ನವದೆಹಲಿ,ಮೇ 26: ವಾಟ್ಸಾಫ್ ಬಳಕೆದಾರರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಇತ್ತೀಚೆಗೆ ಹೊಸ ಐಟಿ ಮಾರ್ಗಸೂಚಿಯನ್ನು ಅನುಸರಿಸುವಂತೆ ವಾಟ್ಸಾಪ್ಗೆ ತಾಕೀತು ಮಾಡಿತ್ತು. ಆದರೆ, ವಾಟ್ಸಾಪ್ ಖಾಖಾಸಗಿತನದ ನಿಯಮವಾಳಿಗೆ ಧಕ್ಕೆ ತರುವ ಸರ್ಕಾರದ ಹೊಸ ಮಾರ್ಗಸೂಚಿಗಳನ್ನು ಪ್ರಶ್ನಿಸಿ ವಾಟ್ಸಾಪ್ ಸಂಸ್ಥೆ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದೆ.ವಾಟ್ಸಾಪ್ ಬಳಕೆದಾರರ ಖಾಸಗಿತನಕ್ಕೆ ಸಂಬಂಧಿಸಿದಂತೆ ಬ್ರೆಜಿಲ್ ದೇಶದ ಸುಪ್ರೀಂ ಕೋರ್ಟ್‌ನಲ್ಲೂ ವಿಚಾರಣೆಗಳು ನಡೆಯುತ್ತಿವೆ.
ಇದೇ ಹೊತ್ತಿನಲ್ಲಿ ಕೇಂದ್ರ ಸರ್ಕಾರ ಪೆಭ್ರುವರಿ 2021 ರಲ್ಲಿ ಜಾರಿಗೆ ತಂದ ಹೊಸ ಐಟಿ ನಿಯಮಾವಳಿಗಳನ್ನು ಪ್ರಶ್ನಿಸಿ ವಾಟ್ಸಾಪ್ ಸೇರಿದಂತೆ ಹಲವು ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು ಆಕ್ಷೇಪ ವ್ಯಕ್ತಪಡಿಸಿದ್ದು ಕಾನೂನು ಸಮರಕ್ಕೆ ಸಜ್ಜಾಗಿವೆ. ಮೇ 25 (ಮಂಗಳವಾರ) ವಾಟ್ಸಾಪ್ ಸಂಸ್ಥೆ ದೆಹಲಿ ಹೈಕೋರ್ಟ್‌ನಲ್ಲಿ ಹೊಸ ಐಟಿ ನಿಯಮಾವಳಿಗಳನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದೆ.
ವಾಟ್ಸಾಪ್ ಸಂದೇಶಗಳ ಮೂಲ ಪತ್ತೆ ಹಚ್ಚಲು ಅವಕಾಶ ನೀಡುವ ಸರ್ಕಾರದ ನಿಯಮಾವಳಿಗಳು ಭಾರತ ಸಂವಿಧಾನ ನೀಡುವ ಅಭಿವ್ಯಕ್ತಿ ಸ್ವಾತಂತ್ರ‍್ಯದ ಮೂಲಭೂತ ಹಕ್ಕಿನ ಸ್ಪಷ್ಟವಾದ ಉಲ್ಲಂಘನೆಯಾಗಿದೆ. ಇದು ವಾಟ್ಸಾಪ್ ಸಂಸ್ಥೆಯ ಮೂಲ ನಿಯಮವಾದ ಎಂಡ್ ಟು ಎಂಡ್ ಎನ್ಕ್ರಿಪ್ಶನ್ ಗೆ ವಿರುದ್ಧವಾಗಿದೆ ಎಂದು ದೆಹಲಿ ಹೈಕೋರ್ಟ್ ಮುಂದೆ ವಾಟ್ಸಾಪ್ ಪರ ವಕೀಲರು ಹೇಳಿದ್ದಾರೆ.
ತನ್ನ ಬಳಕೆದಾರರ ಗೌಪ್ಯತೆಗೆ ವಾಟ್ಸಾಪ್ ಯಾವಾಗಲೂ ಬದ್ಧವಾಗಿದೆ. ತನ್ನ ಬಳಕೆದಾರರ ಖಾಸಿಗಿತನದೊಂದಿಗೆ ರಾಜಿಯಾಗಲು ಸಾಧ್ಯವಿಲ್ಲವೆಂದು ಇದೇ ಸಂದರ್ಭದಲ್ಲಿ ವಾಟ್ಸಾಫ್ ಸಂಸ್ಥೆ ನ್ಯಾಯಾಲಯಕ್ಕೆ ತಿಳಿಸಿದೆ.
ಸಂದೇಶಗಳ ಜಾಡನ್ನು, ಮೂಲವನ್ನು ಬಿಟ್ಟುಕೊಡುವುದು ಹೊಸ ಹೊಸ ಸಮಸ್ಯೆಗೆ ದಾರಿಯಾಗಲಿದೆ. ಯಾರದೋ ಸಂದೇಶವನ್ನು ಬೇರೆಯವ ಹೆಸರಿನಲ್ಲಿ ಬಿಂಬಿಸುವ, ತಪ್ಪು ವ್ಯಕ್ತಿಗಳನ್ನು ಸಂದೇಶಗಳ ಮೂಲವೆಂದು ಚಿತ್ರಿಸಲು ಹೊಸ ನಿಯಮಗಳು ಅನವುಮಾಡಿಕೊಡುತ್ತದೆ. ಹಾಗಾಗಿ ಸರ್ಕಾರದ ಹೊಸ ನಿಯಮಗಳಿಗೆ ತಡೆ ಕೋರಿ ವಾಟ್ಸಾಪ್ ನ್ಯಾಯಾಲಯದ ಮೊರೆ ಹೋಗಿದೆ.
ಮೇ 26, 2021 ಸರ್ಕಾರದ ಹೊಸ ಡಿಜಿಟಲ್ ನಿಯಮಾವಳಿಗಳನ್ನು ಅಳವಡಿಸಿಕೊಳ್ಳಲು ಡಿಜಿಟಲ್ ಮೀಡಿಯಾ ಕಂಪನಿಗಳಿಗೆ ಕಡೆಯ ದಿನವಾಗಿದ್ದು, ಒಂದು ವೇಳೆ ಸರ್ಕಾರದ ನಿಯಮಾವಳಿಗಳನ್ನು ಪಾಲಿಸಲು ವಿಫಲವಾದರೆ ವಾಟ್ಸಾಪ್, ಫೇಸ್ ಬುಕ್‌ನಂತಹ ಜಾಗತಿಕ ಕಂಪನಿಗಳನ್ನು ತಾತ್ಕಾಲಿಕವಾಗಿ ನಿಷೇಧಿಸುವುದಾಗಿ ಸರ್ಕಾರ ಹೇಳಿತ್ತು. ನಿಷೇಧದ ಭೀತಿಯ ನಡುವೆಯೇ ವಾಟ್ಸಾಪ್ ಕೇಂದ್ರ ಸರ್ಕಾರದೊಂದಿಗೆ ಸಂಘರ್ಷಕ್ಕಿಳಿದಿದೆ.
ವಾಟ್ಸಾಪ್‌ನ ಮಾತೃ ಸಂಸ್ಥೆ ಫೇಸ್‌ಬುಕ್ ತನಗೆ ನಿಯಮಾವಳಿಗಳನ್ನು ಅಳವಡಿಸಿಕೊಳ್ಳಲು ಇನ್ನಷ್ಟು ಸಮಯಬೇಕು. ಸರ್ಕಾರದೊಂದಿಗೆ ಕೆಲವು ವಿಷಯಗಳನ್ನು ಸ್ಪಷ್ಟಪಡಿಸಿಕೊಳ್ಳಬೇಕಿದೆ ಎಂದು ನಿನ್ನೆ ಹೇಳಿದೆ.
ಐಟಿ ಕಾಯ್ದೆಯಡಿ ಫೆಭ್ರವರಿ 25 ರಂದು ಕೇಂದ್ರ ಸರ್ಕಾರ ಹೊಸ ಡಿಜಿಟಲ್ ಮೀಡಿಯಾ ನೀತಿಗಳನ್ನು ಜಾರಿಗೊಳಿಸಿತ್ತು. ಈ ನಿಯಮದಡಿಯಲ್ಲಿ ಡಿಜಿಟಲ್ ಮಾಧ್ಯಮ ಸಂಸ್ಥೆಗಳು ದೂರು ಮತ್ತು ಇತರ ವಿಷಯಗಳಿಗಾಗಿ ಸರ್ಕಾರಕ್ಕೆ ಸಂಬಂಧಿಸಿದ ವ್ಯಕ್ತಿಯನ್ನು ನೇಮಿಸಿಕೊಳ್ಳಬೇಕು. ಸರ್ಕಾರಕ್ಕೆ ಸಂಬಂಧಿಸಿದ ವ್ಯಕ್ತಿಯು ವಾಟ್ಸಾಪ್ ಚಟುವಟಿಕೆಗಳ ಮೇಲೆ ನಿಗಾ ಇಡುವುದಲ್ಲದೇ ಸಂದೇಶಗಳ ಮೂಲ ಪತ್ತೆ ಹಚ್ಚಲು ಸರ್ಕಾರಕ್ಕೆ ನೆರವಾಗುತ್ತಾರೆ.
ಸರ್ಕಾರ ಮತ್ತು ಇತರ ತನಿಖಾ ಇಲಾಖೆಗಳ ದೂರಿನ ಆಧಾರದಲ್ಲಿ ಸರ್ಕಾರಿ ಅಧಿಕಾರಿಯು ವಾಟ್ಸಾಪ್ ಖಾತೆಗಳನ್ನು ನಿಷ್ಕ್ರೀಯಗೊಳಿಸುವ, ಸಂದೇಶಗಳನ್ನು ಸೃಷ್ಟಿಸಿದ ವ್ಯಕ್ತಿಯ ಗುರುತು ಪತ್ತೆ ಹಚ್ಚುವ ಕಾರ್ಯ ಮಾಡುತ್ತಾರೆ. ಆದರೆ ಸರ್ಕಾರದ ಹೊಸ ನಿಯಮಾವಳಿಗಳು ಸರಿ ಬಂದಿಲ್ಲ ಎಂದು ವಾಟ್ಸಾಪ್ ತಿಳಿಸಿದೆ.
ಬಳಕೆದಾರರ ಸಂದೇಶಗಳ ಮಾಹಿತಿಯನ್ನು, ಖಾಸಗಿತನವನ್ನು ಸಂರಕ್ಷಿಸಲು ತಾನು ಮಾಡಬೇಕಾದ ಎಲ್ಲಾ ಪ್ರಯತ್ನವನ್ನು ಕಂಪನಿ ಮಾಡುತ್ತಿದೆ. ಅದೇ ಪ್ರಯತ್ನವಾಗಿ ವಾಟ್ಸಾಪ್ ಸಂದೇಶಗಳ ಮೂಲದ ಜಾಡನ್ನು ಪತ್ತೆಹಚ್ಚುವುದನ್ನು ಕಂಪನಿ ವಿರೋಧಿಸುತ್ತಿದೆ ಎಂದು ವಾಟ್ಸಾಪ್ ಸಂಸ್ಥೆಯ ವಕ್ತಾರರು ಹೇಳಿದ್ದಾರೆ. ಬಳಕೆದಾರರ ಮಾಹಿತಿಯನ್ನು ಬಿಟ್ಟುಕೊಡುವುದೆಂದರೆ ಅವರ ಬೆರಳಚ್ಚನ್ನು ಸಂಗ್ರಹಿಸಿ ಬಳಸಿಕೊಂಡಂತೆಯೇ ಸರಿ. ವಾಟ್ಸಾಪ್‌ನ ‘ಎಂಡ್ ಟು ಎಂಡ್ ಎನ್ಕ್ರಿಪ್ಷನ್’ ವ್ಯವಸ್ಥೆಯನ್ನು ತಡೆಯುವುದೆಂದರೆ ಭಾರತ ಸಂವಿಧಾನದ ಅನುಚ್ಛೇದ 21 ರ ಅಡಿಯ ಖಾಸಗಿತನದ ಹಕ್ಕನ್ನು ಕಿತ್ತುಕೊಳ್ಳುವುದು ಎಂದೇ ಅರ್ಥ.
ಜಗತ್ತಿನಾದ್ಯಂತ ಜನರ ಖಾಸಗಿ ಬದುಕನ್ನು ನಿಗಾ ಇರಿಸಲು ಮುಂದಾಗುತ್ತಿರುವ ಸರ್ಕಾರಗಳ ವಿರುದ್ಧ ನಾಗರಿಕರು ಮತ್ತು ತಂತ್ರಜ್ಞರು ಹೋರಾಡುತ್ತಿದ್ದಾರೆ. ವಾಟ್ಸಾಪ್ ಸತತವಾಗಿ ಅವರ ಬೆಂಬಲಕ್ಕೆ ನಿಂತಿದೆ ಎಂದು ವಾಟ್ಸಾಪ್ ಹೇಳಿದೆ. ಸುಳ್ಳು ಸುದ್ದಿಗಳ ಹರಡುವಿಕೆಯನ್ನು ತಡೆಗಟ್ಟುವ ಮತ್ತು ಜನರ ಸುರಕ್ಷತೆಗಳಿಗೆ ಸಂಬಂಧಿಸಿದಂತೆ ಭಾರತ ಸರ್ಕಾರ ವಾಟ್ಸಾಪ್ ಸಹಕಾರವನ್ನು ನೀಡುತ್ತ ಬಂದಿದೆ. ವಾಟ್ಸಾಪ್ ಮೂಲಕ ನಡೆಯುವ ಆರ್ಥಿಕ ವಂಚನೆ, ಅಪರಾಧಿಕ ಕೃತ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರಕ್ಕೆ ಕಾನೂನಾತ್ಮಕವಾಗಿ ಎಲ್ಲ ರೀತಿಯ ಸಹಕಾರವನ್ನು ನೀಡುತ್ತಿದ್ದೇವೆ ಎಂದು ವಾಟ್ಸಾಪ್ ಸ್ಪಷ್ಟಪಡಿಸಿದೆ.
ಅನೇಕ ಸರ್ಕಾರಗಳು ಜನರ ಖಾಸಗಿ ಸಂದೇಶಗಳನ್ನು ಬಹಿರಂಗಗೊಳಿಸುವಂತೆ ಡಿಜಿಟಲ್ ತಂತ್ರಜ್ಞಾನ ಸಂಸ್ಥೆಗಳ ಮೇಲೆ ಒತ್ತಡ ಹೇರುತ್ತಿವೆ. ಪ್ರತಿಯೊಬ್ಬರ ಖಾಸಗಿ ಸಂದೇಶಗಳನ್ನು ಬಹಿರಂಗಗೊಳಿಸುವುದರಿಂದ ವಾಟ್ಸಾಪ್‌ನ ನೂರು ಕೋಟಿ ಬಳಕೆದಾರರ ಖಾಸಗಿ ಬದುಕಿಗೆ ತೊಂದರೆಯಾಗುತ್ತದೆ. ಪ್ರತಿನಿತ್ಯ ಕೋಟ್ಯಾಂತರ ಜನರು ವಾಟ್ಸಾಪ್ ಮೂಲಕ ತಮ್ಮ ಖುಷಿ, ದು:ಖ, ಖಾಸಗಿ ಬದುಕಿನ ಕ್ಷಣಗಳನ್ನು, ಘಟನೆಗಳನ್ನು ಪರಸ್ಪರ ಹಂಚಿಕೊಳ್ಳುತ್ತಾರೆ. ಜನರ ಖಾಸಗೀ ಜೀವನವನ್ನು ಜಗತ್ತಿನ ಮುಂದೆ ತೆರೆದಿಡುವುದು ಗಂಭೀರವಾದ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ನಾಗರಿಕರ ಖಾಸಗಿ ಬದುಕನ್ನು ನಿಗಾವಹಿಸುವುದು ಜನರಲ್ಲಿ ಅಭದ್ರತೆಯ ಭಾವವನ್ನು ಇನ್ನಷ್ಟು ಹೆಚ್ಚಿಸುತ್ತದೆ.
ಸಾವಿರಾರು ಅಮಾಯಕರು ಭಾರತ ಸರ್ಕಾರದ ಹೊಸ ನಿಯಾಮವಳಿಯಿಂದ ತಮ್ಮ ಖಾಸಗಿತನದ ಹಕ್ಕನ್ನು ಕಳೆದುಕೊಳ್ಳುತ್ತಾರೆ. ಸಾಮಾಜಿಕ ಮಾಧ್ಯಮಗಳ ಮೂಲಕ ನಡೆಯುವ ಅಪರಾಧ ಕೃತ್ಯಗಳನ್ನು ತಡಯಲು ಸರ್ಕಾರ ಮತ್ತು ಡಿಜಿಟಲ್ ಮಾಧ್ಯಮ ಸಂಸ್ಥೆಗಳು ಸೇರಿ ಸಮಗ್ರವಾದ ಯೋಜನೆಯನ್ನು ರೂಪಿಸಬೇಕಿದೆ. ಜನರ ಖಾಸಗಿ ತನದ ಬೆಲೆಯಲ್ಲಿ ಇದನ್ನು ರೂಪಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬರ ಮೂಲಭೂತ ಹಕ್ಕನ್ನು ರಕ್ಷಿಸಲು ಸರ್ಕಾರಗಳು ಬದ್ಧವಾಗಬೇಕು. ವಾಟ್ಸಾಪ್ ಬಳಕೆದಾರರ ಖಾಸಗಿತವನ್ನು ಸಂರಕ್ಷಿಸುವಲ್ಲಿ ತನ್ನ ಬದ್ಧತೆಯನ್ನು ಪ್ರದರ್ಶಿಸುತ್ತಲೇ ಬಂದಿದೆ ಎಂದು ಅಂತರ್ಜಾಲ ಬ್ಲಾಗ್‌ವೊಂದರಲ್ಲಿ ವಾಟ್ಸಾಪ್ ಸ್ಪಷ್ಟನೆಯನ್ನು ನೀಡಿದೆ.
ಮಾಹಿತಿ ತಂತ್ರಜ್ಞಾನ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು, “ಸರ್ಕಾರ ನೀಡಿದ ಗಡವಿನ ಒಳಗೆ ಡಿಜಿಟಲ್ ಮಾಧ್ಯಮ ಸಂಸ್ಥೆಗಳು ಹೊಸ ನಿಯಮಗಳನ್ನು ಜಾರಿಗೆ ತರಬೇಕು. ಇಲ್ಲವಾದರೆ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಲಿದೆ. ಕಂಪನಿಗಳೊಂದಿಗೆ ಯಾವುದೇ ಚರ್ಚೆ ಈ ಹಂತದಲ್ಲಿ ಸಾಧ್ಯವಿಲ್ಲ. ಯಾವುದೇ ಕಂಪನಿಗಳು ಇದುವರೆಗೆ ಹೊಸ ನಿಯಮಾವಳಿಗಳಂತೆ ತಮ್ಮ ವೆಬ್ ಸೈಟ್‌ನಲ್ಲಿ ಅಧಿಕಾರಿಗಳನ್ನು ನೇಮಿಸಿದ ಮಾಹಿತಿಯಿಲ್ಲ. ಇಲಾಖೆಯೊಂದಿಗೆ ಈ ಸಂಬಂಧ ಯಾವುದೇ ಡಿಜಿಟಲ್ ಮಾಧ್ಯಮ ಕಂಪನಿಯೂ ಮಾಹಿತಿಯನ್ನು ಹಂಚಿಕೊಂಡಿಲ್ಲ” ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಹೊಸ ಮಾಹಿತಿ ತಂತ್ರಜ್ಞಾನ ನೀತಿಯು ಅಂತರ್ಜಾಲ ಆಧರಿತ ಸುದ್ದಿ ಸಂಸ್ಥೆಗಳಿಗೆ ಕಡಿವಾಣ ಹಾಕಲಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69(A) ಅಡಿಯಲ್ಲಿ ಅಂತರ್ಜಾಲದ ಮೂಲಕ ಸುದ್ದಿಗಳನ್ನು ಬಿತ್ತರಿಸುವ ಸಂಸ್ಥೆಗಳನ್ನು ನಿಷೇಧಿಸುವ, ಸುದ್ದಿ ಪ್ರಸಾರವನ್ನು ತಡೆಹಿಡಿಯುವ ಕಾನೂನುಗಳನ್ನು ಹೊಸ ಮಾಹಿತಿ ತಂತ್ರಜ್ಞಾನ ನೀತಿಯಲ್ಲಿ ಕೇಂದ್ರಸರ್ಕಾರ ಸೇರಿಸಿದೆ. ಸಾರ್ವಜನಿಕರ ಸುರಕ್ಷತೆ ಮತ್ತು ಕಾನೂನು ಸುವ್ಯಸ್ಥೆಗೆ ಧಕ್ಕಯುಂಟುಮಾಡುತ್ತದೆ ಎಂಬ ಕಾರಣಗಳಡಿಯಲ್ಲಿ ಸರ್ಕಾರವು ಯಾವುದೇ ಸುದ್ದಿ ಮತ್ತು ಸುದ್ದಿ ಸಂಸ್ಥೆಗಳ ಪ್ರಸಾರವನ್ನು ತಡೆಯಬಹುದಾಗಿದೆ.
ಹೊಸ ಐಟಿ ನೀತಿಯ ವಿರುದ್ಧ ದೇಶದಲ್ಲಿ ಈಗಾಗಲೇ ಟ್ವಿಟ್ಟರ್ ಸೇರಿದಂತೆ ಅನೇಕ ಡಿಜಿಟಲ್ ಮಾಧ್ಯಮದ ದೈತ್ಯ ಸಂಸ್ಥೆಗಳು ಧ್ವನಿಯೆತ್ತಿವೆ. ದೇಶದಲ್ಲಿ ಪತ್ರಿಕಾ ಸ್ವಾತಂತ್ರ‍್ಯವನ್ನು ದಮನಗೊಳಿಸುವ ಸರ್ಕಾರದ ಪ್ರಯತ್ನದ ವಿರುದ್ಧ ಪ್ರತಿಷ್ಠಿತ ಮಾಧ್ಯಮ ಸಂಸ್ಥೆಗಳು ಇದುವರೆಗೆ ಯಾವುದೇ ಅಸಮಧಾನವನ್ನು ವ್ಯಕ್ತಪಡಿಸದಿರುವುದು ಆಶ್ಚರ್ಯ. ಸುದ್ಧಿ ಸಂಸ್ಥೆಗಳ ಹೊರತಾಗಿ ನೂರಾರು ಸ್ವತಂತ್ರ ಪತ್ರಕರ್ತರು, ಸಂವಿಧಾನ ಹಕ್ಕುಗಳ ಹೋರಾಟಗಾರರು, ನ್ಯಾಯಾಧೀಶರು, ನ್ಯಾಯವಾದಿಗಳು, ಪ್ರಿ ಪ್ರೆಸ್ ಮತ್ತು ಪ್ರೆಸ್ ಫ್ರೀಡಮ್ ಗಾಗಿ ಹೋರಾಡುತ್ತಿರುವ ಸಂಘಟನೆಗಳು ಕಾನೂನು ಹೋರಾಟ ಮತ್ತು ಡಿಜಿಟಲ್ ಅಭಿಯಾನವನ್ನು ಆರಂಭಿಸಿದ್ದಾರೆ
















ಇನ್ನಷ್ಟು ಸುದ್ದಿಗಳು
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್
ಮದ್ರಸಾ ಅಧ್ಯಾಪಕರ ಮೇಲಿನ ಹಲ್ಲೆ ಅತ್ಯಂತ ಖಂಡನೀಯ- ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ SJM ಕಿನ್ನಿಗೋಳಿ ರೇಂಜ್ ಆಗ್ರಹ