ದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ, ರಾಷ್ಟ್ಪೀಯ ಜನಸಂಖ್ಯಾ ನೋಂದಣಿ ವಿರುದ್ಧ ಪ್ರತಿಭಟನೆ ವೇಳೆ ಈಶಾನ್ಯ ದೆಹಲಿಯಲ್ಲಿ 2020 ಫೆಬ್ರುವರಿಯಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ಬಂಧಿಯಾಗಿದ್ದ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿನಿ ಸಫೂರಾ ಜರ್ಗರ್ ಅವರಿಗೆ ದೆಹಲಿ ಹೈಕೋರ್ಟ್ ಮಂಗಳವಾರ ಜಾಮೀನು ನೀಡಿದೆ.
ಪಿಎಚ್‌ಡಿ ವಿದ್ಯಾರ್ಥಿನಿಯಾಗಿರುವ ಸಫೂರಾ 6 ತಿಂಗಳ ಗರ್ಭಿಣಿಯಾಗಿದ್ದು ಮಾನವೀಯತೆಯ ದೃಷ್ಟಿಯಲ್ಲಿ ಅವರಿಗೆ ಜಾಮೀನು ನೀಡಲಾಗಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದ್ದಾರೆ.27 ಹರೆಯದ ಸಫೂರಾ ಅವರನ್ನು ಏಪ್ರಿಲ್ 10ರಂದು ದೆಹಲಿ ಪೊಲೀಸರ ವಿಶೇಷ ತಂಡ ಬಂಧಿಸಿತ್ತು.
ಕಾನೂನು ಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆಯಡಿಯಲ್ಲಿ ಬಂಧಿತರಾಗಿದ್ದ ಅವರಿಗೆ ಕೋರ್ಟ್ ಈ ಹಿಂದೆ ಮೂರು ಬಾರಿ ಜಾಮೀನು ನಿರಾಕರಿಸಿತ್ತು.
ಈ ಮಧ್ಯೆ ಕೋವಿಡ್ ಪರಿಸ್ಥಿತಿಯಿಂದಾಗಿ ದೇಶವೇ ಬೆಚ್ಚಿಬಿದ್ದ ಅವಧಿಯಲ್ಲಿ ಗರ್ಭಿಣಿ ಸಫೂರಾ ಅವರನ್ನು ತಿಹಾರ್ ಜೈಲಿಗೆ ರವಾನಿಸಿದ್ದಕ್ಕೆ ವಿರೋಧವೂ ವ್ಯಕ್ತವಾಗಿತ್ತು. ಇದೀಗ ನ್ಯಾಯೂಮೂರ್ತಿ ರಾಜೀವ್ ಶಖ್ದರ್ ನೇತೃತ್ವದ ಪೀಠವು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿದ್ದು, ಗರ್ಭಿಣಿಯಾಗಿರೋ ಕಾರಣ ಮಾನವೀಯತೆಯ ಆಧಾರದ ಮೇಲೆ ಜಾಮೀನು ನೀಡಿದೆ.
10 ಸಾವಿರ ರೂಪಾಯಿ ವೈಯಕ್ತಿಕ ಬಾಂಡ್ ಮೇಲೆ ಸಫೂರಾಗೆ ಜಾಮೀನು ನೀಡಿರುವ ಕೋರ್ಟ್, ಕೆಲವೊಂದು ಎಚ್ಚರಿಕೆಯನ್ನೂ ನೀಡಿದೆ. ತನಿಖೆಗೆ ಸಂಬಂಧಿಸಿರುವ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಾರದು, ತನಿಖೆಗೆ ಅಡ್ಡಿ ಉಂಟುಮಾಡಬಾರದು ಅಲ್ಲದೇ, ದೆಹಲಿಯಿಂದ ಹೊರ ಹೋಗುವಾಗ ಕೋರ್ಟ್‌ನ ಅನುಮತಿ ಪಡೆದು ಹದಿನೈದು ದಿನಕ್ಕೊಮ್ಮೆ ತನಿಖಾಧಿಕಾರಿಯೊಂದಿಗೆ ದೂರವಾಣಿ ಸಂಪರ್ಕದಲ್ಲಿರಬೇಕು ಎಂದು ಹೈಕೋರ್ಟ್ ತಿಳಿಸಿದೆ.






