janadhvani

Kannada Online News Paper

ಎಸ್‌ವೈಎಸ್‌ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ

ಮದುವೆಗಳಲ್ಲಿ ಇಸ್ಲಾಂ ಧರ್ಮದ ಆಶಯಕ್ಕೆ ವಿರುದ್ಧವಾದ ಅದ್ದೂರಿತನವನ್ನು ಕೈಬಿಟ್ಟು, ಸರಳ ಮತ್ತು ಮಾದರಿ ವಿವಾಹಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶವನ್ನು ಈ ಅಭಿಯಾನ ಹೊಂದಿದೆ

ಪುತ್ತೂರು: ಮದುವೆ ಸಮಾರಂಭಗಳಲ್ಲಿ ಕಂಡುಬರುತ್ತಿರುವ ಆಧಾರ್ಮಿಕ ಆಚರಣೆಗಳು ಮತ್ತು ದುಂದುವೆಚ್ಚಗಳ ವಿರುದ್ಧ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸುನ್ನೀ ಯುವಜನ ಸಂಘ (ಎಸ್‌ವೈಎಸ್) ಹಮ್ಮಿಕೊಂಡಿರುವ ‘ಮಾದರಿ ಮದುವೆ ಅಭಿಯಾನ’ ಹಾಗೂ ‘ಜನಜಾಗೃತಿ ಜಾಥಾ’ ದ ಸಮಾರೋಪ ಸಮ್ಮೇಳನವು ಮೇ 2ರಂದು (ನಾಳೆ) ಪುತ್ತೂರಿನಲ್ಲಿ ನಡೆಯಲಿದೆ.

ಈ ಅಭಿಯಾನದ ಅಂಗವಾಗಿ ಕಳೆದ ಕೆಲವು ಸಮಯದಿಂದ ಸಮಾಜದ ವಿವಿಧ ಸ್ತರಗಳಲ್ಲಿ ವ್ಯಾಪಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. “ಮದುವೆ ಎಂಬ ಪವಿತ್ರ ಕಾರ್ಯವು ಇಂದು ಧರ್ಮಬಾಹಿರ ಕಾರ್ಯಗಳು ಮತ್ತು ದುಂದುವೆಚ್ಚಗಳಿಂದಾಗಿ ತನ್ನ ಪಾವಿತ್ರ್ಯವನ್ನು ಕಳೆದುಕೊಳ್ಳುತ್ತಿದೆ. ಇದು ಆರ್ಥಿಕವಾಗಿ ಅತ್ಯಂತ ಭಾರವಾಗಿ ಮಾರ್ಪಟ್ಟಿದ್ದು, ಸಮಾಜದಲ್ಲಿ ಅನೇಕರು ಸಾಲದ ಅಡಕತ್ತರಿಯಲ್ಲಿ ಸಿಲುಕುವಂತಾಗಿದೆ ಅಥವಾ ಮದುವೆಯಾಗುವುದಕ್ಕೇ ಹಿಂಜರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ”. ಜಮಾಅತ್ ನಾಯಕರು, ಧರ್ಮ ಗುರುಗಳು, ಯುವಕ-ಯುವತಿಯರು, ಹೆತ್ತವರು ಮತ್ತು ಪೋಷಕರು ಒಳಗೊಂಡು ಮದುವೆಯ ಪಾವಿತ್ರ್ಯತೆ ಹಾಗೂ ಸರಳತೆಯ ಬಗ್ಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಲಾಗಿದೆ ಎಂದು ಸಂಘಟಕರು ವಿವರಿಸಿದ್ದಾರೆ.

ಕಾರ್ಯಕ್ರಮದ ವಿವರ:
ಕಾಲ್ನಡಿಗೆ ಜಾಥಾ: ಮೇ 2ರಂದು ಸಂಜೆ 4 ಗಂಟೆಗೆ ಪುತ್ತೂರಿನ ದರ್ಬೆಯಿಂದ ಕಿಲ್ಲೆ ಮೈದಾನದವರೆಗೆ ಬೃಹತ್ ಕಾಲ್ನಡಿಗೆ ಜಾಥಾ ನಡೆಯಲಿದೆ.
ಸಮಾರೋಪ ಸಮ್ಮೇಳನ: ಸಂಜೆ 5:30ಕ್ಕೆ ಕಿಲ್ಲೆ ಮೈದಾನದ ‘ಖುರ್ರತುಸ್ಸಾದಾತ್ ವೇದಿಕೆ’ಯಲ್ಲಿ ಅಭಿಯಾನದ ಸಮಾರೋಪ ಸಮ್ಮೇಳನ ಜರುಗಲಿದೆ.
ಮದುವೆಗಳಲ್ಲಿ ಇಸ್ಲಾಂ ಧರ್ಮದ ಆಶಯಕ್ಕೆ ವಿರುದ್ಧವಾದ ಅದ್ದೂರಿತನವನ್ನು ಕೈಬಿಟ್ಟು, ಸರಳ ಮತ್ತು ಮಾದರಿ ವಿವಾಹಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶವನ್ನು ಈ ಅಭಿಯಾನ ಹೊಂದಿದೆ. ಈ ಕಾರ್ಯಕ್ರಮದಲ್ಲಿ ಪ್ರಮುಖ ಧಾರ್ಮಿಕ ನಾಯಕರು ಮತ್ತು ಗಣ್ಯರು ಭಾಗವಹಿಸಲಿದ್ದಾರೆ.

ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ. ಅಬೂಬಕ್ಕರ್‌ ಮುಸ್ಲಿಯಾರ್ ಕಾಂತಪುರಂ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ. ಸುನ್ನೀ ಜಂಇಯತುಲ್ ಉಲಮಾ ಕರ್ನಾಟಕ ರಾಜ್ಯಾಧ್ಯಕ್ಷ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಮಸ್ತ ಉಲಮಾ ಒಕ್ಕೂಟದ ಕಾರ್ಯದರ್ಶಿ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಮತ್ತು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಗೌರವ ಡಾಕ್ಟರೇಟ್ ಪದವಿಗೆ ಭಾಜನರಾದ ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ ಡಾ. ಹರೇಕಳ ಹಾಜಬ್ಬ ಅವರನ್ನು ಸನ್ಮಾನಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

ಇದನ್ನೂ ಓದಿರಿ...