ಕಾಸರಗೋಡು: ಭಾರತದಲ್ಲಿರುವ ಮುಸ್ಲಿಮರು ಎಲ್ಲಿಂದಲೋ ವಲಸೆ ಬಂದವರಲ್ಲ. ಅವರು ಈ ಭೂಮಿಯಲ್ಲಿ ಜನಿಸಿದವರಾಗಿದ್ದಾರೆ ಎಂದು ಭಾರತದ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಹೇಳಿದ್ದಾರೆ.

ಮುಸ್ಲಿಮರು ಮರಣದವರೆಗೂ ಭಾರತದಲ್ಲಿ ವಾಸಿಸಲಿದ್ದಾರೆ ಮತ್ತು ಯಾರೂ ಭಯಪಡಬೇಕಾಗಿಲ್ಲ ಎಂದು ಕಾಂತಪುರಂ ಹೇಳಿದರು. ಅವರು ಕಾಸರಗೋಡಿನ ದೇಳಿಯಲ್ಲಿ ನಡೆದ ಸಅದಿಯ್ಯಾ ಸುವರ್ಣ ಮಹೋತ್ಸವ ಸಮ್ಮೇಳನದಲ್ಲಿ ಮುಖ್ಯ ಭಾಷಣ ಮಾಡುತ್ತಿದ್ದರು.


ಭಾರತದಲ್ಲಿ ಮುಸ್ಲಿಮರು ಮಾನವೀಯತೆಯ ವಿರುದ್ಧ ಏನನ್ನೂ ಮಾಡಿಲ್ಲ. ಅವರು ಭಾರತದ ವಿರುದ್ಧ ಅಥವಾ ಇತರ ದೇಶಗಳ ವಿರುದ್ಧ ಯಾವುದೇ ಕೆಲಸ ಮಾಡಿಲ್ಲ. ಮುಸ್ಲಿಮರು ಶಾಂತಿ ಮತ್ತು ಸಾಮರಸ್ಯದಿಂದ ಬದುಕುತ್ತಿರುವವರಾಗಿದ್ದು, ಖುರ್‌ಆನ್ ಕೂಡ ಅದನ್ನೇ ಕಲಿಸುತ್ತದೆ. ಒಂದು ಪ್ರದೇಶದಲ್ಲಿ ಮುಸ್ಲಿಮರು ಮಾತ್ರ ವಾಸಿಸುತ್ತಿದ್ದರೆ, ಅಲ್ಲಿಗೆ ಇತರ ಧರ್ಮದ ಯಾರಾದರೂ ಬಂದರೆ ಸಂಪೂರ್ಣ ರಕ್ಷಣೆ ನೀಡಬೇಕು ಎಂದು ಖುರ್‌ಆನ್ ಘೋಷಿಸುತ್ತದೆ. ಪ್ರವಾದಿ (ಸ) ಅವರು ಕೂಡ ಇದನ್ನೇ ಕಲಿಸಿಕೊಟ್ಟಿದ್ದಾರೆ ಎಂದು ಕಾಂತಪುರಂ ಹೇಳಿದರು.

ಸಭೆಯ ಕೊನೆಯಲ್ಲಿ ಸೈಯದ್ ಅಲಿ ಬಫಾಕಿ ತಂಗಲ್ ಪ್ರಾರ್ಥಿಸಿದರು. ದುಬೈ ಔಖಾಫ್ ನಿರ್ದೇಶಕ ಉಮರ್ ಖತೀಬ್ ಉದ್ಘಾಟಿಸಿದರು. ಸಅದಿಯ್ಯಾದ ಅಧ್ಯಕ್ಷ ಸೈಯದ್ ಕೆ.ಎಸ್. ಅಟಕೋಯ ಅಧ್ಯಕ್ಷತೆ ವಹಿಸಿದ್ದರು. ಸೈಯದ್ ಫಜಲ್ ಕೊಯಮ್ಮ ತಂಗಲ್ ಕೂಡ ಸಮಾರೋಪ ಪ್ರಾರ್ಥನೆ ನೆರವೇರಿಸುವರು.


ಸಮಸ್ತದ ಅಧ್ಯಕ್ಷ ರಈಸುಲ್ ಉಲಮಾ ಇ. ಸುಲೈಮಾನ್ ಮುಸ್ಲಿಯಾರ್ ಸನದುದಾನ ನಿರ್ವಹಿಸಿದರು. ಉಡುಪಿ ಖಾಝಿ ಬೆಕಲ್ ಇಬ್ರಾಹೀಂ ಮುಸ್ಲಿಯಾರ್ ಮುಖ್ಯ ಭಾಷಣ ಮಾಡಿದರು. ಸೈಯದ್ ಇಬ್ರಾಹೀಂ ಖಲೀಲ್ ಅಲ್-ಬುಖಾರಿ, ತಾಜುಶ್ಶರೀಅ ಎಂ.ಅಲಿಕುಂಞಿ ಮುಸ್ಲಿಯಾರ್, ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ, ಪಟ್ಟುವಂ ಕೆ.ಪಿ.ಅಬೂಬಕರ್ ಮುಸ್ಲಿಯಾರ್, ಎ.ಪಿ.ಅಬ್ದುಲ್ಲ ಮುಸ್ಲಿಯಾರ್ ಮಣಿಕ್ಕೋತ್, ಸೈಯದ್ ತ್ವಾಹಾ ತಂಙಳ್ ಸಖಾಫಿ, ರಾಶಿದ್ ಬುಖಾರಿ, ಸಿ.ಎಂ.ಇಬ್ರಾಹೀಂ ಮಾತನಾಡಿದರು.


ಶೈಖ್ ಮುಹಮ್ಮದ್ ಶೇಖ್ ಅಲ್-ಹಾಶಿಮಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕೊಡಂಪುಝ ಬಾವಾ ಉಸ್ತಾದ್ ಅವರಿಗೆ ನೂರುಲ್ ಉಲಮಾ ಪ್ರಶಸ್ತಿ ನೀಡಲಾಯಿತು. ವೈ.ಅಬ್ದುಲ್ಲಕುಂಞಿ ಹಾಜಿ, ಎ.ಪಿ.ಅಬ್ದುಲ್ ಕರೀಮ್ ಹಾಜಿ ಚಾಲಿಯಂ, ಅಬ್ದುರ್ರಹ್ಮಾನ್ ಹಾಜಿ ಕುಟ್ಟೂರು, ಅಬ್ದುಲ್ ಜಲೀಲ್ ಹಾಜಿ ಅಜ್ಮಾನ್ ಪ್ರಶಸ್ತಿ ಪ್ರದಾನ ಮಾಡಿದರು.

ಬೆಳಗ್ಗೆ ಸಅದಿ ಸಂಗಮ ಮತ್ತು ಪಂಡಿತ ಸಮಾವೇಶ ನಡೆಯಿತು. ಸೈಯದ್ ಉಮರ್ ಕುಂಞಿಕೋಯ ತಂಙಳ್ ಕುಂಬೋಲ್ ಅವರು ಸ್ಥಾನವಸ್ತ್ರಗಳ ವಿತರಣೆಯನ್ನು ಮಾಡಿದರು.






