janadhvani

Kannada Online News Paper

ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ

ಬಳಕುಂಜೆ: ಇಲ್ಲಿನ ಗ್ರಾಮಸ್ಥರ ಒಗ್ಗಟ್ಟು ಹಾಗೂ ಬಾಂಧವ್ಯಕ್ಕೆ ಸಾಕ್ಷಿಯಾಗಿ, ಮುಸ್ಲಿಂ ಬಾಂಧವರ ಈದ್ ಮಿಲಾದ್ ಹಬ್ಬದ ಅಂಗವಾಗಿ ಹಿಂದೂ, ಕ್ರಿಶ್ಚಿಯನ್ ಹಾಗೂ ಮುಸ್ಲಿಂ ಸಮುದಾಯದವರು ಒಂದಾಗಿ ಸೇರಿ ಸಾಮರಸ್ಯದ ಸೌಹಾರ್ದ ಸಭೆಯನ್ನು ದಿನಾಂಕ 25-08-2026ರ ಮಂಗಳವಾರದಂದು ಯಶಸ್ವಿಯಾಗಿ ಆಯೋಜಿಸಿದರು.

ಗ್ರಾಮದ ಶ್ರೀ ವಿಠೋಭ ರಖುಮಾಯಿ ಭಜನಾ ಮಂದಿರದಲ್ಲಿ ಜರುಗಿದ ಸೌಹಾರ್ದ ಸಭೆಯಲ್ಲಿ, ಬಳಕುಂಜೆ ಸಂತ ಪೌಲರ ದೇವಾಲಯದ ಧರ್ಮಗುರುಗಳಾದ ವಂ. ಪಾವ್ಲ್ ಸಿಕ್ವೇರಾ ಅವರು ಮಾತನಾಡಿ, ಬಳಕುಂಜೆ ಗ್ರಾಮದಲ್ಲಿ ನೆಲೆಯಾಗಿರುವ ಪರಸ್ಪರ ಪ್ರೀತಿ, ಸಾಮರಸ್ಯ ಹಾಗೂ ಒಗ್ಗಟ್ಟನ್ನು ಶ್ಲಾಘಿಸಿದರು.

“ನಮ್ಮೆಲ್ಲರ ನರಗಳಲ್ಲಿ ಹರಿಯುವ ರಕ್ತ ಒಂದೇ, ನಾವು ಕುಡಿಯುವ ಜಲ ಒಂದೇ ಹಾಗೂ ಉಸಿರಾಡುವ ಗಾಳಿಯೂ ಒಂದೇ ಆಗಿದೆ. ಹಾಗಿರುವಾಗ ನಮ್ಮಲ್ಲಿ ಜಾತಿ-ಮತದ ಭೇದಭಾವದ ಮಾತುಗಳಿಗೆ ಆಸ್ಪದವೇ ಇಲ್ಲ. ನಮ್ಮ ಈ ಗ್ರಾಮವೇ ಇದಕ್ಕೆ ಜೀವಂತ ಉದಾಹರಣೆಯಾಗಿದೆ,” ಎಂದು ಅವರು ಅಭಿಪ್ರಾಯಪಟ್ಟರು.

ಸಭೆಯಲ್ಲಿ ಮಸೀದಿಯ ಧರ್ಮಗುರುಗಳಾದ ನೌಶಾದ್ ಸಅದಿ, ನೆಲ್ಸನ್ ಲೋಬೋ, ಮಮತಾ ಡಿ. ಪೂಂಜಾ ಹಾಗೂ ಡಾ. ಫ್ರೀಡಾ ರೋಡ್ರಿಗಸ್ ಅವರುಗಳು ಸಂದರ್ಭೋಚಿತವಾಗಿ ಮಾತನಾಡಿ ಹಬ್ಬದ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಮೌಲಾನಾ ಮುಸ್ತಫಾ ಸಖಾಫಿ, ಮಲ್ಲಿಕಾ ಶೆಟ್ಟಿ, ರೋಷನ್ ಡಿಸೋಜ, ಪ್ರಸಾದ್ ಶೆಟ್ಟಿ, ವನಿತಾ, ಮುಹಮ್ಮದಾಲಿ, ಅಬ್ದುಲ್ ಖಾದರ್, ಅಬ್ದುರ್ರಹ್ಮಾನ್ ಹಾಜಿ ಮತ್ತು ಇಸ್ಮಾಯಿಲ್ (ಇಚ್ಛಾಲಿ) ಉಪಸ್ಥಿತರಿದ್ದರು.

ಶಂಸುದ್ದೀನ್ ಬಳಕುಂಜೆ ಪ್ರಸ್ತಾವಿಕವಾಗಿ ಎಲ್ಲರನ್ನೂ ಸ್ವಾಗತಿಸಿದರು. ದಿನಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರೆ, ಫಾರೂಕ್ ಹಾಜಿ ಕರ್ನಿರೆ ಕೊನೆಯಲ್ಲಿ ಧನ್ಯವಾದ ಸಮರ್ಪಿಸಿದರು.

ಇದನ್ನೂ ಓದಿರಿ...