ಮಂಗಳೂರು,ಜು.9: ಇತ್ತೀಚೆಗೆ ಕೋಮು ಸಂಘರ್ಷಕ್ಕೆ ತುತ್ತಾಗಿ, ಅಮಾಯಕರ ಹತ್ಯೆ, ತಲವಾರು ದಾಳಿಯಿಂದಾಗಿ ಶಾಂತಿ ಕದಡಿರುವ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನಲ್ಲಿ ಇಂದು ಶಾಂತಿ ಸಭೆಯೊಂದು ನಡೆದಿದೆ. ಈ ಸಭೆ ಪಕ್ಷಾತೀತವಾಗಿ, ಧರ್ಮಾತೀತವಾಗಿ ಹಾಗೂ ಜಾತ್ಯಾತೀತವಾಗಿ ನಡೆಯಲಿದೆ ಎಂದು ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ನಿನ್ನೆ ಮಾಹಿತಿ ನೀಡಿದ್ದರು.
ಮಂಗಳೂರಿನಲ್ಲಿ ನಡೆದ ಇಂಥ ಕೊಲೆಗಳನ್ನು ತಡೆಯಲು ವಿಶೇಷ ತಂಡವನ್ನು ರಚಿಸಿದ್ದೇವೆ. ಕೆಲವು ಅಧಿಕಾರಿಗಳನ್ನು ಕೂಡಾ ಬದಲಾಯಿಸಿದ್ದೇವೆ. ಇದರೊಂದಿಗೆ ಶಾಂತಿಸಭೆಯನ್ನು ನಡೆಸುವ ಬಗ್ಗೆ ಯೋಚಿಸಲಾಗಿದೆ ಎಂದಿರುವ ಅವರು, ಸಭೆಯಲ್ಲಿ ಸಾರ್ವಜನಿಕರು, ಧಾರ್ಮಿಕ ಮುಖಂಡರು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಸಮಾಜಕ್ಕೆ ಶಾಂತಿಯ ಸಂದೇಶವನ್ನು ನೀಡಲು ಈ ಸಭೆಯನ್ನು ಆಯೋಜಿಸಿದ್ದೇವೆ ಎಂದು ಹೇಳಿದ್ದರು.
ಅದರಂತೆ ಇಂದು ಮಾನ್ಯ ಜಿಲ್ಲಾಧಿಕಾರಿಯವರಿಂದ ಲಭಿಸಿದ ಆಹ್ವಾನದ ಮೇರೆಗೆ ಅನೇಕ ಸಂಘಟನೆಗಳ ನಾಯಕರು, ಧಾರ್ಮಿಕ ಹಾಗೂ ಸಾಮಾಜಿಕ ಮುಖಂಡರು, ರಾಜಕೀಯ ಧುರೀಣರು ಭಾಗವಹಿಸಿದ್ದರು. ಜಿಲ್ಲೆಯಲ್ಲಿ ಶಾಂತಿ ನೆಲೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಭಿಕರು ಆಗ್ರಹಿಸಿದರು.
ಆದರೆ, ಜಿಲ್ಲೆಯ ಪ್ರಮುಖ ಸುನ್ನೀ ಸಂಘಟನೆಗಳಾದ ಮುಸ್ಲಿಂ ಜಮಾಅತ್, ಎಸ್ವೈಎಸ್ ಮತ್ತು ಬೃಹತ್ ವಿದ್ಯಾರ್ಥಿ ಸಂಘಟನೆಯಾದ ಎಸ್ಸೆಸ್ಸೆಫ್ ಇವುಗಳಲ್ಲಿ ಯಾವುದೇ ಒಂದು ಸಂಘಟನೆಯ ನಾಯಕರನ್ನು ಸಭೆಗೆ ಆಹ್ವಾನಿಸದೆ ಜಿಲ್ಲಾಧಿಕಾರಿಯಿಂದ ಎಡವಟ್ಟಾಗಿದೆ. ಜಿಲ್ಲಾಧಿಕಾರಿಗಳ ಕಚೇರಿಯಿಂದ ಬಿಡುಗಡೆಗೆಗೊಂಡ ಆಹ್ವಾನ ಪತ್ರಿಕೆಯಲ್ಲಿ ಮೇಲ್ಕಂಢ ಯಾವುದೇ ಸಂಘಟನೆಯ ಹೆಸರನ್ನು ಉಲ್ಲೇಖಿಸಿಲ್ಲ ಮತ್ತು ಅದರ ನಾಯಕರಿಗೂ ಆಹ್ವಾನ ನೀಡಲಾಗಿಲ್ಲ. ಈ ಬಗ್ಗೆ ಸಭೆಯಲ್ಲೇ ಪ್ರಶ್ನಿಸಿದ ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷರಾದ ಅಶ್ರಫ್ ಕಿನಾರ ಅವರಿಗೆ ಜಿಲ್ಲಾಧಿಕಾರಿಗಳಿಂದಲೋ, ಉಸ್ತುವಾರಿ ಸಚಿವರಿಂದಲೋ ಉತ್ತರ ಲಭಿಸಿಲ್ಲ, ಹೊರತು ತಾವು ಸಿದ್ಧಪಡಿಸಿದ ಆಹ್ವಾನ ಪತ್ರಿಕೆಯನ್ನು ಸಮರ್ಥಿಸಲು ಹರಸಾಹಸ ಪಡುತ್ತಿದ್ದರು.
ಸುನ್ನಿಗಳೆಡೆಯಲ್ಲಿ ಇತ್ತೀಚೆಗೆ ನಿರ್ಮಾಣಗೊಂಡಿರುವ ಐಕ್ಯತೆಯನ್ನು ಇಲ್ಲವಾಗಿಸಲು ಪ್ರಯತ್ನಿಸುತ್ತಿರುವ ರಾಜಕೀಯ ಪುಢಾರಿಗಳ ಕುತಂತ್ರವು ಇದರ ಹಿಂದೆ ಎದ್ದು ಕಾಣುತ್ತಿದೆ ಎಂದು ಸಂಘಟನಾ ಕಾರ್ಯಕರ್ತರು ಆರೋಪಿಸಿದ್ದಾರೆ. ಶಾಂತಿ ಸಭೆಯ ಹೆಸರಿನಲ್ಲಿ ಸುನ್ನಿಗಳೆಡೆಯಲ್ಲಿ ಆಶಾಂತಿಯನ್ನು ಸೃಷ್ಟಿಸಲು ಬಯಸುವವರು ತಕ್ಕ ಪಾಠವನ್ನು ಕಲಿಯಲಿದ್ದಾರೆಂಬ ಎಚ್ಚರಿಕೆಯ ಸಂದೇಶಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ.
ಈ ಸಂಘಟನೆಗಳಲ್ಲೊಂದಾದ ಎಸ್ಸೆಸ್ಸೆಫ್ ಈಗಾಗಲೇ ರಾಜ್ಯದಲ್ಲಿ ಕೋಮು ಸೌಹಾರ್ದತೆ ನೆಲೆಗೊಳ್ಳುವ ನಿಟ್ಟಿನಲ್ಲಿ ಸೌಹಾರ್ದ ನಡಿಗೆ ಎಂಬ ಕಾರ್ಯಕ್ರಮವನ್ನು ಆಯೋಜಿಸಿ, ಯಶಕಂಡಿದೆ. ಅದೇ ರೀತಿ, ಎಸ್ವೈಎಸ್ ಕೂಡ ‘ಸೌಹಾರ್ದ ಸಂಚಾರ’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದೇ ಬರುವ ಜುಲೈ 13, 14,15 ದಿನಾಂಕಗಳಲ್ಲಿ “ಹೃದಯ ಹೃದಯಗಳನ್ನು ಬೆಸೆಯೋಣ” ಎಂಬ ಘೋಷಣೆಯೊಂದಿಗೆ ನಡೆಯಲಿದೆ.
ಈ ಸಂಘಟನೆಗಳು ಎಲ್ಲಾ ವಿಧದ ಕೋಮುವಾದದಿಂದ ಸಮಾನ ಅಂತರ ಕಾಯ್ದುಕೊಂಡಿರುವುದು ಜಿಲ್ಲಾ ಸಾರ್ವಜನಿಕ ಬದುಕನ್ನು ಅರಿತುಕೊಂಡವರಿಗೆಲ್ಲಾ ಗೊತ್ತಿರುವ ವಿಚಾರ. ಎಸ್ಸೆಸ್ಸೆಫ್ನ ಬ್ಲಡ್ ಸೈಬೋ ಈ ನೆಲದಲ್ಲಿ ರಕ್ತದ ಅವಶ್ಯಕತೆಯಿರುವ ಸಹಸ್ರಾರು ರೋಗಿಗಳಿಗೆ ಜಾತಿ ಮತ ನೋಡದೇ ರಕ್ತದಾನ ಮಾಡುತ್ತಾ ಜೀವ ಪವಿತ್ರ ಎಂಬ ಸಂದೇಶವನ್ನು ಸಾರುತ್ತಾ ಬಂದಿದೆ. ಸಾಮಾಜಿಕ ಪಿಡುಗಾದ ಅಮಲು ಪದಾರ್ಥಗಳ ವಿರುದ್ಧ ತನ್ನ ಹೋರಾಟವನ್ನು ಸದಾ ಜಾರಿಯಲ್ಲಿಡುತ್ತಾ ಬಂದಿದೆ. ಅತೀ ಹೆಚ್ಚು ಸದಸ್ಯರನ್ನು ಹೊಂದಿರುವ ವಿದ್ಯಾರ್ಥಿ ಸಂಘಟನೆಗಳಲ್ಲೊಂದಾಗಿದೆ ಎಸ್ಸೆಸ್ಸೆಫ್.
ಈ ವರೆಗೆ ಎಸ್ಸೆಸ್ಸೆಫ್ ಶಾಂತಿ ಕದಡುವ ಒಂದೇ ಒಂದು ಕೃತ್ಯವೆಸಗಿದ ಉದಾಹರಣೆಯಿಲ್ಲ. ನೆಲದ ಕಾನೂನಿಗೆ ಎದುರಾಡಿದ ಒಂದೇ ಒಂದು ಆರೋಪ ಎಸ್ಸೆಸ್ಸೆಫ್ ಎಸ್ವೈಎಸ್ ಮೇಲಿಲ್ಲ. ಆದರೆ ಇಂದು ನಡೆದ ಶಾಂತಿ ಸಭೆಗೆ, ಸದಾ ಶಾಂತಿಗಾಗಿ ದುಡಿಯುತ್ತಿರುವ ಎಸ್ಸೆಸ್ಸೆಫ್ ಎಸ್ವೈಎಸ್ ನಂತಿರುವ ದೈತ್ಯ ಸಂಘಟನೆಗೆ ಆಹ್ವಾನ ನೀಡದೆ ನಿರ್ಲಕ್ಷಿಸುವ ಮೂಲಕ ಜಿಲ್ಲಾಧಿಕಾರಿಯಿಂದ ಎಡವಟ್ಟಾಗಿದೆ ಎಂದು ಸಂಘಟನೆಯನ್ನು ಬಲ್ಲ ಜಿಲ್ಲೆಯ ಜನ ಸಾಮಾನ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಜ ಹೇಳಬೇಕೆಂದರೆ, ಶಾಂತಿ ಸಭೆಗೆ ಆಹ್ವಾನ ಲಭಿಸಿಲ್ಲ ಎನ್ನುವ ಕಾರಣಕ್ಕೆ ಈ ಸಂಘಟನೆಗಳಿಗೆ ನಷ್ಟವೇನೂ ಇಲ್ಲ. ಎಸ್ಸೆಸ್ಸೆಫ್ ಎಸ್ವೈಎಸ್ಗೆ ಆಹ್ವಾನ ನೀಡಿ ಅಥವಾ ನೀಡದಿರಿ. ಜಿಲ್ಲೆಯ ಶಾಂತಿ ಸೌಹಾರ್ದ ಉಳಿಸಿ ಬೆಳೆಸುವ ಅವರ ಕಾಯಕಕ್ಕಂತೂ ತಡೆಯಾಗಲಾರದು. ಎಸ್ಸೆಸ್ಸೆಫ್ ಆಯೋಜಿಸಿದ ‘ಸೌಹಾರ್ದ ನಡಿಗೆ’ ಯನ್ನು ಯಶಸ್ವಿಗೊಳಿಸಿದಂತೆ, ಇದೇ ಬರುವ ಜುಲೈ 13, 14,15 ದಿನಾಂಕಗಳಲ್ಲಿ “ಹೃದಯ ಹೃದಯಗಳನ್ನು ಬೆಸೆಯೋಣ” ಎಂಬ ಘೋಷಣೆಯೊಂದಿಗೆ ಎಸ್ ವೈ ಎಸ್ ನಡೆಸುವ ‘ಸೌಹಾರ್ದ ಸಂಚಾರ’ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜಯಗೊಳಿಸೋಣ.
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ