janadhvani

Kannada Online News Paper

‘ಮಹಾ’ ನಾಟಕ- ಸುಪ್ರೀಂ ನಲ್ಲಿ ವಿಚಾರಣೆ ಆರಂಭ

ನವದೆಹಲಿ,ನ.24:ಮಹಾ ರಾಷ್ಟ್ರದಲ್ಲಿ ಅಚ್ಚರಿಯ ಬೆಳವಣಿಗೆ ಎಂಬಂತೆ ನಿನ್ನೆ ಫಡ್ನವೀಸ್ ಸಿಎಂ, ಅಜಿತ್ ಪವಾರ್ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಆದಷ್ಟೂ ಬೇಗ ಬಹುಮತ ಸಾಬೀತು ಮಾಡುವಂತೆ ಆದೇಶಿಸಿ ಎಂದು ಶಿವಸೇನೆ ಮತ್ತು ಕಾಂಗ್ರೆಸ್​-ಎನ್​​ಸಿಪಿ ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿವೆ. ದಿಢೀರ್​​​ ರಾಷ್ಟ್ರಪತಿ ಆಡಳಿತ ತೆರವುಗೊಳಿಸಿ ಬಿಜೆಪಿ ಸರ್ಕಾರ ರಚನೆಗೆ ಅವಕಾಶ ಮಾಡಿಕೊಟ್ಟ ಮಹಾರಾಷ್ಟ್ರ ರಾಜ್ಯಪಾಲರ ನಡೆ ಪ್ರಶ್ನಿಸಿ ಮೂರು ಪಕ್ಷಗಳು ಸಲ್ಲಿಸಿರುವ ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್​​ನಲ್ಲಿ ನಡೆಯುತ್ತಿದೆ. ನ್ಯಾಯಮೂರ್ತಿ ಎನ್.ವಿ ರಮಣ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ ವಿಚಾರಣೆ ಆರಂಭಿಸಿದೆ.

ಶಿವಸೇನೆ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಾಡುತ್ತಿದ್ದಾರೆ. ನ್ಯಾಯಮೂರ್ತಿ ಎನ್.ವಿ ರಮಣ ನೇತೃತ್ವದ ತ್ರಿಸದಸ್ಯ ನ್ಯಾಯಪೀಠದ ಮುಂಭಾಗ ಕಪಿಲ್​​ ಸಿಬಲ್​​ ಮಹಾರಾಷ್ಟ್ರದ ಸಂಖ್ಯಾಬಲ ವಿವರಿಸುತ್ತಿದ್ದಾರೆ. ರಾಜ್ಯಪಾಲರು ಬಿಜೆಪಿಗೆ 48 ದಿನ ಅವಕಾಶ ನೀಡಿದ್ದರು. ಎನ್​​​ಸಿಪಿ ಮತ್ತು ಶಿವಸೇನೆಗೆ ಸಮಯಾವಕಾಶ ನೀಡಲಿಲ್ಲ. ಮಹಾರಾಷ್ಟ್ರದಲ್ಲಿ ಚುನಾವಣಾಪೂರ್ವ ಮೈತ್ರಿ ಇದ್ದದೇ ಬೇರೆ. ಈಗ ಪರಿಸ್ಥಿತಿ ಬದಲಾಗಿದೆ. ಚುನಾವಣೋತ್ತರ ಮೈತ್ರಿಯಾಗಿದೆ. ಶಿವಸೇನೆ-ಕಾಂಗ್ರೆಸ್​​ ಮತ್ತು ಎನ್​​ಸಿಪಿ ಮೈತ್ರಿ ಮಾಡಿಕೊಂಡಿವೆ ಎಂದರು.

ನಿನ್ನೆ ಬೆಳಗ್ಗೆ 5.47ಕ್ಕೆ ದಿಢೀರನೇ ರಾಷ್ಟ್ರಪತಿ ಆಳ್ವಿಕೆ ಹಿಂಪಡೆದಿದ್ದಾರೆ. ಕೇಂದ್ರ ಸಚಿವ ಸಂಪುಟ ಸಭೆ ಸೇರದೆ ಹಿಂಪಡೆಯಲಾಗಿದೆ. ಅಂಥ ರಾಷ್ಟ್ರೀಯ ತುರ್ತು ಏನಿತ್ತು? ಬಳಿಕ ತರಾತುರಿಯಲ್ಲಿ ಸಿಎಂ, ಡಿಸಿಎಂ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲರು ದುರುದ್ದೇಶಪೂರಿತವಾಗಿ ನಡೆದುಕೊಂಡಿದ್ದಾರೆ. ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಇಂದೇ ವಿಶ್ವಾಸಮತ ಯಾಚನೆ ಮಾಡುವಂತೆ ಹೇಳಿ. ಅವರ ಬಳಿ ಶಾಸಕರ ಬಲ ಇದ್ದರೆ ಸಾಬೀತು ಪಡಿಸಲಿ. ರಾಜ್ಯಪಾಲರ ಆಹ್ವಾನವೂ ಅಧಿಕೃತವಾಗಿ ಇಲ್ಲ. ಸಿಎಂ-ಡಿಸಿಎಂ ಪ್ರಮಾಣ ವಚನಕ್ಕೆ ಅವೆಲ್ಲಾ ಪ್ರಕ್ರಿಯೆಗಳು ಹೇಗೆ ನಡೆಯಿತೆಂಬುದೇ ಗೊತ್ತಿಲ್ಲ. ಯಾವೂದಕ್ಕೂ ಅಧಿಕೃತವಾದ ದಾಖಲೆಗಳಿಲ್ಲ ಎಂದು ಕಪಿಲ್​​ ಸಿಬಲ್​​ ವಾದ ಮಂಡಿಸಿದರು.

ಇನ್ನು ಕರ್ನಾಟಕದ ಪ್ರಕರಣ ಉಲ್ಲೇಖಿಸಿದ ಕಪಿಲ್ ಸಿಬಲ್, ಮೇ 2018ರಲ್ಲಿ ಕರ್ನಾಟಕದಲ್ಲೂ ಹೀಗೆ ಆಗಿತ್ತು. ರಾಜ್ಯಪಾಲರು ಯಡಿಯೂರಪ್ಪಗೆ ಸಿಎಂ ಆಗಿ ಪ್ರಮಾಣವಚನ ಸ್ವೀಕಾರಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ಸುಪ್ರೀಂಕೋರ್ಟ್ 24 ಗಂಟೆಯೊಳಗೆ ವಿಶ್ವಾಸಮತ ಯಾಚಿಸುವಂತೆ ಸೂಚಿಸಿತ್ತು. ಮಹಾರಾಷ್ಟ್ರ ರಾಜ್ಯಪಾಲರು ಈವರೆಗೆ ಪತ್ರ ಬರೆದಿಲ್ಲ. ವಿಶ್ವಾಸಮತ ಯಾಚನೆಗೆ ಈವರೆಗೆ ಪತ್ರ ಬರೆದಿಲ್ಲ. ನನಗೆ ಮಧ್ಯರಾತ್ರಿ ನೋಟಿಸ್ ಬಂದಿದೆ. ಹೆಚ್ಚಿನ ಸಮಯಾವಕಾಶ ಬೇಕು ಎಂದು ಪ್ರಸ್ತಾಪಿಸಿದರು

ಇನ್ನು ಬಿಜೆಪಿ ಪರ ವಕೀಲ ಮುಕುಲ್ ರೋಹಟಗಿ ವಾದ ಶುರು ಮಾಡಿದ್ದಾರೆ. ಈ ಪ್ರಕರಣವನ್ನು ಸುಪ್ರೀಂ ವಿಚಾರಣೆ ನಡೆಸಲೇಬಾರದು. ರಾಜ್ಯಪಾಲರು ಸಂವಿಧಾನಬದ್ಧವಾಗಿ ಕೆಲಸ ಮಾಡಿದ್ದಾರೆ ಎಂದರು.ಇದೇ ವೇಳೆ ಮಧ್ಯ ಪ್ರವೇಶಿಸಿದ ಶಿವಸೇನೆ ಪರ ವಕೀಲ ಕಪಿಲ್​​ ಸಿಬಲ್​​​, ಮಹಾರಾಷ್ಟ್ರ ಜನರಿಗೆ ಬೇಗ ಸರ್ಕಾರ ಬರಬೇಕಿದೆ. ಬೇಗ ವಿಶ್ವಾಸಮತ ಯಾಚನೆ ಮಾಡಲು ಹೇಳಿ. ಅವರ ಬಳಿ ಶಾಸಕರ ಬಲ ಇದ್ದರೆ ಸಾಬೀತುಪಡಿಸಲಿ. ಇಲ್ಲದಿದ್ದರೆ ನಾವು ವಿಶ್ವಾಸಮತ ಸಾಬೀತು ಪಡಿಸುತ್ತೇವೆ ಎಂದು ಹೇಳಿದರು.

ಈ ಬೆನ್ನಲ್ಲೇ ವಾದ ಮಂಡನೆಗೆ ಮುಂದಾದ ಕಾಂಗ್ರೆಸ್​​ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ, ನ. 22ರಂದು ಕಾಂಗ್ರೆಸ್, ಎನ್​​​ಸಿಪಿ, ಶಿವಸೇನೆ ಮೈತ್ರಿ ಆಗಿದೆ. ಇದನ್ನು ಪತ್ರಿಕಾಗೋಷ್ಠಿ ಮೂಲಕ ಬಹಿರಂಗ ಪಡಿಸಲಾಗಿದೆ. ಆದರೂ ರಾಜ್ಯಪಾಲರು ಬಿಜೆಪಿಗೆ ಹೇಗೆ ಅವಕಾಶ ಕೊಟ್ಟರು? ಈಗ ಎನ್​​ಸಿಪಿ ಅಜಿತ್ ಪವಾರ್​​ರನ್ನು ಉಚ್ಛಾಟಿಸಿದೆ. ನಿನ್ನೆ ಮಧ್ಯಾಹ್ನವೇ 3.30ಕ್ಕೆ ಉಚ್ಛಾಟನೆ ಮಾಡಲಾಗಿದೆ. ಅದೇಗೆ ಎನ್​​ಸಿಪಿ ಬೆಂಬಲ ಪಡೆದು ಸರ್ಕಾರ ರಚಿಸಲು ಸಾಧ್ಯ? ಎಂದು ಪ್ರಶ್ನಿಸಿದರು.

ಕರ್ನಾಟಕದ ಪ್ರಕರಣ ಉಲ್ಲೇಖಿಸಿ ಅಭಿಷೇಕ್ ಮನು ಸಿಂಘ್ವಿ, ಎಸ್.ಆರ್. ಬೊಮ್ಮಾಯಿ ಪ್ರಕರಣ ಪ್ರಸ್ತಾಪಿಸಿದರು. ಈ ಪ್ರಕರಣ ಅತ್ಯುತ್ತಮ ವಿಧಾನ ಎಂದು ಹೇಳಲಾಗಿದೆ. ಪದೇ ಪದೇ ಕರ್ನಾಟಕದ ಘಟನಾವಳಿಗಳನ್ನು ಸ್ಮರಿಸುತ್ತಿರುವ ವಕೀಲರು, ಬೊಮ್ಮಾಯಿ ಪ್ರಕರಣದಲ್ಲಿ ಹೇಳಿದಂತೆ ಮಹಾರಾಷ್ಟ್ರದಲ್ಲಿ ವಿಶ್ವಾಸಮತಯಾಚನೆಯಾಗಲಿ ಎಂದು ಆಗ್ರಹಿಸಿದರು.

ಇನ್ನು ಕರ್ನಾಟಕ ಪ್ರಕರಣದ ತೀರ್ಪಿನ ಆದೇಶ ಓದುತ್ತಿರುವ ನ್ಯಾ. ರಮಣ ಅವರು, ಆಗ 2018 ಮೇ 17ರಂದು ಪ್ರಮಾಣ ವಚನವಾಗಿತ್ತು. 18ರಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತು. 19 ವಿಶ್ವಾಸಮತ ಯಾಚನೆ ಆಗಿತ್ತು. ಮಹಾರಾಷ್ಟ್ರ ಪ್ರಕರಣದಲ್ಲೂ ಹೀಗೆ ಆಗಲಿ. ನಿನ್ನೆ ನಡೆದ ಎನ್​​ಸಿಪಿ ಶಾಸಕಾಂಗ ಸಭೆಯಲ್ಲಿ 41 ಶಾಸಕರ ಸಹಿ ಇದೆ. ಬಿಜೆಪಿ 54 ಸದಸ್ಯರ ಎನ್​​​ಸಿಪಿ ಬೆಂಬಲ ಇದೆ ಎಂದಿದೆ. ಇದು ಸಾಬೀತಿಗೆ ವಿಶ್ವಾಸಮತಯಾಚನೆ ಆಗಬೇಕು. ಇದು ಪ್ರಜಾಪ್ರಭುತ್ವದಲ್ಲಿ ಸಂವಿಧಾನಿಕ ಜವಾಬ್ದಾರಿ ಎಂದರು.

ಮತ್ತೆ ಬಿಜೆಪಿ ಪರ ವಾದ ಆರಂಭಿಸಿದ ವಕೀಲ ಮುಕುಲ್ ರೋಹಟಗಿ, ನಮಗೆ 3 ದಿನ ಸಮಯಾವಕಾಶ ಕೊಡಿ. ಸರಿಯಾದ ಪ್ರತ್ಯುತ್ತರ ನೀಡಲಿದ್ದೇವೆ. ರಾಜ್ಯಪಾಲರಿಗೆ ಮನವರಿಕೆಯಾಗಬೇಕು. ಮನವರಿಕೆಯಾದರೆ ಪ್ರಮಾಣವಚನ ಬೋಧಿಸಬಹುದು. ರಾಜ್ಯಪಾಲರಿಗೆ ಕೋರ್ಟ್ ನಿರ್ದೇಶನ ನೀಡುವಂತಿಲ್ಲ. ನಿನ್ನೆ ತೆಗೆದುಕೊಂಡ ನಿರ್ಧಾರ ಕೋರ್ಟ್ ವ್ಯಾಪ್ತಿಗೆ ಬರಲ್ಲ ಎಂದು ಹೇಳಿದರು.

error: Content is protected !! Not allowed copy content from janadhvani.com