ನವದೆಹಲಿ: ಕೋವಿಡ್ ನಿಯಮ ಉಲ್ಲಂಘನೆ ಹಾಗೂ ಶಾಂತಿಗೆ ಭಂಗ ಉಂಟುಮಾಡಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ನಾಗರಿಕ ಹೋರಾಟಗಳ ನಾಯಕಿ ಆಂಗ್ ಸಾನ್ ಸೂಕಿ ಅವರಿಗೆ ಮ್ಯಾನ್ಮಾರ್ ನ್ಯಾಯಾಲಯವು ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಬಳಿಕ ಈ ಜೈಲು ಶಿಕ್ಷೆಯನ್ನು ಅಲ್ಲಿನ ಸೇನಾ ಮುಖ್ಯಸ್ಥರು ಎರಡು ವರ್ಷಗಳಿಗೆ ಇಳಿಸಿದ್ದಾರೆ.
ಮ್ಯಾನ್ಮಾರ್ ನ್ಯಾಯಾಲಯ ನೀಡಿರುವ ತೀರ್ಪಿನಿಂದ ಆಘಾತವಾಗಿದೆ ಎಂದು ಭಾರತ ತಿಳಿಸಿದೆ.
ಮ್ಯಾನ್ಮಾರ್ನಲ್ಲಿ ಸೂಕಿ ಮತ್ತು ಇತರರ ವಿರುದ್ಧ ನೀಡಲಾಗಿರುವ ತೀರ್ಪುಗಳಿಗೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗಳಿಗೆ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ನಿ ಪ್ರತಿಕ್ರಿಯಿಸಿದ್ದಾರೆ.
‘ಇತ್ತೀಚಿನ ತೀರ್ಪುಗಳಿಂದ ನಾವು ಆಘಾತಗೊಂಡಿದ್ದೇವೆ. ನೆರೆಯ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಭಾರತವು ಮ್ಯಾನ್ಮಾರ್ ನ ಪ್ರಜಾಸತ್ತಾತ್ಮಕ ಪರಿವರ್ತನೆಯನ್ನು ನಿರಂತರವಾಗಿ ಬೆಂಬಲಿಸುತ್ತಿದೆ. ಕಾನೂನು ಮತ್ತು ಪ್ರಜಾಪ್ರಭುತ್ವದ ಪ್ರಕ್ರಿಯೆಗಳನ್ನು ಎತ್ತಿ ಹಿಡಿಯಬೇಕು ಎಂಬುದರಲ್ಲಿ ನಂಬಿಕೆ ಇಟ್ಟಿದ್ದೇವೆ. ಆ ಪ್ರಕ್ರಿಯೆಯನ್ನು ದುರ್ಬಲಗೊಳಿಸುವ ಯಾವುದೇ ಘಟನೆಗಳು ನಡೆಯುವುದು ಕಳವಳದ ಸಂಗತಿ’ ಎಂದು ಅವರು ಹೇಳಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ಮ್ಯಾನ್ಮಾರ್ನಲ್ಲಿ ನಡೆದ ಸೇನಾ ದಂಗೆಯ ನಂತರ 76 ವರ್ಷದ ಸೂಕಿ ಅವರನ್ನು ಗೃಹ ಬಂಧನದಲ್ಲಿ ಇರಿಸಲಾಗಿತ್ತು. ಕೋವಿಡ್ ನಿಯಮ ಉಲ್ಲಂಘನೆ ಮತ್ತು ಸಾರ್ವಜನಿಕ ಶಾಂತಿಗೆ ಭಂಗ ತಂದಿರುವ ಆರೋಪಗಳು ಸೇರಿದಂತೆ ಒಟ್ಟು 10 ಆರೋಪಗಳು ಅವರ ಮೇಲಿವೆ. ಈ ಆರೋಪಗಳ ಸರಣಿಯ ಒಂದು ಪ್ರಕರಣದಲ್ಲಿ ಮಾತ್ರ ಪ್ರಸ್ತುತ ತೀರ್ಪು ಹೊರಬಿದ್ದಿದ್ದು, ಉಳಿದೆಲ್ಲಾ ಪ್ರಕರಣಗಳಲ್ಲಿ ಆರೋಪ ಸಾಬೀತಾದರೆ 100 ವರ್ಷಗಳಿಗೂ ಹೆಚ್ಚು ಕಾಲ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.
ಆಂಗ್ ಸಾನ್ ಸೂಕಿ ಅವರನ್ನು ಕಾರಾಗೃಹಕ್ಕೆ ಕಳುಹಿಸಲಾಗುವುದೋ ಅಥವಾ ಗೃಹ ಬಂಧನದಲ್ಲಿರಿಸಲಾಗುವುದೋ ಎಂಬುದು ಇನ್ನೂ ದೃಢಪಟ್ಟಿಲ್ಲ. ಈ ಸಂಬಂಧ ನ್ಯಾಯಾಲಯ ಏನನ್ನೂ ಹೇಳಿಲ್ಲ. ಈ ಹಿಂದೆ ಪ್ರಜಾಪ್ರಭುತ್ವ ಪರ ಹೋರಾಟ ನಡೆಸಿದ ಸೂಕಿ ಅವರನ್ನು 1989ರಲ್ಲಿ 15 ವರ್ಷಗಳ ಕಾಲ ಗೃಹ ಬಂಧನಕ್ಕೆ ಒಳಡಿಸಲಾಗಿತ್ತು.
ಅಧ್ಯಕ್ಷರಿಗೂ ನಾಲ್ಕು ವರ್ಷ ಜೈಲು
ಮ್ಯಾನ್ಮಾರ್ ಅಧ್ಯಕ್ಷರಾಗಿದ್ದ ವಿನ್ ಮಿಯಿಂಟ್ ಅವರಿಗೂ ನ್ಯಾಯಾಲಯ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ನಂತರ ಸೂಕಿ ಜತೆಗೆ ಅವರ ಶಿಕ್ಷೆಯನ್ನೂ ಅರ್ಧಕ್ಕೆ ಇಳಿಸಲಾಯಿತು.







