janadhvani

Kannada Online News Paper

ಆನ್ಲೈನ್ ಕ್ಲಾಸ್ – ಮೊಬೈಲ್ ಕೊಳ್ಳಲು ಗೋವನ್ನು ಮಾರಿದ ಕುಲದೀಪ್ ಕುಮಾರ್

ಹಿಮಾಚಲ ಪ್ರದೇಶ : ಕೊರೋನಾ ಮಹಾ ಮಾರಿಯ ಕಾರಣ ಬಾಗಿಲು ಮುಚ್ಚಿರುವ ಶಾಲೆಗಳು ದೇಶದಾದ್ಯಂತ ಆನ್ ಲೈನ್ ತರಗತಿಗಳನ್ನು ನಡೆಸುತ್ತಿದ್ದು ಇದು ಬಡವರ ಪಾಲಿಗೆ ಕೈಗೆಟುಕದ ತುತ್ತಾಗಿದೆ. ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯಲ್ಲಿ ನಡೆದ ಘಟನೆ ಇದಕ್ಕೆ ಮತ್ತಷ್ಟು ಇಂಬು ನೀಡುತ್ತಿದೆ.

ಕಂಗ್ರಾ ಜಿಲ್ಲೆಯ ಕುಲದೀಪ್ ಕುಮಾರ್ ಎನ್ನುವವರು ತನ್ನ ಮಗಳ ಆನ್ ಲೈನ್ ತರಗತಿಗೋಸ್ಕರ ತಾನು ಸಾಕುತ್ತಿದ್ದ ಗೋವನ್ನೇ ಮಾರಿ ಬಂದ ಹಣದಲ್ಲಿ ಮಗಳಿಗೆ ಸ್ಮಾರ್ಟ್ ಫೋನ್ ಖರೀದಿ ಮಾಡಿ ಮಗಳ ಶಾಲಾ ವಿದ್ಯಾಭ್ಯಾಸಕ್ಕೆ ಕುತ್ತು ಬಾರದಂತೆ ಮಾಡಿ ಇದೀಗ ರಾಷ್ಟ್ರೀಯ ಮಾಧ್ಯಮಗಳ ಗಮನ ಸೆಳೆದಿದ್ದಾರೆ. ಎರಡೂವರೆ ತಿಂಗಳ ಹಿಂದೆ ಹತ್ತಿರದ ವ್ಯಕ್ತಿಯೊಬ್ಬರಿಂದ ಸಾಲ ಪಡೆದ ಕುಲದೀಪ್ ಮಗಳ ಅವಶ್ಯಕತೆಗೆ ಬೇಕಾದ ಫೋನ್ ಖರೀದಿಸಿ ಕೊಟ್ಟಿದ್ದಾರ್ ಇದೀಗ ಸಾಲ ನೀಡಿದ ವ್ಯಕ್ತಿ ಚುಕ್ತಾ ಮಾಡಲು ಕುಲದೀಪ್ ರಿಗೆ ಹೇಳಿದಾಗ ಬೇರೆ ದಾರಿ ಕಾಣದೆ ತಾನು ಸಾಕುತ್ತಿದ್ದ ಹಸುವನ್ನು ಮಾರಿ ಅದರಿಂದ ಬಂದ ಹಣದಲ್ಲಿ ಸಾಲ ಚುಕ್ತಾ ಮಾಡಿಕೊಂಡಿದ್ದಾರೆ.

ಘಟನೆಯಿಂದ ಎಚ್ಚೆತ್ತ ರಾಜ್ಯಾಡಳಿತ ಕುಲದೀಪ್ ರನ್ನು ಸಂಪರ್ಕಿಸಿದ್ದು ಅವರ ಹಸುವನ್ನು ವಾಪಾಸು ಪಡೆಯಲು ವ್ಯವಸ್ಥೆ ಮಾಡಿತ್ತು ಆದರೆ ಇದನ್ನು ತಿರಸ್ಕರಿಸಿದ ಕುಲದೀಪ್ ತನಗೆ ಹಸು ವಾಪಾಸು ಬೇಡ ನನ್ನ ಮನೆ ರಿಪೇರಿ ಮಾಡಿ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಅಧಿಕಾರಿಗಳು ಸ್ಪಂದಿಸಿದ್ದಾರೆ.