janadhvani

Kannada Online News Paper

ಹಿಜಾಬ್: ಅತ್ಯಗತ್ಯ ಧಾರ್ಮಿಕ ಆಚರಣೆಯ ಭಾಗವಲ್ಲ- ಹೈಕೋರ್ಟ್

ಸಮವಸ್ತ್ರಗಳನ್ನು ಕಡ್ಡಾಯಗೊಳಿಸುವ ಸರ್ಕಾರದ ಆದೇಶದಿಂದ ಮೂಲಭೂತ ಹಕ್ಕುಗಳ ಸಾಂವಿಧಾನಿಕ ಉಲ್ಲಂಘನೆ ಆಗಿಲ್ಲ ಎಂದು ಹೈಕೋರ್ಟ್

ಬೆಂಗಳೂರು: ಹಿಜಾಬ್ ಧರಿಸುವ ವಿಚಾರದಲ್ಲಿ ರಾಜ್ಯ ಸರ್ಕಾರ ನೀಡಿರುವ ಆದೇಶ ಕಾನೂನುಬದ್ಧವಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಮಂಗಳವಾರ ತೀರ್ಪು ನೀಡಿದೆ. ಕಳೆದ ತಿಂಗಳು ಮುಸ್ಲಿಂ ವಿದ್ಯಾರ್ಥಿನಿಯರು, ಶಾಲಾ ಆಡಳಿತ ಮಂಡಳಿಗಳು, ಶಿಕ್ಷಕರು ಮತ್ತು ಸರ್ಕಾರದ ಪರ ನಡೆದ ಸುದೀರ್ಘ ವಾದಗಳ ವಿಚಾರಣೆ ನಡೆಸಿದ್ದ ಹೈಕೋರ್ಟ್‌ನ ವಿಸ್ತೃತ ಪೀಠ, ತೀರ್ಪು ಪ್ರಕಟಿಸಿದೆ.

ಹಿಜಾಬ್ ಧರಿಸಿವುದು ಮುಸ್ಲಿಂ ಮಹಿಳೆಯರ ಅತ್ಯಗತ್ಯ ಧಾರ್ಮಿಕ ಆಚರಣೆಯ ಭಾಗವಲ್ಲ ಎಂದು ಹೈಕೋರ್ಟ್ ಹೇಳಿದೆ. ಈ ಕುರಿತು ಸರ್ಕಾರ ನೀಡಿದ ಆದೇಶ ಕಾನೂನುಬದ್ಧವಾಗಿದೆ. ಫೆಬ್ರವರಿ 5ರಂದು ಸರ್ಕಾರ ನೀಡಿದ ಆದೇಶವನ್ನು ಅಮಾನ್ಯಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಈ ಮೂಲಕ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದು ಅಗತ್ಯ ಎಂಬ ಮುಸ್ಲಿಂ ವಿದ್ಯಾರ್ಥಿನಿಯರ ವಾದವನ್ನು ರಿತು ರಾಜ್ ಅವಸ್ಥಿ ನೇತೃತ್ವದ ಹೈಕೋರ್ಟ್ ಪೂರ್ಣಪೀಠ ತೀರ್ಪಿನಲ್ಲಿ ಹೇಳಿದೆ.
ಸಮವಸ್ತ್ರಗಳನ್ನು ಕಡ್ಡಾಯಗೊಳಿಸುವ ಸರ್ಕಾರದ ಆದೇಶದಿಂದ ಮೂಲಭೂತ ಹಕ್ಕುಗಳ ಸಾಂವಿಧಾನಿಕ ಉಲ್ಲಂಘನೆ ಆಗಿಲ್ಲ ಎಂದು ಹೈಕೋರ್ಟ್ ಹೇಳಿದೆ. ಹಿಜಾಬ್ ಧಾರಣೆಯು ಮುಸ್ಲಿಂ ಧರ್ಮದ ಪ್ರಕಾರ ಅತ್ಯಗತ್ಯ ಧಾರ್ಮಿಕ ಆಚರಣೆಯ ಭಾಗ ಎಂಬ ಎಲ್ಲ ಅರ್ಜಿಗಳನ್ನೂ ಅದು ವಜಾಗೊಳಿಸಿದೆ.

ಮಂಗಳವಾರ ಹಿಜಾಬ್ ವಿವಾದದ ಕುರಿತಾದ ತೀರ್ಪು ಪ್ರಕಟಿಸುವ ಕಲಾಪ ಆರಂಭಿಸಿದ ಎಂಟೇ ನಿಮಿಷದಲ್ಲಿ ತೀರ್ಪು ಪ್ರಕಟಿಸಿರುವುದು ವಿಶೇಷ. ತೀರ್ಪು ಪ್ರಕಟಿಸುವುದಕ್ಕೂ ಮುನ್ನ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ಅವರು, ಇಡೀ ವಿಷಯವನ್ನು ಸಮಗ್ರ ದೃಷ್ಟಿಕೋನದಿಂದ ಪರಿಶೀಲಿಸಿ ಕೆಲವು ಪ್ರಶ್ನೆಗಳನ್ನು ರಚಿಸಿದ್ದೇವೆ ಹಾಗೂ ಅದಕ್ಕೆ ಉತ್ತರಗಳನ್ನು ಉಲ್ಲೇಖಿಸಿದ್ದೇವೆ ಎಂದು ಸಿಜೆ ಹೇಳಿದರು.

ರಾಜ್ಯದಲ್ಲಿ ಶುರುವಾಗಿದ್ದ ಹಿಜಾಬ್‌-ಕೇಸರಿ ಶಾಲು ವಿವಾದ ರಾಷ್ಟ್ರ ಮಾತ್ರವಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ವಿದ್ಯಾರ್ಥಿಗಳು ಹಿಜಾಬ್‌ ಪರ ಮತ್ತು ವಿರೋಧಿಸಿ ಬೀದಿಗಿಳಿದು ಪ್ರತಿಭಟನೆಯನ್ನು ನಡೆಸಿದ್ದರು.

ಉಡುಪಿಯ ಸರ್ಕಾರಿ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ಆರಂಭವಾಗಿದ್ದ ಈ ವಿವಾದ ಕೆಲವೇ ದಿನಗಳಲ್ಲಿ ರಾಜ್ಯಾದ್ಯಂತ ಹಬ್ಬುತ್ತಿದ್ದಂತೆ ಪ್ರಕರಣ ಗಂಭೀರ ಸ್ವರೂಪ ಪಡೆದಿತ್ತು. ಬಳಿಕ ಈ ಪ್ರಕರಣ ಹೈಕೋರ್ಟ್‌ ಮೆಟ್ಟಿಲೇರಿತ್ತು. ಮೊದಲು ನ್ಯಾ. ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ಏಕಸದಸ್ಯ ಪೀಠ ಕೆಲ ದಿನ ವಿಚಾರಣೆ ನಡೆಸಿತ್ತಾದರೂ, ಧಾರ್ಮಿಕ ಸೂಕ್ಷ್ಮ ಪ್ರಕರಣವಾದ್ದರಿಂದ ವಿಸ್ತೃತ ಪೀಠ ವಿಚಾರಣೆ ನಡೆಸುವ ಅಗತ್ಯವಿದೆಯೆಂದು ಅಭಿಪ್ರಾಯಪಟ್ಟಿತ್ತು. ಅದರಂತೆ ಮೂವರು ನ್ಯಾಯಮೂರ್ತಿಗಳ ಪೂರ್ಣಪೀಠ ರಚಿಸಲಾಗಿತ್ತು.