ಕುವೈತ್ ಸಿಟಿ: ಕುವೈತ್‌ನ ವಿದ್ಯುತ್ ಮತ್ತು ನೀರು ಸಂಸ್ಕರಣಾ ಘಟಕವೊಂದರ ಮೇಲೆ ಇರಾನ್ ನಡೆಸಿದ ದಾಳಿಯಲ್ಲಿ ಭಾರತೀಯ ಮೂಲದ ಉದ್ಯೋಗಿಯೊಬ್ಬರು ಸಾವನ್ನಪ್ಪಿದ್ದಾರೆ. ದಾಳಿಯಿಂದಾಗಿ ಪ್ಲಾಂಟ್‌ನ ಸರ್ವಿಸ್ ಕಟ್ಟಡವೊಂದು ತೀವ್ರವಾಗಿ ಜಖಂಗೊಂಡಿದೆ ಎಂದು ವರದಿಯಾಗಿದೆ. ಘಟನೆಯ ಬೆನ್ನಲ್ಲೇ ತುರ್ತು ತಂಡಗಳು ಮತ್ತು ತಾಂತ್ರಿಕ ತಜ್ಞರು ಸ್ಥಳಕ್ಕೆ ಧಾವಿಸಿ ದುರಸ್ತಿ ಕಾರ್ಯ ಆರಂಭಿಸಿದ್ದು, ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದೆ.
ಮೃತಪಟ್ಟ ಭಾರತೀಯ ಕಾರ್ಮಿಕನ ಬಗ್ಗೆ ಹೆಚ್ಚಿನ ವಿವರಗಳು ಇನ್ನು ಲಭ್ಯವಾಗಿಲ್ಲ. ಈ ದುರಂತಕ್ಕೆ ಕುವೈತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ತೀವ್ರ ಸಂತಾಪ ವ್ಯಕ್ತಪಡಿಸಿದೆ. ಮೃತರ ಕುಟುಂಬಕ್ಕೆ ಅತೀವ ದುಃಖ ಮತ್ತು ಸಾಂತ್ವನಗಳನ್ನು ತಿಳಿಸಿರುವ ರಾಯಭಾರ ಕಚೇರಿಯು, ಅಗತ್ಯವಿರುವ ಎಲ್ಲಾ ನೆರವು ನೀಡಲು ಕುವೈತ್ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿದೆ ಎಂದು ತಿಳಿಸಿದೆ.
ಸೇವೆಗಳಿಗೆ ಅಡ್ಡಿಯಿಲ್ಲ: ವಿದ್ಯುತ್ ಮತ್ತು ನೀರು ಸರಬರಾಜು ಜಾಲಕ್ಕೆ ಯಾವುದೇ ಅಡ್ಡಿಯಾಗಿಲ್ಲ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಮುನ್ನೆಚ್ಚರಿಕೆ ಕ್ರಮ: ಪ್ಲಾಂಟ್‌ನ ಕಾರ್ಯಕ್ಷಮತೆಯನ್ನು ಕಾಪಾಡಿಕೊಳ್ಳಲು ಸಚಿವಾಲಯವು ಅಗತ್ಯ ಕ್ರಮಗಳನ್ನು ಕೈಗೊಂಡಿದೆ.
ಸಾರ್ವಜನಿಕರಿಗೆ ಮನವಿ: ಸಾರ್ವಜನಿಕರು ಶಾಂತವಾಗಿರಬೇಕು ಮತ್ತು ಯಾವುದೇ ಸುಳ್ಳು ಸುದ್ದಿಗಳನ್ನು ನಂಬಬಾರದು ಎಂದು ಸಚಿವಾಲಯ ವಿನಂತಿಸಿದೆ.
ಮಾಹಿತಿಗಳನ್ನು ಕೇವಲ ಅಧಿಕೃತ ಮೂಲಗಳಿಂದ ಮಾತ್ರ ಪಡೆದುಕೊಳ್ಳಬೇಕು ಮತ್ತು ಈ ಬಗ್ಗೆ ಪಾರದರ್ಶಕವಾಗಿ ಮಾಹಿತಿ ನೀಡಲಾಗುವುದು ಎಂದು ವಿದ್ಯುತ್, ನೀರು ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ವಕ್ತಾರರಾದ ಫಾತಿಮಾ ಜೌಹರ್ ಹಯಾತ್ ತಿಳಿಸಿದ್ದಾರೆ.






