ಮಸ್ಕತ್: ಒಮಾನ್‌ನ ಸುಹಾರ್‌ನಲ್ಲಿ ನಡೆದ ಭೀಕರ ಡ್ರೋನ್ ದಾಳಿಯಲ್ಲಿ ಇಬ್ಬರು ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಭದ್ರತಾ ಮೂಲಗಳು ಖಚಿತಪಡಿಸಿವೆ. ಶುಕ್ರವಾರ ಬೆಳಿಗ್ಗೆ ಸುಹಾರ್ ಸನಾಯಾ ಪ್ರದೇಶದಲ್ಲಿ ಎರಡು ಪ್ರತ್ಯೇಕ ಡ್ರೋನ್ ದಾಳಿಗಳು ಸಂಭವಿಸಿವೆ.
ಅಲ್ ಅವ್ಹಿ ಕೈಗಾರಿಕಾ ವಲಯದಲ್ಲಿರುವ ಲೇಬರ್ ಕ್ಯಾಂಪ್ (ಕಾರ್ಮಿಕರ ವಸತಿ ನಿಲಯ) ಸಮೀಪ ಮೊದಲ ಡ್ರೋನ್ ದಾಳಿ ನಡೆದಿದೆ. ಈ ಸ್ಫೋಟದ ತೀವ್ರತೆಗೆ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಎರಡನೇ ಡ್ರೋನ್ ದಾಳಿಯು ಜನರಿಲ್ಲದ ಬಯಲು ಪ್ರದೇಶದಲ್ಲಿ ನಡೆದಿದ್ದು, ಯಾವುದೇ ಸಾವು-ನೋವು ಸಂಭವಿಸಿದ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ದಾಳಿಗಳ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಉನ್ನತ ಮಟ್ಟದ ತನಿಖೆಯನ್ನು ಆರಂಭಿಸಿವೆ. ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೊಗಳು, ಫೋಟೋಗಳು ಅಥವಾ ಯಾವುದೇ ರೀತಿಯ ವದಂತಿಗಳನ್ನು ಸಾರ್ವಜನಿಕರು ಹಂಚಿಕೊಳ್ಳಬಾರದು ಎಂದು ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
“ಮಾಹಿತಿಗಾಗಿ ಅಧಿಕೃತ ಮೂಲಗಳನ್ನು ಮಾತ್ರ ಅವಲಂಬಿಸಬೇಕು. ಒಮಾನ್ ಸುಲ್ತಾನೇಟ್‌ನಲ್ಲಿರುವ ನಾಗರಿಕರು ಮತ್ತು ನಿವಾಸಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ,” ಎಂದು ಮೂಲಗಳು ತಿಳಿಸಿವೆ.






