janadhvani

Kannada Online News Paper

ನಾಳೆಯಿಂದ ದ್ವಿಚಕ್ರದಲ್ಲಿ ಹಿಂಬದಿ ಸವಾರರಿಗೆ ನಿರ್ಬಂಧ- ಎಡಿಜಿಪಿ ಅಲೋಕ್ ಕುಮಾರ್

ಹಿರಿಯ ನಾಗರಿಕರು, ಮಹಿಳೆಯರು ಮತ್ತು ಹದಿನೆಂಟು ವರ್ಷದ ಕೆಳಗಿನ ಮಕ್ಕಳಿಗೆ ಮಾತ್ರ ಅವಕಾಶ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಮತ್ತು ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ ಪುರುಷ ಹಿಂಬದಿ ಸವಾರರಿಗೆ ಅವಕಾಶ ಇರುವುದಿಲ್ಲ ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.

ಹಿರಿಯ ನಾಗರಿಕರು, ಮಹಿಳೆಯರು ಮತ್ತು ಹದಿನೆಂಟು ವರ್ಷದ ಕೆಳಗಿನ ಮಕ್ಕಳಿಗೆ ಅವಕಾಶ ಇರುತ್ತದೆ. ಮುಂದಿನ ಒಂದು ವಾರದ ಮಟ್ಟಿಗೆ ಜಿಲ್ಲೆಯಲ್ಲಿ ಈ ನಿಯಮವನ್ನು ಪಾಲನೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಹಿಂಬದಿ ಸವಾರರಿಂದ ಅಪರಾಧ ಕೃತ್ಯಗಳು ಹೆಚ್ಚಾಗಿ ನಡೆಯುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಈ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಇತರ ರಾಜ್ಯಗಳಲ್ಲಿ ಇಂಥ ಆದೇಶ ಈಗಾಗಲೇ ಜಾರಿಯಾಗಿತ್ತು. ಅದನ್ನು ನೋಡಿದ್ದೇನೆ. ಅದೇ ರೀತಿ ಇಲ್ಲಿಯೂ ಜಾರಿಗೊಳಿಸುತ್ತಿದ್ದೇವೆ.

ಇತರ ರಾಜ್ಯಗಳಲ್ಲಿ ಯಾವುದೇ ಪುರುಷರಿಗೆ ಹಿಂಬದಿ ಸವಾರಿಗೆ ಅವಕಾಶವಿಲ್ಲ ಎಂದು ಆದೇಶ ಹೊರಡಿಸಲಾಗಿತ್ತು. ಇಲ್ಲಿ ವಯಸ್ಕ ಪುರುಷರಿಗೆ ಮಾತ್ರ ನಿರ್ಬಂಧ ವಿಧಿಸಲಾಗುತ್ತದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.

ಎರಡು ವಾರಗಳ ಅಂತರದಲ್ಲಿ ಜಿಲ್ಲೆಯಲ್ಲಿ ಮೂರು ಯುವಕರ ಹತ್ಯೆಯಾಗಿದ್ದು, ಆ ಬಳಿಕ ಇಲ್ಲಿನ ಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದೆ. ಇದನ್ನು ನಿಯಂತ್ರಿಸಲು ಜಿಲ್ಲೆಯಲ್ಲಿ ನೈಟ್ ಕರ್ಪ್ಯೂ ಜಾರಿಗಳಿಸಲಾಗಿದೆ. ಜಿಲ್ಲೆಯಲ್ಲಿ ಎಲ್ಲಾ ಅಂಗಡಿ ಮುಂಗಟ್ಟು, ವಾಣಿಜ್ಯ ವ್ಯವಹಾರಗಳನ್ನು ಸಂಜೆ 6 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಮುಚ್ಚುವಂತೆ ಸೂಚಿಸಲಾಗಿದೆ. ಅಲ್ಲದೆ ಕಳೆದ 10 ದಿನದಿಂದ ಮಧ್ಯ ಮಾರಾಟಕ್ಕೂ ಜಿಲ್ಲೆಯಲ್ಲಿ ನಿಷೇಧ ಹೇರಲಾಗಿದೆ.

ಹಿಂಬದಿ ಸವಾರರಿಗೆ ನಿರ್ಬಂಧವಿಲ್ಲ, ರಾತ್ರಿ 9 ಗಂಟೆ ವರೆಗೆ ವ್ಯಾಪಾರ ನಡೆಸಲು ಅವಕಾಶ- ಕಮಿಷನರ್