ನವದೆಹಲಿ: ಭಾರತದ ಆರ್ಥಿಕತೆ ಕುಂಠಿತಗೊಳ್ಳುತ್ತಿರುವುದು ಆತಂಕಕಾರಿ ವಿಷಯವಾಗಿದೆ ಎಂದು ಆರ್ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಸಮಸ್ಯೆ ನಿವಾರಣೆಗೆ ಬ್ಯಾಂಕೇತರ ವಾಣಿಜ್ಯ ಸಂಸ್ಥೆಗಳನ್ನು ಬಲಪಡಿಸಬೇಕು. ಇದಕ್ಕಾಗಿ ಸರ್ಕಾರ ಖಾಸಗಿ ಹೂಡಿಕೆಯನ್ನು ಪ್ರೋತ್ಸಾಹಿಸುವಂತಹ ಹೊಸ ಹೆಜ್ಜೆ ಇಡಲು ಮುಂದಾಗಬೇಕು ಎಂದು ತಿಳಿಸಿದ್ದಾರೆ,ಭಾರತದ ಜಿಡಿಪಿಯನ್ನು ಹೊಸ ದೃಷ್ಟಿಕೋನದಲ್ಲಿ ಲೆಕ್ಕಹಾಕಬೇಕಿದೆ ಎಂದು ಕೂಡ ಸಲಹೆ ನೀಡಿದರು.
ಮಾಜಿ ಅರ್ಥಶಾಸ್ತ್ರಜ್ಞ ಅರವಿಂದ್ ಸುಬ್ರಮಣಿಯನ್ ಅವರ ಸಂಶೋಧನಾ ಪ್ರಬಂಧ ಉಲ್ಲೇಖಿಸಿದ ಅವರು ದೇಶದ ಆರ್ಥಿಕ ಬೆಳವಣಿಯ ದರವನ್ನು ಅತಿಯಾಗಿ ಅಂದಾಜಿಸಲಾಗಿದೆ ಎಂದರು.ಖಾಸಗಿ ವಲಯದ ವಿಶ್ಲೇಷಕರಿಂದ ಆರ್ಥಿಕ ಬೆಳವಣಿಗೆ ಬಗ್ಗೆ ಸಾಕಷ್ಟು ಊಹಾಪೋಹಾಗಳಿವೆ, ಅದರಲ್ಲಿ ಕೆಲವರು ಸರ್ಕಾರದ ಅಂದಾಜಿಗಿಂತ ಉತ್ತಮವಾಗಿದ್ದಾರೆ. ಆರ್ಥಿಕತೆ ಕುಂಠಿತಗೊಳ್ಳುತ್ತಿರುವುದು ಕಳವಳಕಾರಿ ಅಂಶ ಎಂದು ನಾನು ನಂಬಿದ್ದೇನೆ ಎಂದರು.
2018-19ರಲ್ಲಿ ದೇಶದ ಜಿಡಿಪಿ ದರ 6.8 ಎನ್ನಲಾಗಿದೆ. ಆದರೆ, ಇದು 2014-15ಕ್ಕಿಂತ ಕಡಿಮೆ ಇದೆ. ಶೇಕಡಾ ಎರಡು ಅಥವಾ ಮೂರು ಹೆಚ್ಚಿನ ಬೆಳವಣಿಗೆಯನ್ನು ಹೇಗೆ ಸಾಧಿಸಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಇಂಧನ ಮತ್ತು ಬ್ಯಾಂಕೇತರ ಹಣಕಾಸು ಕ್ಷೇತ್ರದ ಬಗ್ಗೆ ತಕ್ಷಣದ ಕ್ರಮಗಳನ್ನು ಕೈಗೊಳ್ಳಬೇಕು. ಖಾಸಗಿ ವಲಯವನ್ನು ಹೂಡಿಕೆ ಮಾಡಲು ಉತ್ತೇಜಿಸಲು ಹೊಸ ಸುಧಾರಣೆಗಳನ್ನು ಜಾರಿಗೆ ತರಬೇಕು ಎಂದರು.






