ಪಾಟ್ನಾ ,ಡಿ.20; ವಿವಾದಾತ್ಮಕ ಪೌರತ್ವ ನೋಂದಣಿ ಕಾಯ್ದೆ (ಎನ್ಆರ್ಸಿ) ಯನ್ನು ಬಿಹಾರದಲ್ಲಿ ಜಾರಿಗೊಳಿಸುವುದಿಲ್ಲ ಎಂದು ಬಿಜೆಪಿ ಮೈತ್ರಿ ಪಕ್ಷವಾದ ಜೆಡಿಯು ಮುಖ್ಯಸ್ಥ ಹಾಗೂ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ಪೌರತ್ವ ನೋಂದಣಿ ಕಾಯ್ದೆಯ (ಎನ್ಆರ್ಸಿ) ವಿರುದ್ಧ ಕಳೆದ ಎರಡು ವಾರಗಳಿಂದ ಇಡೀ ದೇಶದಾದ್ಯಂತ ಪ್ರತಿಭಟನೆಯ ಕಾವು ದಿನೇ ದಿನೇ ಏರುತ್ತಲೇ ಇದೆ. ಈ ನಡುವೆ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಹಾಗೂ ಕೇರಳ ಸಿಎಂ ಪಿಣರಾಯಿ ವಿಜಯನ್ ತಮ್ಮ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಎನ್ಆರ್ಸಿ ಹಾಗೂ ಸಿಎಎ ಜಾರಿಯಾಗುವುದಿಲ್ಲ ಎಂದು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ಏತರ ಬಹುತೇಕ ರಾಜ್ಯದ ಮುಖ್ಯಮಂತ್ರಿಗಳು ಇವರ ಮಾತಿಗೆ ದ್ವನಿಗೂಡಿಸಿದ್ದಾರೆ. ಇದಲ್ಲದೆ ಪಶ್ಚಿಮ ಬಂಗಾಳ, ದೆಹಲಿ, ಉತ್ತರಪ್ರದೇಶ ಹಾಗೂ ಕರ್ನಾಟಕದಲ್ಲಿ ದಿನೇ ದಿನೇ ಪ್ರತಿಭಟನೆಯ ಕಾವು ಹೆಚ್ಚಾಗುತ್ತಿದ್ದು ಕೇಂದ್ರ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಈ ನಡುವೆ ಎನ್ಡಿಎ ಮೈತ್ರಿಕೂಟದ ಪ್ರಮುಖ ಪಕ್ಷವಾದ ಜೆಡಿಯು ಮುಖ್ಯಸ್ಥ ಹಾಗೂ ಬಿಹಾರದ ಸಿಎಂ ನಿತೀಶ್ ಕುಮಾರ್ ಸಹ ಭಿನ್ನರಾಗ ತೆಗೆದಿರುವುದು ಬಿಜೆಪಿ ಮೈತ್ರಿಕೂಟದಲ್ಲಿ ಒಡಕು ಮೂಡಿದೆಯೇ? ಎಂಬ ಪ್ರಶ್ನೆಗೆ ಕಾರಣವಾಗಿದೆ
ಬಿಹಾರದಲ್ಲಿ ಇಂದು ಈ ಕುರಿತು ಹೇಳಿಕೆ ನೀಡಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್, “ವಿವಾದಾತ್ಮಕ ಎನ್ಆರ್ಸಿ ಕಾಯ್ದೆ ಬಿಹಾರದಲ್ಲಿ ಜಾರಿಯಾಗುವುದಿಲ್ಲ” ಎಂದು ಖಡಕ್ ಆಗಿ ಹೇಳಿದ್ದಾರೆ. ಈ ಹಿಂದೆ ಸಿಎಎ ಕಾಯ್ದೆ ರಾಜ್ಯಸಭೆಯಲ್ಲಿ ಅಂಗೀಕಾರವಾದಾಗಲೇ ಅಸಮಾಧಾನ ಹೊರಹಾಕಿದ್ದ ಜೆಡಿಯು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಪ್ರಶಾಂತ್ ಕಿಶೋರ್ ಈ ಕಾಯ್ದೆಯನ್ನು ಜಾರಿಯಾಗದಂತೆ ಬಿಜೆಪಿಯೇತರ ರಾಜ್ಯದ ಸಿಎಂ ಗಳು ತಡೆಯಬೇಕು ಎಂದು ಮನವಿ ಮಾಡಿದ್ದರು.
ಇದರ ಬೆನ್ನಿಗೆ ಇದೀಗ ಸಿಎಂ ನಿತೀಶ್ ಕುಮಾರ್ ಸಹ ಎನ್ಆರ್ಸಿ ಕಾಯ್ದೆಯ ವಿರುದ್ಧ ಹೇಳಿಕೆ ನೀಡಿರುವುದು ಬಿಜೆಪಿ ಕೇಂದ್ರ ನಾಯಕರಿಗೆ ಇದೀಗ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಹಾಗೂ ಬಿಜೆಪಿ ಮೈತ್ರಿ ಸಾಧಿಸಿಕೊಂಡು ಅಧಿಕಾರ ನಡೆಸುತ್ತಿದೆ ಎಂಬುದು ಉಲ್ಲೇಖಾರ್ಹ.






