ್ದುಲ್ ರಹ್‌ಮಾನ್ ಬುಖಾರಿ ತಂಙಲ್ ರವರ ಸಂದೇಶ ಪಡಕೊಳ್ಳುವುದೆಂದು ತೀರ್ಮಾನಿಸಿದ್ದೆವು.

ಆದರೆ, ’ಬೆಕ್ಕಿಗೆ ಗಂಟೆ ಕಟ್ಟುವವರಾರು’ ಎಂಬ ಪ್ರಶ್ನೆ ಎದುರಾಯಿತು. ಏಕೆಂದರೆ, ಸಾಮಾನ್ಯವಾಗಿ ನಮ್ಮ ನಡುವೆ ಪ್ರಚಲಿತವಿದ್ದ ವದಂತಿಯಂತೆ ಉಳ್ಳಾಲದ ಖಾಝಿಯವರು ಮಹಾ ಕೋಪಿಸ್ಠ, ಗರ್ವಿ ಮತ್ತು ಇಂತಹ ಬೇಡಿಕೆಗಳಿಗೆ ಸಾಮಾನ್ಯವಾಗಿ ಸ್ಪಂದಿಸದವರು. ಕಡೆಗೆ, ಅಳೆದೂ ತೂಗಿ ಅವರ ಭೇಟಿಗೆ ಒಂದು ಸಮಯವನ್ನು ನಿಗದಿಪಡಿಸುವ ಜವಾಬ್ದಾರಿಯನ್ನು ನನಗೆ ಹೊರಿಸಲಾಯಿತು.

ಅದರಂತೆ, ನಾನು ನನಗೊಂದಿಷ್ಟು ಪರಿಚಿತರಾಗಿದ್ದ, ಉಳ್ಳಾಲ ಸೈಯ್ಯದ್ ಮದನಿ ದರ್ಗಾದ ಅಂದಿನ ಅಧ್ಯಕ್ಷರಾಗಿದ್ದ ದಿವಂಗತ ಇಬ್ರಾಹೀಮ್ ಹಾಜಿಯವರಿಗೊಂದು ಕರೆಮಾಡಿ, ಉದ್ದೇಶ ತಿಳಿಸಿ, ಮಾನ್ಯ ತಂಙಲ್‌ರವರ ಸಂದರ್ಶನಕ್ಕೆ ಒಂದು ಅವಕಾಶ ಮಾಡಿ ಕೊಡಬೇಕೆಂದು ವಿನಂತಿಸಿದೆ. ಕೂಡಲೇ ಒಪ್ಪದ ಅವರು ಒಂದಿಷ್ಟು ಸಮಜಾಯಿಸಿಕೆಯ ನಂತರ ಮರುದಿನ ಸಂಜೆಯ (ಅಸರ್) ನಮಾಜಿಗೆ ಸರಿಯಾಗಿ ಉಳ್ಳಾಲ ದರ್ಗಾ ಮಸೀದಿಗೆ ಬರುವಂತೆ ತಿಳಿಸಿದರು.

ಸಾಮಾನ್ಯವಾಗಿ ತಂಙಲ್‌ರವರು ನಮಾಜು ಮುಗಿದ ನಂತರ ಒಂದು ಹತ್ತು ನಿಮಿಷ ಮಸೀದಿಯಲ್ಲಿ ಕುಳಿತಿರುತ್ತಿದ್ದು, ಅದರೊಳಗೆ ನಮ್ಮ ಸಂದರ್ಶನ ಮುಗಿಸಬೇಕೆಂದೂ, ಬರಲು ಒಂದೈದು ನಿಮಿಷ ತಡವಾದರೂ ಅವರನ್ನು ಮತ್ತೆ ಕಾಣಲು ಅಸಾಧ್ಯವಾದ್ದರಿಂದ ಕ್ಲಪ್ತ ಸಮಯಕ್ಕೆ ಸರಿಯಾಗಿ ಬಂದು ತಲುಪಬೇಕೆಂದೂ ಎಚ್ಚರಿಸಿದ್ದರು.

ಅದರಂತೆ ಮರುದಿನ ಅಸರ್ ನಮಾಜಿಗೆ ಸುಮಾರು ಮುಕ್ಕಾಲು ಗಂಟೆ ಮುಂಚಿತವಾಗಿಯೇ ನಾವು ನಾಲ್ಕು ಜನ, ಅಂದರೆ, ಹಿರಿಯ ವಿದ್ವಾಂಸ ಮೌಲವಿ ಅಬುಲ್ ಹಸನ್, ಕೃಷಿ ವಿಜ್ಞಾನ ಸಂಸ್ಥೆಯಲ್ಲಿ ವಿಜ್ಞಾನಿಯಾಗಿದ್ದ ಡಾ. ಫಝಲ್, ಪ್ರಸ್ತುತ ಗ್ಲೋಬಲ್ ಟಿ.ವಿ. ಯ ಮುಖ್ಯಸ್ಥರಾಗಿರುವ ಎನ್. ವಿ. ಪಾವ್ಲೋಸ್ ಮತ್ತು ನಾನು, ನನ್ನ ಕಾರಿನಲ್ಲೇ ಉಳ್ಳಾಲಕ್ಕೆ ಹೊರಟೆವು. ಮಂಗಳೂರಲ್ಲಿ ನಾವಿದ್ದ ಸ್ಥಳದಿಂದ ಉಳ್ಳಾಲಕ್ಕೆ ಹೆಚ್ಚೆಂದರೆ ಹದಿನೈದು ನಿಮಿಷಗಳ ದಾರಿ. ಇನ್ನೇನು ಉಳ್ಳಾಲ ಸಂಕ ಸಮೀಪಿಸಿತೆನ್ನುವಷ್ಟರಲ್ಲಿ ದುರದೃಷ್ಟವಶಾತ್ ನಮ್ಮ ಕಾರಿನ ಚಕ್ರ ಕೈಕೊಟ್ಟಿತು. ಯಾವತ್ತೂ ಕಾರಿನ ಡಿಕ್ಕಿಯಲ್ಲಿರುತ್ತಿದ್ದ ಸ್ಟೆಪ್ನಿ ಟಯರು ಕೂಡಾ ಅಂದು ಕಾಣೆ. ಅಂತೂ, ಇಂತೂ ಟಯರು ಸರಿ ಪಡಿಸಿ ಉಳ್ಳಾಲ ಮಸೀದಿಗೆ ಬಂದು ತಲುಪಿದಾಗ ಅಸರ್ ನಮಾಜು ಮುಗಿದು ತಂಙಲ್‌ರವರು ಅದಾಗಲೇ ಹೊರಟು ತಮ್ಮ ಕೋಣೆ ಸೇರಿಯಾಗಿತ್ತು.

ಮಸೀದಿಯ ಬಾಗಿಲಲ್ಲೇ ನಿಂತಿದ್ದ ಇಬ್ರಾಹಿಮ್ ಹಾಜಿ ಸಾಹೇಬರು ನಮ್ಮನ್ನು ಕಂಡವರೇ ಕೆಂಡಮಂಡಲವಾಗಿ, ನಮಗೆ ಬಾಯಿ ತೆರೆಯಲೂ ಅವಕಾಶಕೊಡದೆ, ನಮ್ಮನ್ನು ಸಾಕಷ್ಟು ಜಾಲಾಡಿದರು. ಅವರೊಂದಿಷ್ಟು ಸಮಾಧಾನವಾದಂತೆ ಕಂಡು ಬಂದ ನಂತರ, ನಾವು ಬರಲು ತಡವಾದ ಕಾರಣ ತಿಳಿಸಿ, ತಂಙಲ್‌ರವರನ್ನು ಅವರ ಕೋಣೆಯಲ್ಲಿ ಕಾಣಲು ಸಾಧ್ಯವೇ ಎಂದು ವಿಚಾರಿಸಿದಾಗ ಅವರು “ನಿಮಗೆ ಅವರ ವಿಷಯ ಗೊತ್ತಿಲ್ಲ, ಈಗೇನಾದರೂ ಕೋಣೆಯ ಬಾಗಿಲು ತಟ್ಟಿದರೆ ಅವರು ನಿಮ್ಮನ್ನು ಸಿಗಿದು ಹಾಕಿಯಾರು” ಎಂದು ಹೇಳಿ, ಜಾಗ ಕಾಲಿಮಾಡಿ ಎಂಬಂತೆ ಕಣ್ಣಿನಲ್ಲೇ ಸಂಜ್ಞೆಯನ್ನೂ ಮಾಡಿದರು. “ಸರಿ, ನಾವು ನಮಾಜು ಮುಗಿಸಿ ಹಿಂದೆ ಹೋಗುತ್ತೇವೆ, ಇನ್ನೊಮ್ಮೆ ನಿಮ್ಮೊಡನೆ ಕೇಳಿ ಬರುತ್ತೇವೆಂದು ಹೇಳಿ” ಅವರ ಉತ್ತರಕ್ಕೂ ಕಾಯದೆ, ಮಿತ್ರ ಪಾವ್ಲೋಸರನ್ನು ಅಲ್ಲಿಯೇ ಬಿಟ್ಟು ನಾವು ಮೂವರು ಮಸೀದಿಯ ಒಳಗೆ ಹೋದೆವು.

ನಮಾಜು ಮುಗಿಸಿ ಹೊರಗೆ ಬರುವಾಗ ಅಧ್ಯಕ್ಷ ಸಾಹೇಬರು ಹೋಗಿಯಾಗಿತ್ತು. ನಾನಾಗಲೇ- ‘ಏನು ಬೇಕಾದರೂ ಆಗಲಿ, ಅವರು ಬಯ್ಯಲಿ, ಹೊಡೆಯಲಿ ಅಥವಾ ಹಾಜೀ ಸಾಹೇಬರು ಹೇಳಿದಂತೆ ಸಿಗಿದೇ ಹಾಕಲಿ, ನಾನಂತೂ ಇಂದು ತಂಙಲ್‌ರವನ್ನು ಕಂಡೇ ಹೋಗುವುದೆಂದು’ ನಿಶ್ಚಯಿಸಿದ್ದೆ. ನಾನಿದನ್ನು ನನ್ನ ತಂಡಕ್ಕೆ ತಿಳಿಸಿದಾಗ ಅವರು ಒಂದಿಷ್ಟು ಅರ್ಧ ಮನಸ್ಸಿನಿಂದಲೇ ಒಪ್ಪಿದರು. ಮಸೀದಿಯಿಂದ ಸುಮಾರು 20 ಅಡಿ ದೂರದಲ್ಲಿ ತಂಙಲ್‌ರವರ ವಿಶ್ರಾಂತಿ ಗೃಹ. ಅಬುಲ್ ಹಸನ್ ರವರನ್ನು ಮುಂದಿಟ್ಟು ಕೊಂಡು ಹೋಗಿ, ನಾನು ಮೆಲ್ಲನೆ ಕೋಣೆಯ ಕದ ತಟ್ಟಿದೆ. ಎರಡನೇ ಬಾರಿ ತಟ್ಟಿದಾಗ ’ಯಾರದು?’ಎಂದು ಕೇಳುತ್ತಾ ಸ್ವತಃ ತಂಙಲ್ ರವರೇ ಬಂದು ಕದ ತೆರೆದರು. ನೀವು ಯಾರು, ಏತಕ್ಕೆ ಬಂದಿದ್ದೀರಿ ಎಂದೇನೂ ವಿಚಾರಿಸದೆ ’ಬನ್ನಿ ಒಳಗೆ’ ಎಂದು ಆತ್ಮೀಯವಾಗಿಯೇ ಒಳಗೆ ಕರೆದರು. ಇದು ನಮ್ಮೆಲ್ಲರ ನಿರೀಕ್ಷೆಗೆ ವಿರುದ್ದವಾದ ಮೊದಲ ಆಶ್ಚರ್ಯವಾಗಿತ್ತು.

ನಾವು ಅವರ ಕೋಣೆಯ ಒಳಗೆ ಕಾಲಿಟ್ಟು, ಕೋಣೆಯನ್ನೊಮ್ಮೆ ಅವಲೋಕಿಸಿದಾಗ ನಾನು ಬೆರಗಾಗಿ ಹೋದೆ. ಹವಾ ನಿಯಂತ್ರಿತ ಕೋಣೆಯ ಹಂಸತೂಲಕಲ್ಪದ ಮೇಲೆ, ಮಕ್ಮಲ್ ಬಟ್ಟೆಯಿಂದ ಹೊದೆದ ದಪ್ಪದ ಉಣ್ಣೆಯ ಹಾಸಿಗೆಯಲ್ಲಿ ವಿರಾಜಮಾನರಾಗಿ ಕೈಗೊಬ್ಬ, ಕಾಲಿಗೊಬ್ಬ ಆಳುಗಳೊಂದಿಗೆ ಸುಖದ ಸುಪ್ಪತ್ತಿಗೆಯಲ್ಲಿ ಬದುಕುತ್ತಿದ್ದಾರೆಂದು ಅವರ ವಿರೋಧಿಗಳಾದ ನನ್ನ ಕೆಲವು ಮಿತ್ರರಿಂದ ನಾನು ಕೇಳಿ ತಿಳಿದಿದ್ದ ಆ ತಂಙಲ್ ಎಲ್ಲಿ? ಇಲ್ಲಿ ಅತ್ಯಂತ ಸಾಮಾನ್ಯವಾದ ಒಂದು ಕೋಣೆಯ ಸಣ್ಣ ಹೊರ ಚಾವಡಿಯಲ್ಲಿ, ನೆಲದಲ್ಲಿ ಚಾಪೆ ಹಾಸಿ, ಅದರ ಮೇಲೆ ಹಾಸಿಗೆಯೂ ಅಲ್ಲದ ಒಂದು ದಪ್ಪ ಚದ್ದರ ಮತ್ತು ತಲೆದಿಂಬು, ತನ್ನ ತಲೆ ಭಾಗ ಮತ್ತು ಅಕ್ಕ ಪಕ್ಕ ತುಂಬಾ ಬೃಹತ್ ಗ್ರಂಥಗಳ ರಾಶಿಯನ್ನೇ ಹರಡಿ ಸಾಮಾನ್ಯರಲ್ಲಿ ಸಾಮಾನ್ಯನಾಗಿ ಬದುಕುತ್ತಿರುವ ಈ ಸಾತ್ವಿಕ ಮಹಾ ಪುರುಷರೆಲ್ಲಿ? ಒಳಗಿನ ಕೋಣೆಯತ್ತ ನಾನು ದೃಷ್ಟಿ ಹಾಯಿಸಿದಾಗ ಅಲ್ಲೊಂದು ಮಂಚವೇನೋ ಇತ್ತು, ಆದರೆ ಅದರ ಮೇಲೆದ್ದ ಹಳೆಯ ಪೆಟ್ಟಿಗೆಗಳು, ಸಾಮಾನುಗಳ ರಾಶಿ ಆ ಮಂಚವನ್ನು ಕನಿಷ್ಠ ಒಂದು ದಶಕದಿಂದಾದರೂ ಯಾರೂ ಉಪಯೋಗಿಸಿಲ್ಲವೆಂದು ಸಾಕ್ಷಿ ಹೇಳುವಂತಿತ್ತು.

“ನಿಮಗೆ ನೆಲದಲ್ಲಿ ಚಾಪೆಯ ಮೇಲೆ ಕುಳಿತು ಕೊಳ್ಳುವ ಅಭ್ಯಾಸವಿದೆಯೋ ಅಥವಾ ಕುರ್ಚಿ ತರಿಸಲೋ” ಎಂದು ಕೇಳಿದ ತಂಙಲ್ ರವರ ಮಾತು ನನ್ನನ್ನು ಮತ್ತೆ ವಾಸ್ತವ ಲೋಕಕ್ಕೆ ಎಳೆದು ತಂದಿತು. ನಾವು ಅಭ್ಯಾಸವಿದೆಯೆಂದು ಹೇಳಿ ಅವರ ಚಾಪೆಯ ಸುತ್ತ ನೆಲದಲ್ಲಿಯೇ ಮತ್ತೊಂದು ಚಾಪೆ ಹಾಸಿ ಕುಳಿತು ಕೊಂಡೆವು. “ಈಗ ನಿಮ್ಮ ಪರಿಚಯ ಮತ್ತು ನೀವು ಇಲ್ಲಿಗೆ ಬಂದ ಉದ್ದೇಶ ಹೇಳಿ.” ತಂಙಲ್ ಆದೇಶಿಸಿದರು. ಮೌಲವಿ ಅಬುಲ್ ಹಸನ್ ಪ್ರಥಮವಾಗಿ ತಮ್ಮನ್ನು ಪರಿಚಯಿಸಿ ಆ ಮೇಲೆ ಸಂಕ್ಷಿಪ್ತವಾಗಿ ನಮ್ಮ ಉಳಿದ ಮೂವರ ಪರಿಚಯ ಮಾಡಿ ಮುಗಿಸಿದರು. ಅಬುಲ್ ಹಸನ್‌ರವರು ನನ್ನನ್ನು ಪರಿಚಯಿಸುವಾಗ, ನನ್ನ ದಿವಂಗತ ತಂದೆ ಮತ್ತು ತಂಙಲ್‌ರವರಿಗಿದ್ದ ಸಂಬಂಧದ ಅರಿವು ನನಗಿದ್ದ ಕಾರಣ, ನಾನು ಉದ್ದೇಶಪೂರ್ವಕವಾಗಿಯೇ ನನ್ನ ತಂದೆಯವರ ಹೆಸರನ್ನು ಅಲ್ಲಿ ಪ್ರಸ್ಥಾಪಿಸಿರಲಿಲ್ಲ.

ಇನ್ನು ಕೆಲವೇ ದಿನಗಳಲ್ಲಿ ಹೊಸ ಸಹಸ್ರಮಾನ ಆರಂಭವಾಗಲಿರುವುದರಿಂದ ಇಂಟರ್ನೆಟ್‌ನಲ್ಲಿ, ಇತರ ಧರ್ಮಗಳ ವಿದ್ವಾಂಸರ ಜೊತೆ ಮಾನ್ಯ ತಂಙಲ್ ರವರ ಸಂದೇಶವನ್ನೂ ಬಿತ್ತರಿಸಲು ನಾವು ಉದ್ದೇಶಿಸಿ ಅವರ ಬಳಿಗೆ ಬಂದಿರುವುದಾಗಿ ಅಬುಲ್ ಹಸನ್‌ರವರು ನಾವು ಬಂದಿರುವ ಉದ್ದೇಶ ವಿವರಿಸಿದರು. ನಮ್ಮ ಮಾತನ್ನು ಕಿವಿಗೊಟ್ಟು ಆಲಿಸಿದ ತಂಙಲ್- “ನೀವೆಲ್ಲಾ ಬುದ್ಧಿವಂತರು. ಹೊಸ ತಲೆಮಾರಿನವರು. ನನಗೆ ಕಂಪ್ಯೂಟರ್, ಇಂಟರ್ನೆಟ್ ಬಗ್ಗೆ ಜ್ಞಾನವಾದರೂ ಎಲ್ಲಿದೆ? ಅದರಲ್ಲೂ ಇಂಟರ್ನೆಟ್ ಅಂದರೆ ಬಾಹ್ಯಾಕಾಶದಲ್ಲಿ ನಿಲ್ಲಿಸಿರುವ ಒಂದು ಅಗೋಚರ ಪೆಟ್ಟಿಗೆಯಲ್ಲವೇ? ಲೋಕದ ಯಾವ ಮೂಲೆಯಲ್ಲಿ ಕುಳಿತು ಯಾರು, ಯಾವಾಗ ಬೇಕಾದರೂ ತೆರೆದು ಓದಬಹುದಾದಂತಹ ಒಂದು ಸಾಧನವಲ್ಲವೇ? ಅದರಲ್ಲಿ ದಾಖಲಾದ ನನ್ನ ಸಂದೇಶ ನಮ್ಮ ನಡುವೆಯೇ ಇರುವ ಹಲವಾರು ವಿಭಿನ್ನ ಪಂಗಡಗಳ ವಿದ್ವಾಂಸರುಗಳಿಗೆ ಒಂದು ವೇಳೆ ಅಪಥ್ಯವಾದರೆ, ಮತ್ತಷ್ಟು ಒಡಕಿಗೆ ಕಾರಣವಾದೀತೇ ಎಂದು ನನಗೆ ಭಯವಿದೆ..” ಎಂದು ಹೇಳಿ ಆ ಹಿರಿಯ ಜೀವ ಒಂದು ಕ್ಷಣ ಮೌನವಾಯಿತು. ಮತ್ತೆ ಮಾತು ಮುಂದುವರಿಸಿದ ಅವರು, ಅಬುಲ್ ಹಸನರನ್ನು ಉದ್ದೇಶಿಸಿ, “ಸರಿ ಹೇಗೂ ಬಂದಿದ್ದೀರಿ, ಬರೆದುಕೊಳ್ಳಿ” ಎಂದು ಹೇಳಿ ತನ್ನ ಸಂದೇಶ ಹೇಳಲಾರಂಭಿಸಿದರು.

(ನನ್ನ ಮೇಲೆ ಅಚ್ಚಳಿಯದ ಪ್ರಭಾವ ಬೀರಿದ ತಂಙಲ್ ರವರು ಅಂದು ಜಗತ್ತಿಗೆ ಕೊಟ್ಟ ಕಿರು ಸಂದೇಶ ನನಗೆ ನೆನಪಿರುವಷ್ಟು ಮಟ್ಟಿಗೆ ಈ ಕೆಳಗೆ ನಾನು ದಾಖಲಿಸಿದ್ದೇನೆ.)

“ಮನುಷ್ಯನು ಯಾವುದೇ ಧರ್ಮಕ್ಕೆ ಸೇರಿದವನಾಗಿರಲಿ, ಅವನು ತನ್ನ ಧರ್ಮವನ್ನು ಅರಿಯುವಷ್ಟೇ ಮುಖ್ಯವಾಗಿ ಮನುಷ್ಯ ಧರ್ಮವನ್ನೂ, ತನ್ನ ಸುತ್ತಮುತ್ತಲಿನ ಸಮಾಜವನ್ನೂ, ವಸ್ತುಸ್ಥಿತಿಯನ್ನೂ ಅರಿತಿರಬೇಕು. ಮನುಷ್ಯನು ಮನುಷ್ಯನಾಗಿ ಬದುಕುವುದು, ತನ್ನ ನೆರೆಕೆರೆಯವರೊಂದಿಗೆ ಬೆರೆತು ಶಾಂತಿ ಮತ್ತು ಸೌಹಾರ್ದತೆಯೊಂದಿಗೆ ಬದುಕಿ ಬಾಳುವುದು, ಇತರರನ್ನು ನೆಮ್ಮದಿಯಿಂದ ಬಾಳಲು ಬಿಡುವುದು ಮನುಷ್ಯ ಧರ್ಮ ಮಾತ್ರವಲ್ಲ ಕಾಲದ ಬೇಡಿಕೆಯೂ ಆಗಿದೆ. ನಾವೆಲ್ಲಾ ಒಬ್ಬ ದೇವನ ಸೃಷ್ಟಿಗಳಾಗಿದ್ದೇವೆ. ನಮ್ಮಲ್ಲಿ ಯಾರೂ ಮೇಲು-ಕೀಳೆಂಬುವುದಿಲ್ಲ. ಸತ್ಯವನ್ನು ಅರಿತು, ಸತ್ಯಮಾರ್ಗದಲ್ಲಿ ಬದುಕಿ, ಇಲ್ಲಿಂದ ತೆರಳುವವನೇ ನಿಜವಾದ ವಿಜಯಶಾಲಿ. ಹೊಸ ಸಹಸ್ರಮಾನ ಜಗತ್ತಿನ ಸಮಸ್ಥ ಮಾನವಕೋಟಿಗೆ ಶಾಂತಿ ಸಮೃದ್ಧಿಯನ್ನು ನೀಡಲಿ. ಅಲ್ಲಾಹನು ನಮ್ಮೆಲ್ಲರನ್ನೂ ಅನುಗ್ರಹಿಸಲಿ.”

ತಂಙಲ್ ರವರು ಮಳಯಾಲದಲ್ಲಿ ಹೇಳಿದ್ದನ್ನು ಅಬುಲ್ ಹಸನ್‌ರವರು ಕನ್ನಡದಲ್ಲಿ ಬರೆದು ಕೊಂಡರು. ಅದನ್ನು ಅವರಿಂದ ಕೇಳಿ ಪಡೆದ ತಂಙಲ್‌ರವರು, ಕನ್ನಡ ಬಲ್ಲ ತನ್ನ ಶಿಷ್ಯನೊಬ್ಬನನ್ನು ಕರೆದು ಓದಿ ಕೇಳಿಸಿ, ಅದರ ಕೊನೆಯಲ್ಲಿ ತನ್ನ ಸಹಿಯನ್ನು ಹಾಕಿದರು ಮತ್ತು ಅದರ ಒಂದು ಪ್ರತಿಯನ್ನು ತಮಗೆ ತಲುಪಿಸಿಕೊಡುವಂತೆ ಕೇಳಿಕೊಂಡರು.

ಸಂದೇಶವೇನೋ ದೊರಕಿತು. ಈಗ ನಮಗೆ ಅವರ ಒಂದು ಭಾವಚಿತ್ರ ಬೇಕಾಗಿತ್ತು. ಅವರೊಡನೆ ಕೇಳಿದಾಗ ಅಲ್ಲಿಯೇ ಇದ್ದ ಕೆಲವು ಹಳೆಯ ಪೆಟ್ಟಿಗೆಗಳನ್ನು ತೋರಿಸಿ- ನೋಡಿ, ಇದಾವುದೋ ಒಂದು ಪೆಟ್ಟಿಗೆಯಲ್ಲಿ ನಾನು ಕಳೆದ ವರ್ಷ ಕೈರೋ ಸಮ್ಮೇಳನಕ್ಕೆ ಹೋದಾಗ ತೆಗೆದ ಒಂದು ಫೋಟೋ ಇದೆ. ಅದು ಚೆನ್ನಾಗಿತ್ತು. ನೀವು ಹುಡುಕಿ ತೆಗೆದು ನನಗೆ ತೋರಿಸಿರಿ’ ಎಂದು ಅವರು ಹೇಳಿದ್ದೇ ತಡ, ಪಾವ್ಲೋಸ್ ಒಬ್ಬರನ್ನು ಬಿಟ್ಟು ನಾವು ಮೂವರೂ ಅಜ್ಜನ ಪೆಟ್ಟಿಗೆಯನ್ನು ಅಧಿಕಾರಯುತವಾಗಿ ಮುತ್ತಿ ಜಪ್ತಿ ಮಾಡುವ ಮಕ್ಕಳಂತೆ ಪೆಟ್ಟಿಗೆ ತೆರೆದು ಹುಡುಕಾಡತೊಡಗಿದೆವು. ನಾನು ತೆರೆದದ್ದು ಒಂದು ಹಳೇ ಕಾಲದ ದೊಡ್ಡದಾದ ಪೆಟ್ಟಿಗೆ. ಅದರಲ್ಲಿ ತುಂಬಾ ಕಂದು, ಬಿಳಿ, ಕಾಕಿ ಬಣ್ಣದ ಕವರುಗಳು. ಆ ಕವರುಗಳಲ್ಲಿ 5, 10, 20, 50, 100 ರ ನೋಟುಗಳು. ನಾನು ಆಶ್ಚರ್ಯದಿಂದ ಕಣ್ಣಗಲಿಸಿ ಇದೇನೆಂದು ಕೇಳಿದಾಗ ತಂಙಲ್ ರವರು ಹೇಳಿದ್ದು- “ನಾನು ಮದುವೆ, ಮುಂಜಿ ಮುಂತಾದ ಸಮಾರಂಭಗಳಿಗೆ ಹೋದಾಗ, ಜನರು ನನಗೆ ಪ್ರೀತಿಯಿಂದ ಕಾಣಿಕೆ ಕೊಡುತ್ತಾರೆ. ನಿರಾಕರಿಸಿದರೆ ಅವರು ನೊಂದುಕೊಳ್ಳುತ್ತಾರೆ. ಅದಕ್ಕಾಗಿ ನಾನದನ್ನು ಸ್ವೀಕರಿಸಿ ತಂದು ಈ ಪೆಟ್ಟಿಗೆಯಲ್ಲಿ ಹಾಕಿಡುತ್ತೇನೆ.” ಮಗುವಿನ ಮುಗ್ಧತೆ ಮತ್ತು ತುಂಟತನ ಅವರ ಅವರ ಮುಖದಲ್ಲಿ ಲಾಸ್ಯವಾಡುತ್ತಿತ್ತು.

ಕೊನೆಗೂ ಕೈರೋ ಸಮ್ಮೇಳನದ ಪ್ರತಿನಿಧಿ ಭಾವಚಿತ್ರ ನಮಗೆ ಸಿಕ್ಕಿತು. ಅವರಂದಂತೆ ನಿಜಕ್ಕೂ ಆ ಭಾವಚಿತ್ರ ಸುಂದರವಾಗಿತ್ತು. ನಮ್ಮ ಕೆಲಸ ಮುಗಿದ ಕೂಡಲೇ ಆ ಚಿತ್ರ ಮತ್ತು ತಾವು ಸಹಿ ಹಾಕಿರುವ ಆ ಸಂದೇಶ ಪತ್ರದ ಪ್ರತಿಯೊಂದನ್ನು ತಮಗೆ ತಲುಪಿಸಬೇಕೆಂದು ಮತ್ತೊಮ್ಮೆ ನಮಗೆ ನೆನಪಿಸಲು ಅವರು ಮರೆಯಲಿಲ್ಲ.

ನಮಗೆ ಗೊತ್ತಿಲ್ಲದೆಯೇ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಆ ಮಹಾತ್ಮರ ಜತೆ ನಾವು ಕಳೆದಿದ್ದೆವು. ಈಗ ಅಲ್ಲಿ ಗಾಂಭಿರ್ಯತೆಯ ಜಾಗದಲ್ಲಿ ಆತ್ಮೀಯತೆ ನೆಲೆಸಿತ್ತು. ಇದೀಗ ಸಂಪೂರ್ಣ ಸಂತೃಪ್ತರಾಗಿ ಹೊರಡುವ ಸಮಯ. ಹೊರಡಲು ಅವರ ಅನುಮತಿ ಯಾಚಿಸಿದಾಗ ನಮ್ಮ ಜೊತೆ ಅವರೂ ಎದ್ದು ನಿಂತರು. ಪ್ರತಿಯೊಬ್ಬರ ತಲೆ ಸವರಿ ಓದಿ ಊದಿ ಹರಸಿದರು, ನನ್ನ ಸರದಿ ಬಂದಾಗ ನಾನು ಅವರ ಕಿವಿಯಲ್ಲಿ ಮೆಲ್ಲನೆ ಉಸುರಿದೆ- “ತಂಙಲೇ, ನಾನು ಬಜಪೆಯ ಬಾವಾ ಅಬ್ದುಲ್ ಖಾದರ್‌ ಹಾಜೀಯವರ ಮಗ..” ನಾನು ಇಷ್ಟು ಹೇಳಿದ್ದೇ ತಡ ಕಣ್ಣರಳಿಸಿ ಕೇಳಿದರು- “ಏನು? ನೀನು ಬಜಪೆಯ ಕಂಟ್ರಾಕ್ಟರ್ ಬಾವಾನ ಮಗನೇ?” ಒಂದು ಕ್ಷಣ ಮೌನವಾಗಿ ಮತ್ತೆ ಮುಂದುವರಿಸಿ ಹೇಳಿದರು- “ಬಾವಾ ನನ್ನ ಆತ್ಮೀಯ ಗೆಳೆಯ. ನನಗಿಂತ ಪ್ರಾಯದಲ್ಲಿ ಸಣ್ಣವ. ನಾವಿಬ್ಬರೂ ಒಟ್ಟಿಗೆ ಕಿತಾಬು ಓದಿದವರು. ಉಳ್ಳಾಲಕ್ಕೆ ಬಂದಾಗಲೆಲ್ಲಾ ನನ್ನನ್ನು ಬಂದು ಕಾಣುತ್ತಿದ್ದ. ಖುತುಬ್ ಮಹಮ್ಮದ್ ಮುಸ್ಲಿಯಾರ್ ಬಂದಿದ್ದಾಗ ನಾನು ನಿಮ್ಮ ಮನೆಗೆ ಬಂದು ಕೆಲವು ದಿನ ತಂಗಿದ್ದೆ. ಅವನು ಹೋಗಿ ಹತ್ತು ವರುಷವಾಗಿರಬೇಕಲ್ಲಾ?” (ನಿಜ, ನನ್ನ ತಂದೆಯವರು ನಿಧನರಾದದ್ದು1990ನೇ ಇಸವಿಯಲ್ಲಿ) ಮಾತನಾಡುತ್ತಿದ್ದಂತೆಯೇ ಅವರು ಭಾವುಕರಾದರು. ನನ್ನನ್ನು ಆಲಿಂಗಿಸಿಕೊಂಡರು. ಅವರ ಮುಖ ನನ್ನ ಬಲ ಭುಜದ ಮೇಲಿತ್ತು. ನನ್ನ ಕೊರಳ ಭಾಗ ಒಂದಿಷ್ಟು ಒದ್ದೆಯಾದಂತೆ ಭಾಸವಾಯಿತು. ಹೌದು, ಅವರ ಕಣ್ಣುಗಳು ಹನಿಗೂಡಿದ್ದವು. ನನ್ನದು ಕೂಡಾ.

ಆ ನಂತರ ಮಾನ್ಯ ತಂಙಲ್ ರವರು ಸುಮಾರು 15 ವರ್ಷಗಳ ಕಾಲ ಬದುಕಿದ್ದರೂ ನಾನು ಮತ್ತೆಂದೂ ಅವರನ್ನು ಭೇಟಿಯಾಗುವ ಪ್ರಯತ್ನ ಮಾಡಲಿಲ್ಲ, ಏಕೆಂದರೆ, ನಾನಂದು ಹೃದಯದಲ್ಲಿ ತುಂಬಿಕೊಂಡು ಬಂದ ಉಳ್ಳಾಲದ ಆ ನಿಜವಾದ ’ಸಂತ’ನ ಮುಗ್ಧ, ಅತ್ಮೀಯ ಚಿತ್ರವನ್ನು ಯಾವುದೇ ಕಾರಣಕ್ಕೆ ಕಳೆದು ಕೊಳ್ಳಲು ನಾನು ಸಿದ್ಧನಿರಲಿಲ್ಲ.

ಬಹುಮಾನ್ಯ ಗುರುಶ್ರೇಷ್ಟರೇ, ತಮ್ಮನ್ನು ನಾನು ನನ್ನ ಹೃದಯದಲ್ಲಿ ಕೊನೆಯವರೆಗೂ ಅಂದು ಕಂಡ ಅದೇ ರೀತಿ ಉಳಿಸಿಕೊಳ್ಳುತ್ತೇನೆ. ಅಲ್ಲಾಹನು ತಮಗೆ ಸ್ವರ್ಗದಲ್ಲಿ ಅತ್ಯುನ್ನತ ಸ್ಥಾನವನ್ನು ಕರುಣಿಸಿ ಗೌರವಿಸಲಿ. ಆಮೀನ್. ಯಾ ರಬ್ಬುಲ್ ಆಲಮೀನ್.

✍ರಹೀಮ್ ಟೀಕೆ

ಬ್ಲಾಗ್👉🏻

https://teekayblogs.blogspot.com/2017/07/blog-post.html?m=1

ಫೇಸ್ಬುಕ್ 👉🏻

https://m.facebook.com/story.php?story_fbid=452534555127884&id=100011140303142

ಖ್ಯಾತ ಲೇಖಕ ರಹೀಂ.ಟ.ಕೆ.ನಿಧನ

error: Content is protected !! Not allowed copy content from janadhvani.com