janadhvani

Kannada Online News Paper

ಮುಸ್ಲಿಂ ಜಮಾಅತ್ ನಿಯೋಗ, ಸಿಎಂ ಭೇಟಿ-NRC ಸಹಿತ ಸಮಸ್ಯೆ ನಿವಾರಣೆಗೆ ಮನವಿ

ಬೆಂಗಳೂರು,ಅ.21: ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಬಿ.ಎಸ್.ಯಡಿಯೂರಪ್ಪರನ್ನು ಭೇಟಿಯಾದ ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ನಾಯಕರ ನಿಯೋಗವು ಮುಸ್ಲಿಂ ಸಮುದಾಯ ರಾಜ್ಯದಲ್ಲಿ ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಿತು.

ರಾಜ್ಯದಲ್ಲಿ 14% ರಷ್ಣು ಜನಸಂಖ್ಯೆ ಹೊಂದಿರುವ ಮುಸ್ಲಿಮರ ಶ್ರೆಯೋಭಿವೃದ್ಧಿಗಾಗಿ ಮುಂದಿನ ಬಜೆಟ್ ನಲ್ಲಿ ಜನಸಂಖ್ಯಾ ಅನುಪಾತದ ಆಧಾರದಲ್ಲಿ ಕನಿಷ್ಠ 10% ಹಣ ಮೀಸಲು, ಕೆಪಿಎಸ್ಸಿ, ವಿವಿ, ಮಾನವಹಕ್ಕು ಆಯೋಗ ಮುಂತಾದ ಶಾಸನಬದ್ಧ ಸಮಿತಿಗಳಲ್ಲಿ ಮುಸ್ಲಿಮರಿಗೆ ಪ್ರಾತಿನಿಧ್ಯ , ಸಿದ್ದರಾಮಯ್ಯರ ಅವಧಿಯಲ್ಲಿ ಮಾಡಲಾದ ಜಾತಿಗಣತಿಯ ವರದಿಯನ್ನು ಆದಷ್ಟು ಬೇಗ ಬಿಡುಗಡೆ‌ ಮಾಡುವುದು, ಕಬಳಿಕೆಯಾಗಿರುವ ವಖ್ಫ್ ಆಸ್ತಿಗಳನ್ನು ಮರುವಶಪಡಿಸಿ ಸಮುದಾಯದ ಅಭಿವೃದ್ಧಿಗೆ ವಿನಿಯೋಗಿಸುವುದು, ನೂತನ ಸರಕಾರದ ಸಚಿವ ಸಂಪುಟದಲ್ಲಿ ಮುಸ್ಲಿಂ ಸಮುದಾಯದ ಕನಿಷ್ಠ ಒಬ್ಬರಿಗಾದರೂ ಸ್ಥಾನ ನೀಡುವುದು, NRC ಬಗ್ಗೆ ಸಮುದಾಯಕ್ಕಿರುವ ಆತಂಕ ಮತ್ತು ಸಮಸ್ಯೆಗಳನ್ನು ನಿವಾರಿಸುವುದು, ನಿಗಮ ಮಂಡಳಿಗ ನೇಮಕದಲ್ಲಿ ಮುಸ್ಲಿಂ ಸಮುದಾಯಕ್ಕೂ ಪ್ರಾತಿನಿಧ್ಯ ನೀಡುವುದು ಮುಂತಾದ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ನಿಯೋಗವು ಮುಖ್ಯಮಂತ್ರಿಗೆ ಸಲ್ಲಿಸಿತು‌.

ಬಳಿಕ ಮಾತನಾಡಿದ ಬಿಎಸ್ವೈ, ಯಾವುದೇ ಕಾನೂನುಗಳ ಬಗ್ಗೆ ಮುಸ್ಲಿಮರು ಆತಂಕಪಡಬೇಕಾಗಿಲ್ಲ, ಮುಂದಿನ ಬಜೆಟ್ ನಲ್ಲಿ ಗರಿಷ್ಠ ಪ್ರಮಾಣದ ಅನುದಾನ ನೀಡಲಾಗುವುದು‌, ಕಬಳಿಕೆಯಾದ ಆಸ್ತಿ ವಿಷಯದಲ್ಲಿ ಅನ್ವರ್ ಮಾಣಿಪ್ಪಾಡಿಯವರ ವರದಿಯನ್ನು ಈಗಾಗಲೇ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದ್ದು, ಮುಂದಿನ ಅಧಿವೇಶನದಲ್ಲಿ ಸಮುದಾಯಕ್ಕಾಗಿರುವ ಅನ್ಯಾಯವನ್ನು ಸರಿಪಡಿಸಲಾಗುವುದು ಎಂದರಲ್ಲದೇ ಮುಸ್ಲಿಂ ಜಮಾಅತ್ ನ ಬೇಡಿಕೆಗಳಿಗೆ ಸ್ಪಂದಿಸುವುದಾಗಿ ಮುಖ್ಯಮಂತ್ರಿಗಳು ಭರವಸೆಯಿತ್ತರು.

ಸಭೆಯಲ್ಲಿ ಅಲ್ಪ ಸಂಖ್ಯಾತ ಇಲಾಖಾ ಕಾರ್ಯದರ್ಶಿ ಎ.ಬಿ.ಇಬ್ರಾಹೀಂ ಉಪಸ್ಥಿತರಿದ್ದರು.
ಮುಸ್ಲಿಂ‌ ಜಮಾಅತ್ ನಿಯೋಗದಲ್ಲಿ ಕರ್ನಾಟಕ ರಾಜ್ಯಾಧ್ಯಕ್ಷ ಮುಫ್ತಿ-ಎ-ಕರ್ನಾಟಕ ಮೌಲಾನ ಮುಫ್ತಿ ಅನ್ವರಲಿ ಸಾಹೆಬ್ ರಾಮನಗರ, ಉಪಾಧ್ಯಕ್ಷರುಗಳಾದ ಮೌಲಾನಾ ಶಬ್ಬರ್ ಅಲಿ ನೂರಿ, ಮೌಲಾನಾ ಅಬೂಸುಫ್ಯಾನ್ ಮದನಿ, ಮುಫ್ತಿ ಮುಹಮ್ಮದ್ ಅಸ್ಲಮ್ ಮಿಸ್ಬಾಹಿ, ಖಾರಿ ಝುಲ್ಫಿಕರ್ ಅತ್ತಾರಿ, ಮುಫ್ತಿ ಝುಲ್ಫಿಕರ್ ರಝ್ವಿ, ಮೌಲಾನಾ ವೈಝುದ್ದೀನ್ ರಝಾ, ರಾಜ್ಯ ಪ್ರ.ಕಾರ್ಯದರ್ಶಿ ಮೌಲನಾ ಎನ್.ಕೆ.ಎಂ.ಶಾಫಿ ಸ‌ಅದಿ, ಹಾಜಿ ಮುಮ್ತಾಝ್ ಅಲಿ, ಹಬೀಬ್ ಕೋಯ ಕಾರವಾರ್, ಉಮರ್ ಹಾಜಿ ಅಭಿಮಾನ್, ಯ‌ಅ್‌ಕೂಬ್ ಯೂಸುಫ್ ಶಿವಮೊಗ್ಗ ಸಹಿತ 25 ಮಂದಿ ಹಾಜರಿದ್ದರು.

ಮುಖ್ಯಮಂತ್ರಿಯ ಭೇಟಿ ಬಳಿಕ ಮಾಧ್ಯಮ ಮಿತ್ರರೊಂದಿಗೆ ಮಾತನಾಡುತ್ತಿರುವ ಕರ್ನಾಟಕ ಮುಸ್ಲಿಮ್ ಜಮಾಅತ್ ಪ್ರ,ಕಾರ್ಯದರ್ಶಿ ಮೌಲಾನಾ ಶಾಫಿ ಸಅದಿ ಬೆಂಗಳೂರು.