ಗುಜರಾತ್: ದೇಶವನ್ನೇ ಬೆಚ್ಚಿಬೀಳಿಸಿದ ಅಹಮದಾಬಾದ್ ವಿಮಾನ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 265 ಕ್ಕೆ ಏರಿದೆ. 265 ಮೃತದೇಹಗಳನ್ನು ಅಹಮದಾಬಾದ್ ಸಿವಿಲ್ ಆಸ್ಪತ್ರೆಗೆ ತರಲಾಗಿದೆ ಎಂದು ಆಸ್ಪತ್ರೆ ಅಧಿಕಾರಿಗಳು ದೃಢಪಡಿಸಿದ್ದಾರೆ. ಪ್ರಯಾಣಿಕರಲ್ಲಿ ಒಬ್ಬರು ಪವಾಡಸದೃಶವಾಗಿ ಪಾರಾಗಿದ್ದು, ಉಳಿದಂತೆ ಎಲ್ಲ 241 ಪ್ರಯಾಣಿಕರು ಮೃತಪಟ್ಟಿದ್ದಾರೆ.
290 ಮಂದಿ ಮೃತಪಟ್ಟಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಇದನ್ನು ಅಧಿಕೃತವಾಗಿ ದೃಢಪಡಿಸಲಾಗಿಲ್ಲ. ವಿಮಾನದಲ್ಲಿದ್ದ ಪ್ರಯಾಣಿಕರ ಜೊತೆಗೆ 24 ಮಂದಿ ಸ್ಥಳೀಯರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಅಹಮದಾಬಾದ್ನ ಬಿಜೆ ವೈದ್ಯಕೀಯ ಕಾಲೇಜಿನ ಹಲವಾರು ವಿದ್ಯಾರ್ಥಿಗಳು ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಹಲವರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಮರಣ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹಾಸ್ಟೆಲ್ ಅಧಿಕಾರಿಗಳು ತಿಳಿಸಿದ್ದಾರೆ.


ವಿಮಾನದ ಎರಡೂ ಎಂಜಿನ್ಗಳು ಒಂದೇ ಸಮಯದಲ್ಲಿ ವಿಫಲವಾಗಿವೆ ಎಂದು ವರದಿಗಳು ಸೂಚಿಸುತ್ತವೆ. ವಿಮಾನದ ಕಪ್ಪು ಪೆಟ್ಟಿಗೆಯನ್ನು ಪತ್ತೆಹಚ್ಚಲಾಗಿದ್ದು, ಅದನ್ನು ಪರಿಶೀಲಿಸಲಾಗುತ್ತಿದೆ.
ವಿಮಾನದಲ್ಲಿದ್ದ ಒಬ್ಬ ಪ್ರಯಾಣಿಕ ಮಾತ್ರ ಗಾಯಗಳೊಂದಿಗೆ ಪಾರಾಗಿದ್ದಾರೆ. 40 ವರ್ಷದ ವಿಶ್ವಾಸ್ ಕುಮಾರ್ ರಮೇಶ್ ತುರ್ತು ನಿರ್ಗಮನದ ಮೂಲಕ ಪವಾಡಸದೃಶವಾಗಿ ಪಾರಾಗಿದ್ದಾರೆ. ಅವರು ಗಾಯಗಳೊಂದಿಗೆ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸಹೋದರ ಅಜಯ್ ಕುಮಾರ್ ರಮೇಶ್ ಕೂಡ ವಿಶ್ವಾಸ್ ಜೊತೆ ವಿಮಾನದಲ್ಲಿದ್ದರು.ಬ್ರಿಟಿಷ್ ಪ್ರಜೆಯಾಗಿದ್ದಾರೆ ವಿಶ್ವಾಸ್.
ದುರಂತದಿಂದ ಬದುಕುಳಿದ ವಿಶ್ವಾಸ್ ತುರ್ತು ನಿರ್ಗಮನದ ಮೂಲಕ ಹೊರಗೆ ನಡೆದಿರುವ ವಿಡಿಯೋ ಕೂಡ ಹೊರಬಿದ್ದಿದೆ. ‘ಅಪಘಾತವು ಟೇಕ್ ಆಫ್ ಆದ 30 ಸೆಕೆಂಡುಗಳ ನಂತರ ಸಂಭವಿಸಿದೆ. ಎಲ್ಲವೂ ತುಂಬಾ ಬೇಗನೆ ಸಂಭವಿಸಿತು. ನಾನು ಮೃತ ದೇಹಗಳಿಂದ ಸುತ್ತುವರೆದಿದ್ದೆ. ನನ್ನ ಸಹೋದರ ಕೂಡ ವಿಮಾನದಲ್ಲಿದ್ದನು.’ ಪಾರಾದ ನಂತರ ವಿಶ್ವಾಸ್ ಹೇಳಿದ ಮಾತುಗಳಿವು. ವಿಶ್ವಾಸ್ ಅವರ ಗಾಯಗಳು ಗಂಭೀರವಾಗಿಲ್ಲ ಎಂದು ವರದಿಯಾಗಿದೆ. ವಿಶ್ವಾಸ್ 11A ಸೀಟಿನ ಪ್ರಯಾಣಿಕನಾಗಿದ್ದರು.







