janadhvani

Kannada Online News Paper

ಇರಾನ್ ಪರಮೋಚ್ಚ ನಾಯಕ ಮೃತ್ಯು: ಸೇಡು ತೀರಿಸದೆ ಬಿಡಲ್ಲ- ಐಆರ್‌ಜಿಸಿ ಎಚ್ಚರಿಕೆ

ಮಾನವಕುಲದ ಅತ್ಯಂತ ಕ್ರೂರ ಭಯೋತ್ಪಾದಕರು ಮತ್ತು ಹಂತಕರಿಂದ ಖಮೆನೈ ಅವರು ಹುತಾತ್ಮರಾಗಿದ್ದಾರೆ. ಇದು ಅವರ ಪ್ರಾಮಾಣಿಕ ಸೇವೆ ಮತ್ತು ನಾಯಕತ್ವಕ್ಕೆ ಸಂದ ಗೌರವವಾಗಿದೆ

ಟೆಹ್ರಾನ್: ಇರಾನ್‌ನ ಪರಮೋಚ್ಚ ನಾಯಕ ಅಯತುಲ್ಲಾಹ್ ಅಲಿ ಖಮೆನೈ ಅವರ ಹತ್ಯೆಗೆ ಭೀಕರವಾಗಿ ಸೇಡು ತೀರಿಸಿಕೊಳ್ಳುವುದಾಗಿ ಇರಾನ್ ರೆವಲ್ಯೂಷನರಿ ಗಾರ್ಡ್ಸ್ (ಐಆರ್‌ಜಿಸಿ) ಘೋಷಿಸಿದೆ. ಖಮೆನೈ ಅವರ ಹತೈ ಹಿಂದೆ ಇರುವವರನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡುವುದಿಲ್ಲ ಎಂದು ಐಆರ್‌ಜಿಸಿ ಎಚ್ಚರಿಕೆ ನೀಡಿದೆ.

ನಾಯಕನ ಅಗಲಿಕೆಯ ಹಿನ್ನೆಲೆಯಲ್ಲಿ ಇರಾನ್‌ನಲ್ಲಿ 40 ದಿನಗಳ ಕಾಲ ರಾಷ್ಟ್ರೀಯ ಶೋಕಾಚರಣೆ ಘೋಷಿಸಲಾಗಿದೆ. ಅಲ್ಲದೆ, ದೇಶಾದ್ಯಂತ ಏಳು ದಿನಗಳ ಕಾಲ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಿ ಆದೇಶ ಹೊರಡಿಸಲಾಗಿದೆ.

ಐಆರ್‌ಜಿಸಿ ಹೇಳಿಕೆ:

“ನಾವು ಒಬ್ಬ ಮಹಾನ್ ನಾಯಕನನ್ನು ಕಳೆದುಕೊಂಡಿದ್ದೇವೆ. ಮಾನವಕುಲದ ಅತ್ಯಂತ ಕ್ರೂರ ಭಯೋತ್ಪಾದಕರು ಮತ್ತು ಹಂತಕರಿಂದ ಖಮೆನೈ ಅವರು ಹುತಾತ್ಮರಾಗಿದ್ದಾರೆ. ಇದು ಅವರ ಪ್ರಾಮಾಣಿಕ ಸೇವೆ ಮತ್ತು ನಾಯಕತ್ವಕ್ಕೆ ಸಂದ ಗೌರವವಾಗಿದೆ. ಇರಾನ್ ಜನತೆಯ ಸೇಡಿನ ಹಸ್ತಗಳು ಶತ್ರುಗಳನ್ನು ಎಂದಿಗೂ ಕ್ಷಮಿಸುವುದಿಲ್ಲ,” ಎಂದು ಐಆರ್‌ಜಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಅಧಿಕೃತ ದೃಢೀಕರಣ:

1989 ರಿಂದ ಇರಾನ್‌ನ ಪರಮೋಚ್ಚ ನಾಯಕನಾಗಿ ದೇಶವನ್ನು ಮುನ್ನಡೆಸುತ್ತಿದ್ದ ಖಮೆನೈ ಅವರು ಹತ್ಯೆಯಾಗಿದ್ದಾರೆ ಎಂಬ ವಿಷಯವನ್ನು ಇರಾನ್ ಇಂದು ಬೆಳಿಗ್ಗೆ ಅಧಿಕೃತವಾಗಿ ಖಚಿತಪಡಿಸಿದೆ. ಈ ಹಿಂದೆ ಇಸ್ರೇಲ್ ಮತ್ತು ಅಮೆರಿಕ ಖಮೆನೈ ಹತರಾಗಿದ್ದಾರೆ ಎಂದು ಹೇಳಿಕೊಂಡಿದ್ದರೂ, ಇರಾನ್ ಈ ವಿಷಯವನ್ನು ಗೌಪ್ಯವಾಗಿಟ್ಟಿತ್ತು.

ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯೆ:

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಾಮಾಜಿಕ ಜಾಲತಾಣಗಳ ಮೂಲಕ ಖಮೆನೈ ಹತ್ಯೆಯನ್ನು ಮೊದಲೇ ಖಚಿತಪಡಿಸಿದ್ದರು. ವರದಿಗಳ ಪ್ರಕಾರ, ಈ ದಾಳಿಯಲ್ಲಿ ಖಮೆನೈ ಅವರ ಪುತ್ರಿ, ಅಳಿಯ ಮತ್ತು ಮೊಮ್ಮಗ ಕೂಡ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆಯಿಂದಾಗಿ ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ಮತ್ತಷ್ಟು ತೀವ್ರಗೊಂಡಿದೆ.