ನವದೆಹಲಿ (ಆಗಸ್ಟ್.31); ಕಣಿವೆ ರಾಜ್ಯ ಜಮ್ಮು-ಕಾಶ್ಮೀರದ ಪರಿಸ್ಥಿತಿಯ ಕುರಿತು ಕೇಂದ್ರ ಸರ್ಕಾರ ನೀಡುವ ಚಿತ್ರಣಕ್ಕೂ ಪ್ರಸ್ತುತ ನೈಜ ಸ್ಥಿತಿಗೂ ಅಜಗಜಾಂತರ ವ್ಯತ್ಯಾಸ ಇದೆ ಎಂದು ಸಿಪಿಐ(ಎಂ) ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಆರೋಪಿಸಿದ್ದಾರೆ.
ಕಳೆದ ಆಗಸ್ಟ್ 9 ರಂದು ಸೀತಾರಾಂ ಯೆಚೂರಿ ಅನಾರೋಗ್ಯದಿಂದ ಬಳಲುತ್ತಿದ್ದ ಕಾಶ್ಮೀರದ ಸಿಪಿಐ ನಾಯಕ ಹಾಗೂ ಶಾಸಕ ಮೊಹಮ್ಮದ್ ಯೂಸಫ್ ತರಿಗಾಮಿ ಅವರನ್ನು ಭೇಟಿ ಮಾಡಲು ಅಲ್ಲಿನ ಗವರ್ನರ್ ಅನುಮತಿಯೊಂದಿಗೆ ಕಣಿವೆ ರಾಜ್ಯಕ್ಕೆ ತೆರಳಿದ್ದರು. ಆದರೆ, ರಕ್ಷಣೆಯ ಹಾಗೂ ರಾಜಕೀಯ ಅರಾಜಕತೆಯ ನೆಪವೊಡ್ಡಿ ಅವರನ್ನು ಒತ್ತಾಯಪೂರ್ವಕವಾಗಿ ಹಿಂದಿರುಗುವಂತೆ ಮಾಡಲಾಗಿತ್ತು.
ಅಸಲಿಗೆ ಆಗಸ್ಟ್. 5 ರಂದು ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಕಲಂ 370 ಅನ್ನು ಕೇಂದ್ರ ಸರ್ಕಾರ ರದ್ದು ಮಾಡಿದ ದಿನದಿಂದ ಸಿಪಿಐ ನಾಯಕ ಹಾಗೂ ಶಾಸಕ ಮೊಹಮ್ಮದ್ ಯೂಸುಪ್ ತರಿಗಾಮಿಯವರನ್ನು ಕೇಂದ್ರ ಸರ್ಕಾರ ಗೃಹಬಂಧನದಲ್ಲಿ ಇರಿಸಿದೆ. ಇದೇ ಕಾರಣಕ್ಕೆ ಅವರನ್ನು ಭೇಟಿ ಮಾಡಲು ಸೀತಾರಾಂ ಯೆಚೂರಿ ಅವರಿಗೆ ಅನುಮತಿ ನೀಡಲಾಗಿರಲಿಲ್ಲ.
ಪರಿಣಾಮ ತಮಗೆ ಕಾಶ್ಮೀರ ಪ್ರವೇಶವನ್ನು ನಿಷೇಧಿಸಿದ ಗವರ್ನರ್ ಕ್ರಮವನ್ನು ಖಂಡಿಸಿ ಸೀತಾರಾಂ ಯೆಚೂರಿ ಸುಪ್ರೀಂ ಕೋರ್ಟ್ನಲ್ಲಿ ದೂರು ದಾಖಲಿಸಿದ್ದರು. ಅಲ್ಲದೆ, 5 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಮಹಮ್ಮದ್ ಯೂಸುಫ್ ತರಿಗಾಮಿಯವರನ್ನು ತಮಗೆ ಒಪ್ಪಿಸುವಂತೆ ‘ಹೆಬಿಯಸ್ ಕಾರ್ಪಸ್’ ಅರ್ಜಿಯೊಂದನ್ನು ಸಲ್ಲಿಸಿದ್ದರು. ಹೀಗಾಗಿ ಸುಪ್ರೀಂ ಕೋರ್ಟ್ ಯೆಚೂರಿಯವರಿಗೆ ಕಾಶ್ಮೀರ ಪ್ರವೇಶಿಸಲು ಅನುಮತಿಸಿತ್ತು. ಅಲ್ಲದೆ, “ನಿಮ್ಮ ಪ್ರಯಾಣ ಯಾವುದೇ ರಾಜಕೀಯ ಉದ್ದೇಶದಿಂದ ಕೂಡಿರಬಾರದು” ಎಂದು ಸುಪ್ರೀಂ ತಾಕಿತು ಮಾಡಿತ್ತು.
ಹೀಗೆ ಅನಾರೋಗ್ಯ ಪೀಡಿತ ಶಾಸಕ ತರಿಗಾಮಿಯವರನ್ನು ಭೇಟಿಯಾಗಿ ದೆಹಲಿಗೆ ಮರಳಿದ ನಂತರ ಮಾಧ್ಯಮದವರ ಬಳಿ ಮಾತನಾಡಿರುವ ಸೀತಾರಾಂ ಯೆಚೂರಿ, “ಸುಪ್ರೀಂ ಸೂಚನೆಯಂತೆ ಖುದ್ದು ಕಾಶ್ಮೀರಕ್ಕೆ ಭೇಟಿ ನೀಡಿ ಶಾಸಕ ಮಹಮ್ಮದ್ ಯೂಸುಫ್ ತರಿಗಾಮಿ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದೇನೆ. ಅವರು ಆರೋಗ್ಯವಾಗಿಯೇ ಇದ್ದಾರೆ. ಆದರೆ, ಕಣಿವೆ ರಾಜ್ಯ ಕಾಶ್ಮೀರದಲ್ಲಿ ಮಾತ್ರ ಕೇಂದ್ರ ಸರ್ಕಾರ ಕಟ್ಟಿಕೊಡುವ ಯಾವುದೇ ನೈಜ ಚಿತ್ರಣ ಕಾಣಿಸುತ್ತಿಲ್ಲ. ಬದಲಾಗಿ ಅದಕ್ಕೆ ವಿರುದ್ಧವಾದ ದೃಶ್ಯಗಳು ಕಂಡುಬರುತ್ತಿದೆ.
ನಾನು ಕಾಶ್ಮೀರದಲ್ಲಿ ಇದ್ದಾಗ ನನ್ನ ಸುತ್ತ ಯಾವಾಗಲೂ ಸೈನಿಕರಿದ್ದರು. ನನಗೆ ತರಿಗಾಮಿಯವರನ್ನು ಹೊರತುಪಡಿಸಿ ಬೇರೆ ಯಾರನ್ನೂ ಭೇಟಿ ಮಾಡಲು ಅನುಮತಿಸಿರಲಿಲ್ಲ. ಅಲ್ಲದೆ, ಇಲ್ಲಿನ ಚಿತ್ರಣಗಳು ಕಣಿವೆ ರಾಜ್ಯದಲ್ಲಿ ಸೃಷ್ಟಿಯಾಗಿರುವ ಭೀಕರತೆ ಹಾಗೂ ಭಯಾನಕತೆಗೆ ಸಾಕ್ಷಿಯಾಗಿದೆ. ನಾನು ಶೀಘ್ರದಲ್ಲಿ ಈ ಕುರಿತು ಸುಪ್ರೀಂ ಕೋರ್ಟ್ಗೆ ವಿಸ್ಕೃತ ವರದಿಯೊಂದನ್ನು ಸಲ್ಲಿಸಲಿದ್ದೇನೆ” ಎಂದು ಅವರು ತಿಳಿಸಿದ್ದಾರೆ.






