ಉಳ್ಳಾಲ: ಇಲ್ಲಿನ ಸಯ್ಯಿದ್ ಮದನಿ ಅರಬಿಕ್ ಕಾಲೇಜಿನಲ್ಲಿ ಸುದೀರ್ಘ ನಲವತ್ತು ವರ್ಷಗಳ ಕಾಲ ಮುದರ್ರಿಸ್ ಆಗಿ ಸೇವೆಗೈದು ಬಹಳಷ್ಟು ಮದನೀ ಪಂಡಿತರನ್ನು ಸಮಾಜಕ್ಕೆ ಅರ್ಪಿಸಿದ ಪ್ರಮುಖ ವಿದ್ವಾಂಸರೂ ನಮ್ಮೆಲ್ಲರ ಆಧ್ಯಾತ್ಮಿಕ ಗುರುವರ್ಯರೂ ತಾಝೆಕ್ಕೋಡ್ ಮೊಹಲ್ಲಾದ ಖಾಝಿಯೂ ಅಧ್ಯಕ್ಷರೂ ಆಗಿದ್ದ ತಾಝೆಕ್ಕೋಡ್ ಉಸ್ತಾದರು ಇಂದು ಮುಂಜಾನೆ (ಫೆಬ್ರವರಿ 18,2022 ಶುಕ್ರವಾರ) ತನ್ನ ತಾಝೆಕ್ಕೋಡಿನ ಮನೆಯಲ್ಲಿ ವಫಾತಾದರು. ಅವರಿಗೆ ತೊಂಬತ್ತೊಂದು ವಯಸ್ಸಾಗಿತ್ತು.
ತಾಜುಲ್ ಉಲಮಾರ ಶಿಷ್ಯಂದಿರಲ್ಲಿ ಪ್ರಮುಖರೂ ಸಮಸ್ತ ಮುಶಾವರ ಸದಸ್ಯರೂ ಆಗಿದ್ದ ಉಸ್ತಾದರು ಎಲ್ಲ ಜ್ಞಾನ ಶಾಖೆಗಳಲ್ಲಿ ಪರಿಣತರೂ ಕವಿಯೂ ಉಜ್ವಲ ವಾಗ್ಮಿಯೂ ಆಗಿದ್ದರು.
ಮಹಾನುಭಾವರ ನಿಧನಕ್ಕೆ ಮದನೀಸ್ ಅಸೋಸಿಯೇಷನ್ ಕೇಂದ್ರ ಸಮಿತಿಯು ತೀವ್ರ ಸಂತಾಪ ವ್ಯಕ್ತಪಡಿಸುತ್ತಿದೆ.ಎಲ್ಲಾ ಮದನಿಗಳು ತಮ್ಮ ಮೊಹಲ್ಲಾದಲ್ಲಿ ಉಸ್ತಾದರ ಹೆಸರಲ್ಲಿ ಯಾಸೀನ್ ಪಾರಾಯಣ ಮಾಡಿ ತಹ್ಲೀಲ್ ಹೇಳಿ ಪ್ರಾರ್ಥನಾ ಮಜ್ಲಿಸ್ ಗಳನ್ನು ಏರ್ಪಡಿಸಬೇಕಾಗಿ ಮತ್ತು ಮಯ್ಯಿತ್ ನಮಾಝ್ ನಿರ್ವಹಿಸಬೇಕಾಗಿ ವಿನಂತಿಸುತ್ತೇವೆ.
ಪತ್ನಿ ಆಸಿಯಾ ಮಡತ್ತೊಡಿ, ಮಕ್ಕಳಾದ ಫಾರೂಖ್ ಸಅದಿ , ಖದೀಜ, ಅಸ್ಮಾ, ಅಳಿಯ ಜೆಪ್ಪು ಮುದರ್ರಿಸ್ ಮುಹಮ್ಮದ್ ಮದನಿ ಸಮೇತ ಅಪಾರ ಬಂಧು ಬಳಗ ಮತ್ತು ಸಾವಿರಾರು ಶಿಷ್ಯಂದಿರನ್ನು ಅವರು ಅಗಲಿದ್ದಾರೆ. ದಫನ ಕಾರ್ಯವು ಇಂದು ಸಂಜೆ ನಾಲ್ಕು ಗಂಟೆಗೆ ತಾಝೆಕ್ಕೋಡ್ ಜುಮಾ ಮಸ್ಜಿದ್ ಖಬರ್ ಸ್ಥಾನದಲ್ಲಿ ನಡೆಯಲಿದೆ.
ಅಲ್ಲಾಹು ತಆಲ ಮಹಾನರಾದ ತಾಝೆಕ್ಕೋಡ್ ಉಸ್ತಾದರ ಪಾರತ್ರಿಕ ಪದವಿಗಳನ್ನು ಎತ್ತರಕ್ಕೇರಿಸಲಿ, ಅವರ ವಿಜ್ಞಾನದ ಮೂಲಕ ಅಲ್ಲಾಹು ನಮ್ಮನ್ನು ಅನುಗ್ರಹಿಸಲಿ – ಅಮೀನ್
ಅಧ್ಯಕ್ಷರು ಮತ್ತು ಸದಸ್ಯರು
ಮದನೀಸ್ ಅಸೋಸಿಯೇಷನ್ ಕೇಂದ್ರ ಸಮಿತಿ







