janadhvani

Kannada Online News Paper

ಹಣಕ್ಕಾಗಿ ಅಧಿಕಾರಕ್ಕೆ ಬಂದ ಸೋಂಕಿತ ಸರ್ಕಾರ- ರಾರಾಜಿಸುತ್ತಿದೆ ಭಿತ್ತಿ ಪತ್ರ

ಬೆಂಗಳೂರು, ಸೆ.21-ರಾಜ್ಯ ರಾಜಧಾನಿ ಬೆಂಗಳೂರಿನ ಹಲವೆಡೆ ಸೋಂಕಿತ ಸರ್ಕಾರ ಎಂಬ ಭಿತ್ತಿಪತ್ರಗಳನ್ನು ಅಂಟಿಸಲಾಗಿದೆ. ಹಣದಿಂದ, ಹಣಕ್ಕಾಗಿ, ಹಣಕ್ಕೋಸ್ಕರ ಅಧಿಕಾರಕ್ಕೆ ಬಂದ ಸೋಂಕಿನ ಸರ್ಕಾರ ಎಂದು ಭಿತ್ತಿಪತ್ರಗಳು ಎಲ್ಲೆಡೆ ರಾರಾಜಿಸುತ್ತಿವೆ. ಮೇಕ್ರಿ ಸರ್ಕಲ್, ಪ್ಯಾಲೆಸ್ ರಸ್ತೆ, ಟಿವಿ ಟವರ್ ರಸ್ತೆ, ಶಂಕರಮಠ, ಕಾಮಾಕ್ಷಿಪಾಳ್ಯ ಮತ್ತಿತರ ಪ್ರದೇಶಗಳಲ್ಲಿ ಸಾವಿರಾರು ಪೋಸ್ಟರ್‍ಗಳನ್ನು ರಾತ್ರೋರಾತ್ರಿ ಅಂಟಿಸಲಾಗಿದೆ.

ಕೊರೊನಾ ಸಂಕಷ್ಟದಲ್ಲೂ ಲೂಟಿ ಮಾಡಲು ನಿಂತಿರುವ ಸೋಂಕಿನ ಸರ್ಕಾರ ಎಂಬ ಭಿತ್ತಿಪತ್ರಗಳನ್ನು ಅನಾಮಿಕರು ನಿನ್ನೆ ರಾತ್ರಿ ಅಂಟಿಸಿರುವುದು ಪತ್ತೆಯಾಗಿದೆ. ಯಾರು ಸರ್ಕಾರದ ವಿರುದ್ಧ ಭಿತ್ತಿಪತ್ರ ಅಂಟಿಸಿದರು ಎಂಬ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ರಾಜ್ಯ ಬಿಜೆಪಿ ಸರ್ಕಾರ ಕೊರೊನಾ ಹೆಸರಿನಲ್ಲಿ ಎರಡು ಸಾವಿರ ಕೋಟಿ ಲೂಟಿ ಮಾಡಿದೆ ಎಂದು ಭಿತ್ತಿಪತ್ರದಲ್ಲಿ ಬರೆಯಲಾಗಿದೆ.

ನಗರದೆಲ್ಲೆಡೆ ರಾರಾಜಿಸುತ್ತಿರುವ ಈ ಭಿತ್ತಿಪತ್ರಗಳು ರಾಜ್ಯ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಈ ಭಿತ್ತಿಪತ್ರ ಅಂಟಿಸಿರುವವರನ್ನು ಪತ್ತೆಹಚ್ಚುವಂತೆ ರಾಜ್ಯ ಸರ್ಕಾರ ಬಿಬಿಎಂಪಿ ಮತ್ತು ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

error: Content is protected !! Not allowed copy content from janadhvani.com