janadhvani

Kannada Online News Paper

ಪುತ್ತೂರು: ನವ ಇತಿಹಾಸ ನಿರ್ಮಿಸಿ, ಪೌರತ್ವ ಸಂರಕ್ಷಣಾ ಸಮಾವೇಶದಲ್ಲಿ ಜನ ಸಾಗರ

ಪುತ್ತೂರು: ಪುತ್ತೂರಿನಲ್ಲಿ ಹೊಸ ಇತಿಹಾಸವನ್ನು ನಿರ್ಮಿಸಿ ಮುಸ್ಲಿಂ ಒಕ್ಕೂಟದ ನೇತೃತ್ವದಲ್ಲಿ ಶುಕ್ರವಾರ ಅಪರಾಹ್ನ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ನಡೆದ ಪೌರತ್ವ ಸಂರಕ್ಷಣಾ ಸಮಾವೇಶದಲ್ಲಿ ಜನ ಸಾಗರ.

ಸಮಾರಂಭದಲ್ಲಿ ಮುಖ್ಯ ಭಾಷಣ ನಡೆಸಿದ ಖ್ಯಾತ ಚಿಂತಕ ಅಂಕಣಕಾರ ಶಿವಸುಂದರ “ಭಾರತವು ಕೇವಲ ಒಂದು ಧರ್ಮಕ್ಕೆ ಸೀಮಿತವಾದ ದೇಶವಲ್ಲ. ಇದು ಎಲ್ಲರಿಗೂ ಸೇರಿದ ಜಾತ್ಯಾತೀತ ದೇಶವಾಗಿದ್ದು, ಎನ್‍ಆರ್ ಸಿ ಮತ್ತು ಸಿಎಎ ಇಲ್ಲಿನ ಮುಸ್ಲಿಮರ ಎದೆಗೆ ಚೂರಿ ಇರಿದರೆ ಹಿಂದೂಗಳಿಗೆ ಬೆನ್ನಲ್ಲಿ ಚೂರಿ ಇರಿಯುವ ಅಪಾಯಕಾರಿ ಕಾಯ್ದೆಯಾಗಿದೆ. ಪೌರತ್ವ ಕಾಯ್ದೆಯ ವಿರುದ್ದದ ಹೋರಾಟ ಕೇವಲ ಮುಸ್ಲಿಮರ ಮಾತ್ರ ಹೋರಾಟವಲ್ಲ. ಇದು ದೇಶದ ಎಲ್ಲರ ಹೋರಾಟವಾಗಿದೆ. ಪೌರತ್ವ ಸಮೀಕ್ಷೆಯು ಧರ್ಮಾಧಾರಯುತವಾಗಿ ನಡೆಯುವುದಲ್ಲ ಧಮನಾಧಾರಿತವಾಗಿ ನಡೆಯಬೇಕಾಗಿದೆ” ಎಂದು ಹೇಳಿದರು.

ಇಂದು ದೇಶ ಆಳುತ್ತಿರುವವರು ಎಂದೂ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದವರಲ್ಲ. ಇಲ್ಲಿನ ಹಿಂದೂಗಳು ಮತ್ತು ಮುಸ್ಲಿಮರ ಐಕ್ಯತೆಯ ಕಾರಣದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿತ್ತು. ಇವರಿಗೆ ದೇಶದ ಸ್ವಾತಂತ್ರ್ಯ ಹೋರಾಟದ ಅಸ್ಮಿತತೆಯ ಅರಿವಿಲ್ಲ. ದೇಶ ಕಂಡ ಅತ್ಯಂತ ಅಪ್ರಾಮಾಣಿಕ ಪ್ರಧಾನಿ ಮತ್ತು ಗೃಹ ಸಚಿವರು ಭಾರತದ ಅಭಿವೃದ್ಧಿಯ ವಿಚಾರ ಬಿಟ್ಟು ಪಾಕಿಸ್ಥಾನದ ಭಜನೆ ಮಾಡುತ್ತಿದ್ದಾರೆ. ಧೇಶವನ್ನು ಅರ್ಥಮಾಡಿಕೊಳ್ಳದ ಇಂತಹ ವ್ಯಕ್ತಿಗಳು ಎನ್‍ಆರ್ ಸಿ, ಸಿಎಎ ಕಾಯ್ದೆಗಳನ್ನು ದೇಶದಲ್ಲಿ ಜಾರಿಗೊಳಿಸುತ್ತಿದ್ದಾರೆ. ಸಿಎಎ ಕಾಯ್ದೆಯಲ್ಲಿ ಮುಸ್ಲಿಮರನ್ನು ಹೊರಗಿಟ್ಟಿರುವುದು ಪ್ರಶ್ನಾರ್ಹವಾಗಿದೆ. ಈ ಕಾಯ್ದೆಯ ಮೂಲಕ ಮುಸ್ಲಿಮರ ವಿರುದ್ದ ಗೂಬೆ ಕೂರಿಸುವುದು ಇವರ ಮೂಲ ಉದ್ದೇಶವಾಗಿದೆ. ಕಾಯ್ದೆಯ ಹಿಂದೆ ನಿರಾಶ್ರಿತರಿಗೆ ಪೌರತ್ವ ನೀಡುವ ಉದಾತ್ತ ಉದ್ದೇಶವಿಲ್ಲದೆ ಮುಸ್ಲಿಮರನ್ನು ಓಡಿಸುವ ಸ್ಪಷ್ಟ ಉದ್ದೇಶವಿದೆ ಎಂದರು.

ಪೌರತ್ವ ಕಾಯಿದೆ ಹಿಂದೆ ದೊಡ್ಡದೊಂದು ಹಿಡನ್ ಅಜೆಂಡಾ ಅಡಗಿದೆ. ಬ್ರಾಹ್ಮಣಶಾಹಿ ಅಲ್ಲದವರನ್ನು ದೇಶದ ಎರಡನೇ ದರ್ಜೆ ಪ್ರಜೆಗಳನ್ನು ಮಾಡುವ ಹುನ್ನಾರ ಈ ಕಾಯಿದೆ ಮೂಲಕ ನಡೆಯುತ್ತಿದೆ. ಇದನ್ನು ದೇಶ ರಕ್ಷಣೆ ಮಾಡುವ ಜನತೆ ನಮ್ಮ ಬೀದಿ ಸಂಸತ್ತಿನಲ್ಲಿ ಪ್ರಶ್ನೆ ಮಾಡಬೇಕಾಗಿದೆ. ಈ ಪ್ರಶ್ನೆ ಮುಸ್ಲಿಮರಿಗೆ ಮಾತ್ರ ಸೀಮಿತವಲ್ಲ. ಈ ದೇಶದ ಬಡಜನತೆ, ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗದ ಜನತೆಯ ನಾಗರಿಕತ್ವವನ್ನು ಕಿತ್ತುಕೊಳ್ಳುವ ಕಾಯಿದೆಯಾಗಿದೆ. ದೇಶದ ಪಾಲಿಗೆ ಮಾರಕವಾಗಲಿದೆ. ಇಂದು ಸಾಕ್ಷಿ ಪುರಾವೆ ಆಧಾರದಲ್ಲಿ ದೇಶದ ನ್ಯಾಯಾಲಯಗಳು ಕೆಲಸ ನಿರ್ವಹಿಸುತ್ತಿಲ್ಲ. ಹಾಗಾಗಿ ನಾವು ಬೀದಿ ಸಂಸತ್ತಿನಲ್ಲಿ ಉತ್ತರ ಕೊಡಬೇಕಾಗಿದೆ. ದೇಶದಲ್ಲಿ ಇದಕ್ಕಾಗಿ 2ನೇ ದೊಡ್ಡ ಸ್ವಾತಂತ್ರ್ಯ ಸಂಗ್ರಾಮ ನಡೆಯಬೇಕಾಗಿದೆ. ಇಲ್ಲದಿದ್ದರೆ ನಮಗೆ ದೇಶ ದಕ್ಕುವುದು ಕಷ್ಟ ಎಂದು ಅವರು ಹೇಳಿದರು. ಇದು ಕೇವಲ ಮುಸ್ಲಿಂ ಸಮುದಾಯದ ಮಾತ್ರ ಪ್ರಶ್ನೆಯಲ್ಲ. ಎಲ್ಲರ ಪ್ರಶ್ನೆಯಾಗಿದೆ ಎಂದರು.

ಚಿಂತಕ ಮಹೇಂದ್ರ ಕುಮಾರ್ ಕೊಪ್ಪ ಮಾತನಾಡಿ, ಪೌರತ್ವ ತಿದ್ದುಪಡಿ ಕಾಯಿದೆ ಕೇವಲ ಮುಸ್ಲಿಮರಿಗೆ ಮಾತ್ರ ಅಪಾಯಕಾರಿಯಲ್ಲ. ಇದು ಇಲ್ಲಿನ ಹಿಂದುಗಳಿಗೆ ಹೆಚ್ಚು ಅಪಾಯಕಾರಿಯಾಗಿದೆ. ಕರಾವಳಿಯ ಬಂಟ, ಬಿಲ್ಲವ, ಒಕ್ಕಲಿಗರು ಸೇರಿದಂತೆ ಹಿಂದೂ ಸಮುದಾಯದ ಬಡವರು, ಅನಾಥರು, ಗಿರಿಜನರು ಈ ಕಾಯಿದೆಗೆ ಹೆಚ್ಚು ಬಲಿಯಾಗಲಿದ್ದಾರೆ. ಅಖಂಡತೆ, ದೇಶಭಕ್ತಿ, ರಾಷ್ಟ್ರೀಯತೆಯ ಬಗ್ಗೆ ಮಾತನಾಡುತ್ತಾ ಜನರಲ್ಲಿ ಭ್ರಮೆ ಸೃಷ್ಠಿಸಿ ಮನಸ್ಸುಗಳನ್ನು ಛಿದ್ರಗೊಳಿಸುತ್ತಿದ್ದಾರೆ ಎಂದು ಆರೋಪಿಸಿದರು.

ಒಡಕು ಸೃಷ್ಠಿ ಮತ್ತು ಧ್ವೇಷ ಸೃಷ್ಠಿಯ ಮೂಲಕ ದೇಶ ಕಟ್ಟಲು ಸಾಧ್ಯವಿಲ್ಲ. ಶಾಂತಿ, ಪ್ರೀತಿ ಮತ್ತು ಸಾಮರಸ್ಯದಿಂದ ದೇಶವನ್ನು ಕಟ್ಟಬಹುದು. ಬಿಜೆಪಿ ದೇಶವನ್ನು ಒಡೆದು ಹಾಳು ಮಾಡುತ್ತಿದೆ. ವಿರೋಧ ಪಕ್ಷಗಳು ಅದನ್ನು ಕಟ್ಟುವ ಕೆಲಸವನ್ನು ಈ ತನಕ ಮಾಡಿಲ್ಲ. ಇನ್ನಾದರೂ ಈ ಬಗ್ಗೆ ಚಿಂತನೆ ನಡೆಸಬೇಕಾಗಿದೆ ಎಂದರು.

ಎಸ್ಕೆಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ, ಎಸ್ಸೆಸ್ಸೆಫ್ ನಾಯಕ ಸುಫ್ಯಾನ್ ಸಖಾಫಿ, ಜೆಡಿಎಸ್ ಮುಖಂಡ ಎಂ.ಬಿ.ಸದಾಶಿವ, ಕಾಂಗ್ರೇಸ್ ಮುಖಂಡ ಕಾವು ಹೇಮನಾಥ್ ಶೆಟ್ಟಿ, ಪಿಎಫ್‍ಐ ಮುಖಂಡರಾದ ಸಿ.ಎಂ.ನಾಸರ್, ಶಾಫಿ ಬೆಳ್ಳಾರೆ ಮತ್ತಿತರರು ಮಾತನಾಡಿದರು.

ಪುತ್ತೂರು ಕೇಂದ್ರ ಜುಮ್ಮಾ ಮಸೀದಿಯ ಮುದರ್ರಿಸ್ ಸಯ್ಯದ್ ಅಹಮ್ಮದ್ ಪೂಕೋಯ ತಂಙಳ್ ಅವರು ದುವಾ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪುತ್ತೂರು ತಾಲೂಕು ಸಂಯುಕ್ತ ಜಮಾತ್ ಅಧ್ಯಕ್ಷ ಹಾಜಿ ಎಸ್.ಇಬ್ರಾಹಿ ಕಮ್ಮಾಡಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಮುಸ್ಲಿಂ ಜಮಾತ್ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಕುಂಬ್ರ ಕೆಐಸಿ ಅಧ್ಯಕ್ಷ ಕೆ.ಪಿ.ಅಹಮ್ಮದ್ ಹಾಜಿ, ಎಸ್ಕೆಎಸ್ಸೆಎಫ್ ಅಧ್ಯಕ್ಷ ತಾಜುದ್ದೀನ್ ರಹ್ಮಾನ್, ವಿವಿಧ ಸಂಘಟನೆಗಳ ಮುಖಂಡರಾದ ಕೆ.ಎಚ್.ಖಾಸಿಂ ಹಾಜಿ ಕೂರ್ನಡ್ಕ, ಮಹಮ್ಮದ್ ಬಡಗನ್ನೂರು, ಬಿ.ಕೆ.ಅಬ್ದುಲ್ ರಝಾಕ್ ಹಾಜಿ, ಯುನಿಟಿ ಹಸನ್ ಹಾಜಿ, ಇಬ್ರಾಹಿಂ ಗೋಳಿಕಟ್ಟೆ, ಅಬ್ದುಲ್ ಅಝೀಝ್ ಕಾವು, ಡಾ.ಸುಕುಮಾರ ಗೌಡ, ಎಂಎಸ್ ಮಹಮ್ಮದ್, ವೆಂಕಪ್ಪ ಗೌಡ ಸುಳ್ಯ, ಬಿ.ಎಸ್.ಶಕೂರ್ ಹಾಜಿ, ಜಾಬೀರ್ ಅರಿಯಡ್ಕ, ನಿರ್ಮಲ್ ಕುಮಾರ್ ಜೈನ್, ಎಚ್.ಮಹಮ್ಮದಾಲಿ, ರಿಜಾಝ್ ಅರೂನ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮುಸ್ಲಿಂ ಒಕ್ಕೂಟದ ಸಂಚಾಲಕ ಅಶ್ರಫ್ ಕಲ್ಲೇಗ ಸ್ವಾಗತಿಸಿದರು. ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಎಲ್. ಟಿ. ಅಬ್ದುಲ್ ರಝಾಕ್ ಹಾಜಿ ವಂದಿಸಿದರು. ನೋಟರಿ ನ್ಯಾಯವಾದಿ ನೂರುದ್ದೀನ್ ಸಾಲ್ಮರ ನಿರೂಪಿಸಿದರು.