janadhvani

Kannada Online News Paper

ರಾಜ್ಯದಲ್ಲಿ ಇನ್ನೂ ಮೂರು ದಿನ ಭಾರೀ ಮಳೆ- ಆರೆಂಜ್, ರೆಡ್ ಅಲರ್ಟ್ ಘೋಷಣೆ

ಬೆಂಗಳೂರು: ನೈಋುತ್ಯ ಮುಂಗಾರು ಕರಾವಳಿ ಹಾಗೂ ಮಲೆನಾಡಿನಲ್ಲಿ ಚುರುಕಾಗಿದ್ದು, ಉತ್ತರ ಒಳನಾಡಿನ ಹಲವೆಡೆ ಭಾರೀ ಮಳೆಯಾಗುತ್ತಿದೆ. ಶನಿವಾರ ಮಧ್ಯಾಹ್ನದಿಂದಲೇ ಮೂರು ದಿನ ಉತ್ತರಕನ್ನಡ, ದಕ್ಷಿಣಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಹಾಗೂ ಹಾಸನ ಜಿಲ್ಲೆಗಳಲ್ಲಿಅತಿ ಭಾರಿ ಮಳೆಯಾಗುತ್ತಿದ್ದು, ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ರಾಜ್ಯಕ್ಕೆ ಹೊಂದಿಕೊಂಡಿರುವ ಕೇರಳದ ಕಾಸರಗೋಡು, ಕಣ್ಣೂರು ಜಿಲ್ಲೆಗಳಲ್ಲಿ ಎರಡು ದಿನ ರೆಡ್‌ ಅಲರ್ಟ್‌ಗೆ ಸೂಚಿಸಿದ್ದು, ಕರಾವಳಿ ತೀರದುದ್ದಕ್ಕೂ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ಭಾನುವಾರ ಒಳನಾಡಿನ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಧಾರವಾಡ, ಹಾವೇರಿ, ದಾವಣಗೆರೆ, ಮೈಸೂರು, ಚಾಮರಾಜನಗರ ಹಾಗೂ ಮಂಡ್ಯದಲ್ಲಿ ಯೆಲ್ಲೊಅಲರ್ಟ್‌ ಘೋಷಿಸಲಾಗಿದೆ. ಸೆ.23ರವರೆಗೆ ರಾಜ್ಯದ ಹೆಚ್ಚಿನ ಜಿಲ್ಲೆಗಳಲ್ಲಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್‌.ಪಾಟೀಲ್‌ ತಿಳಿಸಿದ್ದಾರೆ.

ಕೊಡಗಿನಲ್ಲಿ ಆರೆಂಜ್‌, ರೆಡ್‌ ಅಲರ್ಟ್‌ ಘೋಷಣೆ
ಕೊಡಗಿನಲ್ಲಿ ಶನಿವಾರ(ಸೆ.19) ದಿಂದ ಸೋಮವಾರ (ಸೆ.21) ಬೆಳಗ್ಗೆ 8.30 ತನಕ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ಸೆ.21 ರಿಂದ ಸೆ.22ರ ಬೆಳಗ್ಗೆ ತನಕ ರೆಡ್‌ ಅಲರ್ಟ್‌ ಅನ್ನು ಭಾರತೀಯ ಹವಾಮಾನ ಇಲಾಖೆ ಘೋಷಿಸಿದೆ.

ಕೊಡಗು ಸೇರಿದಂತೆ ಮಲೆನಾಡಿನ ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆ ಇದ್ದು, ಅಲ್ಲಲ್ಲಿ ಗುಡುಗು ಸಹಿತ ಸಾಧಾರಣದಿಂದ ಭಾರಿ ಮಳೆಯೂ ಸುರಿಯುವ ಸಾಧ್ಯತೆ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದರಿಂದ ಆರೆಂಜ್‌ ಮತ್ತು ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ. ಈ ಸಮಯದಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ಸೂಚಿಸಿದ್ದಾರೆ.