janadhvani

Kannada Online News Paper

ಕೈ ಮುಗಿದು ಹೇಳುತ್ತೇನೆ ರಾಜ್ಯ ಹಾಳು ಮಾಡಿಕೊಳ್ಳಬೇಡಿ- ಹಿಂದೂ ಯುವಕರಲ್ಲಿ ಎಚ್‌ಡಿಕೆ ಮನವಿ

ಇಲ್ಲಿ ಯಾರು ಶಾಶ್ವತ ಅಲ್ಲ, ಕರ್ನಾಟಕ ಶಾಂತಿಯ ತೋಟ ಹಾಳು ಮಾಡಬೇಡಿ. ಇಂತಹ ಸಂದೇಶ ರವಾನಿಸುವ ವ್ಯಕ್ತಿಗಳನ್ನು ಬಹಿಷ್ಕಾರ ಮಾಡಿ ಎಂದು ಆಗ್ರಹಿಸಿದರು.

ಬೆಂಗಳೂರು: ರಾಜ್ಯದಲ್ಲಿ ಕೋಮು ದ್ರುವೀಕರಣದ ಕಿಚ್ಚು ಹೆಚ್ಚುತ್ತಿದ್ದು, ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು, ಮುಸ್ಲಿಮರ ಅಂಗಡಿಗಳಲ್ಲಿ ಖರೀದಿ ಮಾಡದಂತೆ ಹರಿದಾಡುತ್ತಿರುವ ವಾಟ್ಸಪ್ ಸಂದೇಶಗಳನ್ನು ಮಾಧ್ಯಮಗಳ ಮುಂದೆ ಓದಿದರು.

ವಾಟ್ಸಪ್ ಸಂದೇಶಗಳಲ್ಲಿ ಹಣ್ಣು, ಕಿರಾಣಿ ಅಂಗಡಿಗಳು, ಎಲೆಕ್ಟ್ರಿಕ್ ಶಾಪ್ ಮುಂತಾದವುಗಳ ಹಿಂದು ಅಂಗಡಿಗಳಿಗೆ ಹೋಗಿ ಎಂದು ಸಂದೇಶ ನೀಡಲಾಗುತ್ತಿದೆ. ಸಭಾಧ್ಯಕ್ಷರು ಯಾವ ಪುರುಷಾರ್ಥಕ್ಕೆ ಚರ್ಚೆ ಇಟ್ಟುಕೊಂಡಿದ್ದಾರೆ ಅಂತ ಗೊತ್ತಾಗುತ್ತಿಲ್ಲ.

ಈ ರಾಜ್ಯ ಎಲ್ಲಿಗೆ ತೆಗೆದುಕೊಂಡು ಹೋಗಬೇಕು ಎಂದುಕೊಂಡಿದ್ದೀರಿ. ಹಿಂದೂ ಯುವಕರಿಗೆ ಕೈ ಮುಗಿದು ಹೇಳುತ್ತೇನೆ ರಾಜ್ಯ ಹಾಳು ಮಾಡಿಕೊಳ್ಳಬೇಡಿ. ಇಲ್ಲಿ ಯಾರು ಶಾಶ್ವತ ಅಲ್ಲ, ಕರ್ನಾಟಕ ಶಾಂತಿಯ ತೋಟ ಹಾಳು ಮಾಡಬೇಡಿ. ಇಂತಹ ಸಂದೇಶ ರವಾನಿಸುವ ವ್ಯಕ್ತಿಗಳನ್ನು ಬಹಿಷ್ಕಾರ ಮಾಡಿ ಎಂದು ಆಗ್ರಹಿಸಿದರು.

ಈದ್ಗಾ ಮೈದಾನದಲ್ಲಿ ಬಲಿ ತಗೊತಿದ್ರಿ. ಅದನ್ನು ದೇವೇಗೌಡರು ಸರಿ ಮಾಡಿದ್ರು. ಉತ್ತರ ಭಾರತ ಬೇರೆ ಅಲ್ಲಿ ಮೊಘಲ್ ಆಡಳಿತ ಬಂತು ಅಂತ ಕರ್ನಾಟಕದಲ್ಲಿ ಹುಟ್ಟು ಹಾಕ್ತಿದ್ರಿ. ಇವರು ಹೀಗೆ ಮಾಡಲು ಕಾಂಗ್ರೆಸ್ ಕಾರಣ ಎಂದು ವಾಗ್ದಾಳಿ ನಡೆಸಿದರು.

ಈ ಸರ್ಕಾರ ಬರಲು ಕಾಂಗ್ರೆಸ್ ಕಾರಣವಾಗಿದೆ. ನಮ್ಮ ಮನೆ ಬಾಗಿಲಿಗೆ ಬಂದು ಸಿಎಂ ಮಾಡಿದ್ರಿ. ಇಂತಹ ಪರಿಸ್ಥಿತಿ ಉದ್ಭವ ಆಗಲು ಕಾಂಗ್ರೆಸ್ ಒಂದು ಕಡೆ , ಬಿಜೆಪಿ ಒಂದು ಕಡೆ ಕಾರಣ. ಕನ್ನಡಿಗರೇ ದಾರಿ ತಪ್ಪಬೇಡಿ ಎಂದು ಕುಮಾರಸ್ವಾಮಿ ಮನವಿ ಮಾಡಿಕೊಂಡರು.

ಹಿಂದು ದೇವಸ್ಥಾನಕ್ಕೆ ದಲಿತರನ್ನು ಪೂಜೆ ಮಾಡಲು ಬಿಡುತ್ತೀರಾ? ದೇವಸ್ಥಾನ ಕಟ್ಟುವರು ಓಬಿಸಿ , ದಲಿತರು. ದೇವಸ್ಥಾನದ ಒಳಗೆ ಕೂತುಕೊಂಡು ಆಸ್ತಿ ಹೊಡೆಯುವವರು ನೀವುಗಳು. ನೀವು ಮಜಾ ಮಾಡುವವರು. ನಾನು ಇಷ್ಟು ಕಠಿಣವಾಗಿ ಯಾವತ್ತೂ ಮಾತಾಡಿಲ್ಲ . ರಾಜ್ಯವನ್ನು ಕೆಟ್ಟ ಪರಿಸ್ಥಿತಿಗೆ ತೆಗೆದುಕೊಂಡು ಹೋಗುತ್ತಿದ್ದೀರಿ. ಈ ರಾಜ್ಯದಲ್ಲಿ ಸರ್ಕಾರ ಇದೆಯಾ? ಏನ್ ಮಾಡ್ತಿದೆ ಸರ್ಕಾರ? ಆರೂವರೆ ಕೋಟಿ ಜನ ಕ್ಕೆ ನಿಮ್ಮ ಸರ್ಕಾರ ಅಲ್ಲವಾ ಎಂದು ಆಕ್ರೋಶ ಹೊರ ಹಾಕಿದರು.

ಸಿಎಂ ವಿರುದ್ಧ ಮಾತಾಡಿದ್ದಕ್ಕೆ ಅರೆಸ್ಟ್ ಮಾಡಿದ್ದೀರಿ. ಪ್ರಚೋದನೆ ಮಾಡುವವರನ್ನು ಅರೆಸ್ಟ್ ಮಾಡಿ . ಈ ರೀತಿಯಲ್ಲಿ ಪ್ರಚೋದನೆ ಮಾಡಿದ್ರೆ ಶಾಸಕನೇ ಆಗಿರಲಿ, ಸಚಿವನೇ ಆಗಿರಲಿ ಅವರನ್ನು ಅರೆಸ್ಟ್ ಮಾಡಿ, ಇವರು ದೇಶ ಉಳಿಸುವವರಲ್ಲ . ಅಮಾಯಕರು ದೇಶ ಉಳಿಸಿದರು. ಯಾವ ಯುವಕರು ಇಂತಹ ಹೇಳಿಕೆ ಪ್ರಚೋದನೆಗೆ ಒಳಗಾಗಬೇಡಿ. ಇದರಿಂದ ನಿಮ್ಮ ಭವಿಷ್ಯ ಹಾಳಾಗಲಿದೆ ಎಂದು ಮತ್ತೆ ಮತ್ತೆ ಹಿಂದೂ ಯುವಕರಲ್ಲಿ ಮನವಿ ಮಾಡಿಕೊಂಡರು.