ಬೆಂಗಳೂರು:ರಾಜ್ಯದಲ್ಲಿ ಉದ್ಭವಿಸಿರುವ ಹಿಜಾಬ್ ಗೊಂದಲದ ಮಧ್ಯೆ ಇಂದಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭವಾಗಲಿದ್ದು, ರಾಜ್ಯದಲ್ಲಿ ಒಟ್ಟು 8,73,846 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಜ್ಜಾಗಿದ್ದಾರೆ.ಯಾವುದೇ ಅಹಿತಕರ ಘಟನೆ ನಡೆಯದಂತೆ ಶಿಕ್ಷಣ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ.
ಕಳೆದ ಎರಡು ವರ್ಷಗಳಿಂದ ಕೊರೊನಾವೈರಸ್ ಭಯದ ನಡುವೆ ಕೇವಲ ಮೂರು ದಿನ ಮಾತ್ರ ಪರೀಕ್ಷೆ ನಡೆದಿತ್ತು. ಆದರೆ ಈ ವರ್ಷ ಯಾವುದೇ ಭಯವಿಲ್ಲದೆ ಪರೀಕ್ಷೆ ನಡೆಯಲಿದೆ. ಮಾರ್ಚ್ 28 ರಿಂದ ಏಪ್ರಿಲ್ 11ರವರೆಗೆ, ಬೆಳಗ್ಗೆ 10:30ಕರಿಂದ ಮಧ್ಯಾಹ್ನ 01:45ರವರೆಗೆ ಪರೀಕ್ಷೆ ನಡೆಯಲಿದೆ.
ಪರೀಕ್ಷೆ ವೇಳಾಪಟ್ಟಿ:
28-3-2022- ಪ್ರಥಮ ಭಾಷೆ
30-3-2022- ದ್ವಿತೀಯ ಭಾಷೆ
1-4-2022- ಅರ್ಥ ಶಾಸ್ತ್ರ, ಕೋರ್ ಸುಬ್ಜೆಕ್ಟ್ಸ್
4-4-2022- ಗಣಿತ, ಸಮಾಜಶಾಸ್ತ್ರ
6-4-2022- ಸಮಾಜ ವಿಜ್ಞಾನ
8-4-2022- ತೃತೀಯ ಭಾಷೆ
11-4-2022- ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ/ ಹಿಂದೂಸ್ತಾನಿ ಸಂಗೀತ.
ಪರೀಕ್ಷೆಗೆ ತಯಾರಿ:
ಮಾರ್ಚ್ 28 ರಿಂದ ಎಪ್ರಿಲ್ 11ರವರೆಗೆ ನಡೆಯಲಿರುವ ಪರೀಕ್ಷೆ
* ಪರೀಕ್ಷೆ ಬರೆಯಲಿರುವ 8,73,846 ವಿದ್ಯಾರ್ಥಿಗಳು
* ಗಂಡು ಮಕ್ಕಳು – 4,52,732
* ಹೆಣ್ಣು ಮಕ್ಕಳು , 4,21,110
* ತೃತಿಯ ಲಿಂಗಿಗಳು – 04
* ವಿಭಿನ್ನ ಸಾಮಾರ್ಥ್ಯವುಳ್ಳ ವಿದ್ಯಾರ್ಥಿಗಳು – 5,307
* ಒಟ್ಟು 8,73,846 ವಿದ್ಯಾರ್ಥಿಗಳು
ಪರೀಕ್ಷೆಗೆ ನೋಂದಾಯಿತ ಒಟ್ಟು ಶಾಲೆಗಳ ಸಂಖ್ಯೆ – 15,387
>> ಸರ್ಕಾರಿ – 5,717
>> ಅನುದಾನಿತ – 3,412
>> ಅನುದಾನ ರಹಿತ – 6,258
>> ಒಟ್ಟು ಶಾಲೆಗಳು – 15,387
ಪರೀಕ್ಷಾ ಕೇಂದ್ರಗಳ ಸಂಖ್ಯೆ – 3,444
ಎಸ್ಎಸ್ಎಲ್ಸಿ ಪರೀಕ್ಷೆಗಾಗಿ 45,289 ಪರೀಕ್ಷಾ ಕೊಠಡಿಗಳ ಸಿದ್ಧತೆ ಮಾಡಲಾಗಿದ್ದು, 3,444 ಮುಖ್ಯ ಅಧಿಕ್ಷಕರು ಹಾಗೂ 49,817 ಕೊಠಡಿ ಮೇಲ್ವಿಚಾರಕರ ನೇತೃತ್ವದಲ್ಲಿ ಪರೀಕ್ಷೆ ನಡೆಯಲಿದೆ.
ಸಮವಸ್ತ್ರದ ಹಿಜಾಬ್ ನೊಂದಿಗೆ ಎಸೆಸೆಲ್ಸಿ ಪರೀಕ್ಷೆ ಬರೆಯಲು ಅವಕಾಶ
ರಾಜ್ಯದ ಕೆಲವು ಖಾಸಗೀ ಶಾಲೆಗಳಲ್ಲಿ ಸ್ಕಾರ್ಫ್ (ಹಿಜಾಬ್) ನ್ನು ಸಮವಸ್ತ್ರದ ಭಾಗವಾಗಿ ಅನುಮತಿಸಲಾಗಿದ್ದು, ಆಯಾ ಶಾಲೆಯ ಸಮವಸ್ತ್ರದಲ್ಲಿಯೇ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಲು ಶಿಕ್ಷಣ ಇಲಾಖೆ ಅನುಮತಿ ನೀಡಿದೆ. ಈಗಾಗಲೆ ಶಾಲಾ ಸಮವಸ್ತ್ರದೊಂದಿಗೆ ಸ್ಕಾರ್ಫ್ (ಹಿಜಾಬ್) ಧರಿಸುತ್ತಿರುವ ವಿದ್ಯಾರ್ಥಿನಿಯರು ಶಾಲಾ ಮುಖ್ಯಸ್ಥರ ಸಹಿಯುಳ್ಳ ಪತ್ರವನ್ನು ಪರೀಕ್ಷಾ ಕೇಂದ್ರದ ಮುಖ್ಯಸ್ಥರಿಗೆ ತೋರಿಸಿ ಪರೀಕ್ಷೆ ಬರೆಯಬಹುದಾಗಿದೆ.
1995 ರ ನಿಯಮ 11ರಲ್ಲಿ ಇರುವ ಅಧಿಕಾರದನ್ವಯ ಶಿಕ್ಷಣ ಇಲಾಖೆ ಸಮವಸ್ತ್ರ ಜಾರಿ ಮಾಡಿದೆ. ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಸರ್ಕಾರ ನಿಗದಿಪಡಿಸಿರುವ ಶಾಲಾ ಸಮವಸ್ತ್ರ ಕಡ್ಡಾಯ ಹಾಗೂ ಖಾಸಗಿ ಶಾಲೆಗಳಲ್ಲಿ ಆಯಾ ಆಡಳಿತ ಮಂಡಳಿಗಳು ನಿರ್ಧರಿಸಿರುವ ಸಮವಸ್ತ್ರ ಕಡ್ಡಾಯವಾಗಿದೆ ಎಂದು ಶಿಕ್ಷಣ ಇಲಾಖೆ ಹೇಳಿದೆ.
ಇನ್ನು ಪರೀಕ್ಷೆಯಲ್ಲಿ ಗೈರಾದ ಹಾಗೂ ಫೇಲಾದ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಸಿಹಿ ಸುದ್ದಿ ನೀಡಿದೆ. ಪರೀಕ್ಷೆಯಲ್ಲಿ ಗೈರು ಹಾಜರಾಗುವ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಯಲ್ಲಿ ಅವಕಾಶ ಕಲ್ಪಿಸಿದೆ.
ಇನ್ನೊಂದೆಡೆ ಪರೀಕ್ಷೆ ವೇಳೆ ಮಕ್ಕಳ ಆರೋಗ್ಯದ ಬಗ್ಗೆಯೂ ನಿಗಾ ವಹಿಸಲಾಗಿದ್ದು ಆರೋಗ್ಯ ಇಲಾಖೆಯ ಮಾರ್ಗಸೂಚಿಯಂತೆ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳು ಹಾಗೂ ಮೇಲ್ವಿಚಾರಕರು ಮಾಸ್ಕ್ ಧರಿಸುವುದರ ಜೊತೆಗೆ, ಸಾಮಾಜಿಕ ಅಂತರ ಕಡ್ಡಾಯ ಮಾಡಲಾಗಿದೆ. ಪರೀಕ್ಷೆ ಕೇಂದ್ರಗಳಲ್ಲಿ ರಿಜಿಸ್ಟರ್ ನಂಬರ್ ಸಾಮಾಜಿಕ ಅಂತರದ ಬಾಕ್ಸ್ ಗಳು ಹಾಕಿಕೊಂಡು ಸಿದ್ದತೆ ಮಾಡಿಕೊಂಡಿದ್ದಾರೆ. ಇದಲ್ಲದೆ, ಕೋವಿಡ್ ಪಾಸಿಟಿವ್ ಆಗಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಶಿಕ್ಷಣ ಇಲಾಖೆ ಪ್ರತ್ಯೇಕ ಕೊಠಡಿ ವ್ಯವಸ್ಥೆಯನ್ನು ಸಹ ಮಾಡಿದೆ.







