janadhvani

Kannada Online News Paper

ಮಂಗಳೂರು: ಯುವಕನ ಗುಂಪು ಹತ್ಯೆ ಪ್ರಕರಣ- ಆರು ಮಂದಿ ಪೋಲೀಸ್ ವಶಕ್ಕೆ?

ಗುಂಪಿನಲ್ಲಿದ್ದ ಇತರ 40 ರಷ್ಟು ಅಪರಾಧಿಗಳನ್ನು ವಶಕ್ಕೆ ಪಡೆಯಲು ಬಲೆ ಬೀಸಿರುವ ಪೋಲೀಸರು ಶೀಘ್ರದಲ್ಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ ಸಾರ್ವಜನಿಕರು.

ಮಂಗಳೂರು:ಇಲ್ಲಿನ ಹೊರವಲಯದ ಕುಡುಪು ಸಮೀಪ ರವಿವಾರ ಸಂಜೆ ನಡೆದ ಉತ್ತರ ಭಾರತದ ಯುವಕನ ಗುಂಪು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆಂದು ತಿಳಿದುಬಂದಿದೆ. ಗುಂಪಿನಲ್ಲಿದ್ದ ಇತರ 40 ರಷ್ಟು ಆರೋಪಿಗಳನ್ನು ವಶಕ್ಕೆ ಪಡೆಯಲು ಬಲೆ ಬೀಸಿರುವ ಪೋಲೀಸರು ಶೀಘ್ರದಲ್ಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ ಸಾರ್ವಜನಿಕರು.

ಕುಡುಪು ಸಮೀಪದ ಮೈದಾನ ಒಂದರಲ್ಲಿ ಕ್ರಿಕೆಟ್ ಆಟವಾಡುತ್ತಿದ್ದ ಗುಂಪು, ಉತ್ತರ ಭಾರತದ ಯುವಕನನ್ನು ತಾನು ಮುಸ್ಲಿಂ ಎಂಬ ಕಾರಣಕ್ಕಾಗಿ ಬ್ಯಾಟ್ ಮತ್ತು ವಿಕೆಟ್ ನಲ್ಲಿ ಹಲ್ಲೆ ನಡೆಸಿ ಹತ್ಯೆ ನಡೆಸಲಾಗಿದೆ ಎಂದು ಆರೋಪಿಸಲಾಗಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಮಾರು 50 ರಷ್ಟಿದ್ದ ಗುಂಪಿನಲ್ಲಿ ಮಾಜಿ ಕಾರ್ಪೊರೇಟರ್ ಒಬ್ಬರ ಪತಿಯೂ ಭಾಗಿಯಾಗಿದ್ದರು ಎಂಬ ಆರೋಪಗಳು ಕೇಳಿಬಂದಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲು ಕಾಂಗ್ರೆಸ್ ಮತ್ತು ಸಿಪಿಎಂ ಆಗ್ರಹಿಸಿದೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಸಿಪಿಎಂ ದ.ಕ ಜಿಲ್ಲಾ ಮುಖಂಡ ಮುನೀರ್ ಕಾಟಿಪಳ್ಳ, ಮಂಗಳೂರು ಬಳಿಯ ಕುಡುಪು ಮೈದಾನದ ಸಮೀಪ ಬಂದ ವಲಸೆ ಕಾರ್ಮಿಕನನ್ನು ಆತನ ಧರ್ಮದ ಗುರುತಿನ ಕಾರಣಕ್ಕೆ ಕಲ್ಲು, ದೊಣ್ಣೆ, ಬ್ಯಾಟುಗಳಿಂದ ಅಲ್ಲಿದ್ದ ಗುಂಪು ಹಲ್ಲೆ ನಡೆಸಿ ಕೊಂದು ಹಾಕಿದೆ ಎಂದು ಎಲ್ಲೆಡೆ ಪುಕಾರು ಹಬ್ಬಿದೆ. ನತದೃಷ್ಟ ವಲಸೆ ಕಾರ್ಮಿಕ ದೇಶ ವಿರೋಧಿ ಘೋಷಣೆ ಕೂಗಿದ್ದಾನೆ ಎಂಬ ವದಂತಿಯನ್ನೂ ದುಷ್ಕರ್ಮಿಗಳ ಗುಂಪು ಹರಿಯಬಿಟ್ಟಿದೆ. ಆ ಮೂಲಕ ತಮ್ಮ ಗಂಭೀರ ದುಷ್ಕೃತ್ಯವನ್ನು ದೇಶ ಪ್ರೇಮದ ಲೇಬಲ್ ಅಂಟಿಸಿ ಸಮರ್ಥಿಸಿಕೊಳ್ಳುವ ಹೀನ ಯತ್ನವೂ ನಡೆಯುತ್ತಿದೆ.

ಮಾಜಿ ಕಾರ್ಪೊರೇಟರ್ ಓರ್ವರ ಪತಿ ಈ ಗುಂಪನ್ನು ಹಲ್ಲೆ ನಡೆಸಲು ಪ್ರಚೋದಿಸಿದ್ದಾರೆ ಎಂಬ ಕುರಿತೂ ಸ್ಥಳೀಯರು ಮಾತಾಡಿಕೊಳ್ಳುತ್ತಿದ್ದಾರೆ. ಹತ್ಯೆಯ ತರುವಾಯ ಸ್ಥಳೀಯ ಜನಪ್ರತಿನಿಧಿಗಳೂ ಮಧ್ಯಪ್ರವೇಶಿಸಿ ಪ್ರಕರಣದ ತೀವ್ರತೆಯನ್ನು ತಗ್ಗಿಸುವ, ಕೆಲವರನ್ನು ಬಚಾವ್ ಮಾಡುವ ಯತ್ನ ನಡೆಸುತ್ತಿರುವ ಆರೋಪಗಳೂ ಕೇಳಿಬರುತ್ತಿದೆ. ಮಂಗಳೂರು ಪೊಲೀಸರು ಯಾವುದೇ ಅಧಿಕೃತ ಮಾಹಿತಿಯನ್ನು ಘಟನೆ ನಡೆದು ಒಂದು ದಿನ ಕಳೆದರೂ ನೀಡದಿರುವುದು ಪ್ರಕರಣದ ಕುರಿತು ಅನುಮಾನಗಳನ್ನು ಹೆಚ್ಚಿಸಿದೆ ಎಂದು
ತಿಳಿಸಿದರು.
ವಲಸೆ ಕಾರ್ಮಿಕನ ಮೇಲೆ ಗುಂಪು ಹಲ್ಲೆ, ಹತ್ಯೆ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ನೇಮಿಸಲು ಮುನೀರ್ ಕಾಟಿಪಳ್ಳ‌ ಆಗ್ರಹಿಸಿದರು

ಈ ಬಗ್ಗೆ ಮಾತನಾಡಿರುವ ದ.ಕ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಾಹುಲ್ ಹಮೀದ್ ಕೆ.ಕೆ, ಪೊಲೀಸರು ನಿಷ್ಪಕ್ಷಪಾತವಾಗಿ ಮತ್ತು ಗಂಭೀರವಾಗಿ ಈ ಪ್ರಕರಣವನ್ನು ಭೇದಿಸಬೇಕು, ವಿಶೇಷ ತನಿಖಾ ತಂಡವನ್ನು ರಚಿಸಿ ಅಮೂಲಾಗ್ರ ತನಿಖೆ ನಡೆಸಬೇಕು, ಸತ್ಯ ಹೊರಗೆ ಬರಬೇಕು ಎಂದು ಆಗ್ರಹಿಸಿದ್ದಾರೆ. ಬಿಜೆಪಿಯವರು ಈ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಅಪಾದಿಸಿದರು.