janadhvani

Kannada Online News Paper

ಚುನಾವಣೆಯಲ್ಲಿ ಸೋತ ಸವದಿಗೆ ಡಿಸಿಎಂ ಪಟ್ಟ- ಏನಿದರ ರಹಸ್ಯ?

ಬೆಂಗಳೂರು,ಆ.29:- 2018ರ ವಿದಾನಸಭೆ ಚುನಾವಣೆಯಲ್ಲಿ ಸೋತ ಲಕ್ಷ್ಮಣ ಸವದಿ ಅವರಿಗೆ ಬಿಜೆಪಿ ಸಚಿವ ಸಂಪುಟದಲ್ಲಿ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ. ಇದೀಗ ಅವರು ಇಷ್ಟೊಂದು ಪವರ್ ಫುಲ್ ಆಗಿದ್ದು ಹೇಗೆ ಎಂಬ ಪ್ರಶ್ನೆ ಸಹಜವಾಗಿ ಎಲ್ಲರನ್ನೂ ಕಾಡುತ್ತಿದೆ.

ಹೈಕಮಾಂಡ್‍ನಿಂದ ಲಕ್ಷ್ಮಣ ಸವದಿಗೆ ದೊಡ್ಡ ಶ್ರೀ ರಕ್ಷೆ ಇದೆ. ಇದಕ್ಕೆ ಕಾರಣ ಮುಂಬರುವ ಮಹಾರಾಷ್ಟ್ರ ಚುನಾವಣೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರಿಗೂ ಸವದಿ ಅನಿವಾರ್ಯವಾಗಿದ್ದಾರೆ ಎಂದು ಹೇಳಲಾಗುತ್ತಿದೆ.  ಅಲ್ಲದೆ 76 ವರ್ಷದ ಯಡಿಯೂರಪ್ಪನವರನ್ನು ಬಿಜೆಪಿ ಹೈಕಮಾಂಡ್ ಮುಖ್ಯಮಂತ್ರಿ ಹುದ್ದೆಗೆ ಆಯ್ಕೆ ಮಾಡಿದೆ, ಹೀಗಾಗಿ ಯಡಿಯೂರಪ್ಪ ಅವರಿಗೆ ಪರ್ಯಾಯ ನಾಯಕತ್ವಕ್ಕಾಗಿ ಈ ನಿರ್ಧಾರ ಎಂಬ ಮಾತುಗಳೂ ಕೂಡ ಕೇಳಿ ಬರುತ್ತಿವೆ.

ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರ, ಪುಣೆ ಹೀಗೆ ಕೆಲ ಭಾಗಗಳಲ್ಲಿ ಲಕ್ಷ್ಮಣ ಸವದಿ ಹವಾ ಜೋರಿದೆ. ಈ ಭಾಗದಲ್ಲಿ ಬಿಜೆಪಿ ಗೆ ದೊಡ್ಡ ಶಕ್ತಿ ಇಲ್ಲ. ಲಕ್ಷ್ಮಣ ಸವದಿ ಇದ್ದರೆ ಕೆಲ ಭಾಗಗಳಲ್ಲಿ ಬಿಜೆಪಿಗೆ ಅನುಕೂಲವಾಗಲಿದೆ. ಇದನ್ನು ಬಿಜೆಪಿ ಹೈಕಮಾಂಡ್‍ಗೆ ಮಹಾರಾಷ್ಟ್ರ ಬಿಜೆಪಿ ಸಂಘಟನೆ ಮನವರಿಕೆ ಮಾಡಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ಸವದಿ ಹೆಸರು ಸೂಚಿಸುವ ಮೂಲಕ ಕರ್ನಾಟಕದ ಬಿಜೆಪಿ ನಾಯಕರೇ ಶಾಕ್ ಆಗುವಂತೆ ಮಾಡಿದೆ.

ಮಹಾರಾಷ್ಟ್ರ ವಿಧಾನಸಭೆಗೆ ಅಕ್ಟೋಬರ್‍ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಚುನಾವಣೆ ಮುಗಿಯೋವರೆಗೂ ಲಕ್ಷ್ಮಣ ಸವದಿಯನ್ನು ಸಂಪುಟದಲ್ಲಿ ಉಳಿಸಿಕೊಳ್ಳಲೇ ಬೇಕು ಎಂದು ಹೈಕಮಾಂಡ್ ತಾಕೀತು ಮಾಡಿದೆ. ಅನರ್ಹ ಶಾಸಕ ಮಹೇಶ್ ಕುಮಟಳ್ಳಿಗೆ ಇದನ್ನು ಹೇಳಿ ಅಸಮಾಧಾನ ಸರಿಪಡಿಸಿ ಎಂದು ಕರ್ನಾಟಕದ ಬಿಜೆಪಿ ನಾಯಕರಿಗೆ ಹೈಕಮಾಂಡ್ ಸೂಚಿಸಿದೆ ಎಂದು ಹೇಳಲಾಗುತ್ತಿದೆ.

ಲಕ್ಷ್ಮಣ ಸವದಿ ಅವರನ್ನು ಏಕಾಏಕಿ ಸಚಿವರನ್ನಾಗಿ ಮಾಡಿದ್ದಲ್ಲದೇ ಉಪಮುಖ್ಯಮಂತ್ರಿ ಹುದ್ದೆಯನ್ನೂ ನೀಡಲಾಗಿದೆ. ಇದು ನಮಗೆ ಆಘಾತ ತಂದಿದೆ. ಶಾಸಕರಾಗಿ ಆಯ್ಕೆಯಾಗದಿರುವವರನ್ನು ಮಂತ್ರಿಯನ್ನಾಗಿ ಮಾಡಿದ್ದರ ಹಿಂದೆ ಬೇರೆ ಏನೋ ಕಾರಣ ಇರಬಹುದು ಎಂದು ಬಿಜೆಪಿ ನಾಯಕರು ಅಭಿಪ್ರಾಯ ಪಟ್ಟಿದ್ದಾರೆ.

2012ರಲ್ಲಿ ಡಿ. ವಿ. ಸದಾನಂದ ಗೌಡರು ಸಿಎಂ ಆಗಿದ್ದ ಕಾಲದಲ್ಲಿ ಸಹಕಾರ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಆ ಸಂದರ್ಭದಲ್ಲಿ ಸದನದಲ್ಲೇ ನೀಲಿ ಚಿತ್ರ ವೀಕ್ಷಣೆ ಆರೋಪ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.

ಆ ಘಟನೆಯನ್ನು ಹೈಕಮಾಂಡ್ ಮರೆತಿರಬಹುದು, ಮುಂಬರುವ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಬಿಜೆಪಿ ರಾಷ್ಟ್ರೀಯ ನಾಯಕರು ಲಕ್ಷ್ಮಣ ಸವದಿಯನ್ನು ಡಿಸಿಎಂ ಹುದ್ದೆಗೆ ಕರೆದು ತಂದು ಕೂರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಉತ್ತರ ಕರ್ನಾಟಕದಲ್ಲಿ ಉಮೇಶ್ ಕತ್ತಿ ಮತ್ತು ಜಾರಕಿಹೊಳಿ ಸಹೋದರರನ್ನು ಹದ್ದುಬಸ್ತಿನಲ್ಲಿಡಲು ಹೈಕಮಾಂಡ್ ಈ ನಿರ್ಧಾರ ಕೈಗೊಂಡಿದೆ ಎಂದು ತಿಳಿದುಬಂದಿದೆ.