janadhvani

Kannada Online News Paper

ವಾಟ್ಸ್‌ಆ್ಯಪ್‌ ಅನ್‌ಇನ್‌ಸ್ಟಾಲ್‌ ಮಾಡಿ, ಖಾಸಗಿತನ ಕಾಪಾಡಿ – ಟೆಲಿಗ್ರಾಂ

ನವದೆಹಲಿ: ಜನ ವಾಟ್ಸ್‌ಆ್ಯಪ್‌ ಅನ್ನು ತಮ್ಮ ಮೊಬೈಲ್‌ಗಳಿಂದ ಅನ್‌ಇನ್‌ಸ್ಟಾಲ್‌ ಮಾಡಬೇಕು ಎಂದು ಟೆಲಿಗ್ರಾಂ ಮೆಸೇಜಿಂಗ್‌ ಆ್ಯಪ್‌ನ ಸಂಸ್ಥಾಪಕ ಪ್ಯಾರೆಲ್ ಡುರೊವ್ ಅವರು ಆಗ್ರಹಿಸಿದ್ದಾರೆ.

ತಮ್ಮ ಟೆಲಿಗ್ರಾಂ ಚಾನಲ್‌ ಮೂಲಕ ಈ ಸಂದೇಶ ರವಾನಿಸಿರುವ ಅವರು, ’ನಿಮ್ಮ ಖಾಸಗಿ ಫೋಟೊಗಳು, ಸಂದೇಶಗಳು ಮುಂದೊಂದು ದಿನ ಹೊರ ಜಗತ್ತಿಗೆ ಬಹಿರಂಗವಾಗುವುದು ನಿಮಗೆ ಇಷ್ಟ ಇಲ್ಲ ಎಂದಾದರೆ ಕೂಡಲೇ ಅದನ್ನು ನಿಮ್ಮ ಮೊಬೈಲ್‌ಗಳಿಂದ ಕಿತ್ತೆಸೆಯಿರಿ,’ ಎಂದು ಅವರು ಮನವಿ ಮಾಡಿದ್ದಾರೆ. ಪ್ಯಾರೆಲ್ ಡುರೊವ್ ಅವರ ಟೆಲಿಗ್ರಾಂ ಚಾಲನ್‌ನಲ್ಲಿ 335000 ಮಂದಿ ಫಾಲೋವರ್‌ಗಳಿದ್ದಾರೆ.

ಫೇಸ್‌ಬುಕ್‌ ಒಡೆತನದ ವಾಟ್ಸ್‌ಆ್ಯಪ್‌ ತನ್ನ ಗ್ರಾಹಕರ ಮೇಲೆ ಗೂಢಚರ್ಯೆ ನಡೆಸುತ್ತಿರುವ ಅಪವಾದಕ್ಕೆ ಗುರಿಯಾಗಿದೆ. ಇದೇ ಹಿನ್ನೆಲೆಯಲ್ಲಿ ಟೆಲಿಗ್ರಾಂ ಸಂಸ್ಥಾಪಕ ಪ್ಯಾರೆಲ್ ಡುರೊವ್ ಈ ಮಾತುಗಳನ್ನಾಡಿದ್ದಾರೆ. ಜಗತ್ತಿನ ಅತ್ಯಂತ ಜನಪ್ರಿಯ ಮೆಸೇಂಜರ್ ಆಗಿರುವ ವಾಟ್ಸ್‌ ಆ್ಯಪ್‌, 160 ಕೋಟಿ ಬಳಕೆದಾರರನ್ನು ಹೊಂದಿದೆ. ಇದೇ ವೇಳೆ ಟೆಲಿಗ್ರಾಂ 20 ಕೋಟಿ ಬಳಕೆದಾರರನ್ನು ಹೊಂದಿದೆ.

ಗೂಢಚರ್ಯೆ ಬಗ್ಗೆ ಏನು ಹೇಳಿತ್ತು ಫೇಸ್‌ಬುಕ್‌?:

ವಾಟ್ಸ್‌ಆ್ಯಪ್‌ ತಂತ್ರಾಂಶದಲ್ಲಿ ಕಾರ್ಯವೈಖರಿಯನ್ನು ಬದಲಾಯಿಸಲಾಗಿದೆ. ಆ ಬಳಿಕ ವಾಟ್ಸ್‌ಆ್ಯಪ್‌ ವಾಯ್ಸ್‌ ಕಾಲ್ ಮೂಲಕ ಕುತಂತ್ರಾಂಶ (ಸ್ಪೈವೇರ್‌) ಇನ್‌ಸ್ಟಾಲ್‌ ಮಾಡಲಾಗಿದೆ. ಇದು ಆ ಫೋನ್‌ನ ಕರೆ, ಟೆಕ್ಸ್ಟ್‌ ಮತ್ತು ಇನ್ನಿತರ ಎಲ್ಲಾ ಮಾಹಿತಿಗಳನ್ನು ಕದಿಯುತ್ತದೆ. ಇಷ್ಟು ಮಾತ್ರವಲ್ಲ ಕ್ಯಾಮೆರಾ ಮತ್ತು ಮೈಕ್ರೊಫೋನ್‌ ಅನ್ನು ತನ್ನಷ್ಟಕ್ಕೇ ಸಕ್ರಿಯಗೊಳಿಸಿ ಬಳಕೆದಾರನ ಚಟುವಟಿಕೆಗಳನ್ನು ದಾಖಲಿಸಿಕೊಂಡು ದುರುಪಯೋಗಪಡಿಸಿಕೊಳ್ಳಲಾಗಿದೆ. ವಾಟ್ಸ್‌ಆ್ಯಪ್‌ ಅಥವಾ ವಾಟ್ಸ್‌ಆ್ಯಪ್‌ ಬಿಸಿನೆಸ್‌ ಇನ್‌ಸ್ಟಾಲ್‌ ಮಾಡಿರುವ ಆ್ಯಪಲ್‌, ಆಂಡ್ರಾಯ್ಡ್‌, ವಿಂಡೋಸ್‌ ಒಳಗೊಂಡು ಎಲ್ಲಾ ಬಗೆಯ ಎಲ್ಲಾ ಸ್ಮಾರ್ಟ್‌ಫೋನ್‌ಗಳೂ ಈ ಕುತಂತ್ರಾಂಶದ ದಾಳಿಗೆ ತುತ್ತಾಗಿವೆ ಎಂದು ವಾಟ್ಸ್‌ಆ್ಯಪ್‌ ಒಡೆತನದ ಸಂಸ್ಥೆ ಫೇಸ್‌ಬುಕ್‌ ಹಿಂದೊಮ್ಮೆ ಹೇಳಿತ್ತು.

ಭಾರತದಲ್ಲೂ ಸದ್ದಾಗಿತ್ತು: ಪೆಗಾಸಸ್ ಎಂಬ ಕುತಂತ್ರಾಂಶ ಬಳಸಿಕೊಂಡು ವಾಟ್ಸ್‌ಆ್ಯಪ್ ಮೂಲಕ ಭಾರತದಲ್ಲಿ ಪತ್ರಕರ್ತರು ಹಾಗೂ ಸಾಮಾಜಿಕ ಕಾರ್ಯಕರ್ತರ ಮೇಲೆ ಗೂಢಚರ್ಯೆ ಮಾಡಲಾಗುತ್ತಿದೆ ಎಂಬ ಸದ್ದು ಇತ್ತೀಚೆಗೆ ಜೋರಾಗಿಯೇ ಕೇಳಿಬಂದಿತ್ತು. ಆದರೆ, ಕೇಂದ್ರ ಸರ್ಕಾರ ಈ ವಾದಗಳನ್ನು ನಿರಾಕರಿಸಿತ್ತು.

error: Content is protected !! Not allowed copy content from janadhvani.com