janadhvani

Kannada Online News Paper

ಬೆಂಗಳೂರು,ಏ.05: ರಾಜ್ಯದಲ್ಲಿ ಕೋವಿಡ್​​-19 ಪಾಸಿಟಿವ್​​ ಪ್ರಕರಣಗಳು ದಿನೇದಿನೇ ಹೆಚ್ಚಾಗುತ್ತಲೇ ಇವೆ. ಕೊರೋನಾ ವೈರಸ್​​​ಗೆ ಬಲಿಯಾಗುತ್ತಿರುವರ ಸಂಖ್ಯೆಯೂ​ ಕ್ಷಿಪ್ರವಾಗಿ ಏರಿಕೆಯಾಗುತ್ತಿರುವ ಕುರಿತು ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಬಿ.ಎಸ್​​ ಯಡಿಯೂರಪ್ಪ, ವಿಶ್ವದಾದ್ಯಂತ ಕೋವಿಡ್ – 19 ಸೋಂಕಿನಿಂದ ಉಂಟಾಗುತ್ತಿರುವ ಹಾನಿ ಎಲ್ಲರಿಗೂ ತಿಳಿದಿದೆ. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜನರ ಜೀವ ರಕ್ಷಣೆಗಾಗಿ ದೇಶಾದ್ಯಂತ 14.04.2020 ರವರೆಗೆ ಲಾಕ್‍ಡೌನ್ ಘೋಷಣೆ ಮಾಡಿದ್ದಾರೆ. ಹಾಗಾಗಿ ರಾಜ್ಯದ ಜನತೆ ಲಾಕ್​​ಡೌನ್ ಅನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವಿ ಮಾಡಿದ್ದಾರೆ.

ಇನ್ನು, ನಮ್ಮ ರಾಜ್ಯದಲ್ಲಿಯೂ ಬೀದರ್, ಮೈಸೂರು, ಮಂಗಳೂರು, ಬೆಂಗಳೂರು ನಗರ, ಕಲಬುರಗಿ ಜಿಲ್ಲೆಗಳಲ್ಲಿ ವೈರಸ್ ಪೀಡಿತರ ಸಂಖ್ಯೆ ದಿನೇ ದಿನೇ ಗಣನೀಯವಾಗಿ ಹೆಚ್ಚುತ್ತಿದೆ. ಈ ವೈರಸ್ ನಿಯಂತ್ರಣಕ್ಕಾಗಿ ಗಡಿ ಪ್ರದೇಶಗಳನ್ನು ಮುಚ್ಚುವುದು, ಸಾರ್ವಜನಿಕವಾಗಿ ಹೆಚ್ಚು ಹೆಚ್ಚು ಓಡಾಡುವಂತಹ ಪ್ರದೇಶಗಳಿಗೆ ನಿರ್ಬಂಧಗಳನ್ನು ವಿಧಿಸಿರುವುದು, ಧಾರ್ಮಿಕ ಸ್ಥಳಗಳಲ್ಲಿ ಜನರು ಸೇರದಂತೆ ನಿರ್ಬಂಧಿಸುವುದರ ಜೊತೆಗೆ ಕೊರೋನಾ ವೈರಸ್ ಹರಡುವಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರವು ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಆದ್ದರಿಂದ ಲಾಕ್ ಡೌನ್​​ನ ಹಿಂದಿನ ಆಶಯವನ್ನು ಹಾಗೂ ದೇಶಕ್ಕೆ ಎದುರಾಗಬಹುದಾದ ಅಪಾಯವನ್ನು ಅರಿತು ಕಟ್ಟುನಿಟ್ಟಾಗಿ ಲಾಕ್ ಡೌನ್ ಆದೇಶ ಪಾಲಿಸಬೇಕಾಗಿದೆ.” ಎಂದರು ಯಡಿಯೂರಪ್ಪ.

ಪಾಶ್ಚಿಮಾತ್ಯ ದೇಶಗಳಲ್ಲಿ ಈಗಾಗಲೇ ಕೋವಿಡ್-19 ನಿಯಂತ್ರಣಕ್ಕೆ ಸಿಗದ ಸ್ಥಿತಿ ತಲುಪಿದೆ. ಪ್ರಸ್ತುತ ಮಾನ್ಯ ಪ್ರಧಾನ ಮಂತ್ರಿಯವರು ಸೂಚಿಸಿರುವ ದೇಶವ್ಯಾಪ್ತಿ ಲಾಕ್‍ಡೌನ್ ಅವಧಿಯು ಏಪ್ರಿಲ್ 14 ರಂದು ಮುಕ್ತಾಯಗೊಳ್ಳುತ್ತಿದ್ದು, ಈ ಲಾಕ್‍ಡೌನನ್ನು ವಿಸ್ತರಿಸಬೇಕೋ ಬೇಡವೋ ಎಂಬ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ಮುಂದಿನ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಆದುದರಿಂದ ಈ ಕುರಿತಂತೆ ಸಲಹೆ ಸೂಚನೆಗಳನ್ನು ನೀಡುವಂತೆ ಮುಖ್ಯಮಂತ್ರಿಗಳು ಮನವಿ ಮಾಡಿದ್ದಾರೆ.

ಬೆಂಗಳೂರಿನ ಮಡಿವಾಳದಲ್ಲಿ ಇನ್ನಿಬ್ಬರಿಗೆ ಇಂದು ಕೊರೋನಾ ವೈರಸ್ ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 146ಕ್ಕೆ ಏರಿಕೆಯಾಗಿದೆ. ಈಗಾಗಲೇ ಕರ್ನಾಟಕದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ.ಈ ಬಗ್ಗೆ ಮಾಹಿತಿ ನೀಡಿರುವ ಆರೋಗ್ಯ ಇಲಾಖೆ, ರಾಜ್ಯದಲ್ಲಿ ಇಂದು ಎರಡು ಹೊಸ ಸೋಂಕಿತ ಪ್ರಕರಣ ಪತ್ತೆಯಾಗಿರುವುದನ್ನು ದೃಢಪಡಿಸಿದೆ. ಬೆಂಗಳೂರಿನ ಮಡಿವಾಳದಲ್ಲಿ ವಾಸವಾಗಿರುವ ಗಂಡ-ಹೆಂಡತಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. 68 ವರ್ಷದ ವ್ಯಕ್ತಿ ಮಾ. 22ರಂದು ದುಬೈನಿಂದ ಬೆಂಗಳೂರಿಗೆ ಬಂದಿದ್ದರು. ಅವರಿಗೆ ಕೊರೋನಾ ವೈರಸ್ ತಗಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

error: Content is protected !! Not allowed copy content from janadhvani.com