janadhvani

Kannada Online News Paper

ಲಾಕ್ ಡೌನ್ ಉಲ್ಲಂಘಿಸಿ ದೀಪೋತ್ಸವ – ಬಿಜೆಪಿ ಶಾಸಕನ ವಿರುದ್ಧ ವ್ಯಾಪಕ ಟೀಕೆ

ನವದೆಹಲಿ ,ಏ. 6: ಪ್ರಧಾನಿ ಮೋದಿ ಕರೆ ನೀಡಿದಂತೆ ನಿನ್ನೆ ರಾತ್ರಿ ದೇಶದ ಹಲವು ಕಡೆ ಮನೆಯ ಒಳಗಿನ ದೀಪವನ್ನು ಆರಿಸಿ, ಹೊರಗಡೆ ದೀಪ ಹಚ್ಚಿದ್ದಾರೆ. ಆದರೆ, ಪ್ರಧಾನಿ ಮೋದಿಯವರ ಮಾತನ್ನು ಅರ್ಥೈಸದ ಹಲವು ಮಂದಿ ಬೀದಿಗಿಳಿದು, ಜನರನ್ನು ಸೇರಿಸಿ ದೀಪಾಂದೋಲನ ನಡೆಸಿ ಕುಣಿದು ಕುಪ್ಪಳಿಸಿದ್ದಾರೆ.ಒಂದು ಮಹಾಮಾರಿ ಕಾಯಿಲೆಗೆ ಈ ರೀತಿಯಾಗಿ ಸಂಭ್ರಮಿಸಿದ್ದು, ಭಾರತದಲ್ಲಿ ಮಾತ್ರ.

ಲಾಕ್ ಡೌನ್ ಆದೇಶವನ್ನು ದಿಕ್ಕರಿಸಿ ಬೀದಿಗಿಳಿದ ತೆಲಂಗಾಣದ ಬಿಜೆಪಿ ಶಾಸಕ ರಾಜಾ ಸಿಂಗ್ ತನ್ನ ಬೆಂಬಲಿಗರನ್ನು ಒಗ್ಗೂಡಿಸಿ, ‘ಚೀನಾ ವೈರಸ್ ಗೋ ಬ್ಯಾಕ್’ ‘ಚೈನೀಸ್ ವೈರಸ್ ಗೋ ಬ್ಯಾಕ್’ ಎಂದು ಬಹಿಷ್ಕಾರ ಹಾಕುತ್ತಾ, ಮುಖಕ್ಕೆ ಮಾಸ್ಕ್ ಕೂಡಾ ಧರಿಸದೆ ನಿನ್ನೆ ರಾತ್ರಿ ದೀಪೋತ್ಸವ ನಡೆಸಿದ್ದು ಸಾಮಾಜಿಕ ತಾಣದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಜನರು ಒಗ್ಗೂಡುವುದನ್ನು ತಡೆಯಲು ಮಂದಿರ,ಮಸೀದಿ, ಚರ್ಚ್ ಮುಂತಾದ ಆರಾಧನಾಲಯಗಳನ್ನೇ ಮುಚ್ಚಲಾಗಿದೆ. ಜನರು ಮಾರುಕಟ್ಟೆಗೆ ಇಳಿಯದಂತೆ ದೇಶದಲ್ಲಿ ಲಾಕ್ ಡೌನ್ ಕೂಡಾ ಜಾರಿಯಲ್ಲಿದೆ. ಆದರೆ ಇದು ಯಾವುದನ್ನೂ ಲೆಕ್ಕಿಸದೆ, ತಮ್ಮ ಬೆಂಬಲಿಗರೊಂದಿಗೆ ದೀಪ, ಟಾರ್ಚ್​ಗಳನ್ನು ಹತ್ತಿಸಿದ್ದ ರಾಜಾ ಸಿಂಗ್ ಚೈನೀಸ್ ವೈರಸ್ ಗೋ ಬ್ಯಾಕ್ ಎಂದು ಘೋಷಣೆ ಕೂಗಿದ್ದಾರೆ. ಕೊರೋನಾ ವಿರುದ್ಧ ತಮ್ಮ ವಿಭಿನ್ನ ರೀತಿಯ ಪ್ರತಿಭಟನೆಯ ಫೋಟೋವನ್ನು ಸ್ವತಃ ರಾಜಾ ಸಿಂಗ್ ಅವರೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ ಮಾಡಿಕೊಂಡಿದ್ದಾರೆ.

ಈ ರೀತಿ ಘೋಷಣೆ ಕೂಗುವಾಗ ಶಾಸಕ ರಾಜಾ ಸಿಂಗ್ ಮಾಸ್ಕ್ ಅನ್ನು ಮುಖಕ್ಕೆ ಹಾಕದೆ ಕುತ್ತಿಗೆಗೆ ಸಿಕ್ಕಿಸಿಕೊಂಡಿದ್ದರು, ಜನರನ್ನು ಸೇರಿಸಿಕೊಂಡು ಕೊರೋನಾ ಹರಡಲು ಕಾರಣರಾದ,ಶಾಸಕ ರಾಜಾ ಸಿಂಗ್, ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಜನನಾಯಕರೇ ಈ ರೀತಿ ಮಾಡಿದರೆ ಸಾಮಾನ್ಯ ಜನರಲ್ಲಿ ಜಾಗೃತಿ ಮೂಡಿಸುವುದು ಹೇಗೆ? ಹೀಗೆ ಜನರನ್ನು ಸೇರಿಸಿರುವ ಇವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲವೇ? ಎಂದು ಟ್ವಿಟ್ಟರ್​ನಲ್ಲಿ ಅನೇಕರು ಪ್ರಶ್ನಿಸಿದ್ದಾರೆ.