janadhvani

Kannada Online News Paper

ಕಾಂಗ್ರೆಸ್ ಗೆ ಮುಖ್ಯಮಂತ್ರಿ ಪದವಿ ಆಫರ್ ಬಂದಿದ್ದು ನಿಜ – ಡಿಕೆಶಿ

ಬೆಂಗಳೂರು (ಜು. 21): ಜೆಡಿಎಸ್​ನಿಂದ ಕಾಂಗ್ರೆಸ್ ನವರಿಗೆ ಮುಖ್ಯಮಂತ್ರಿ ಆಫರ್ ಬಂದಿರುವುದು ನಿಜ. ಕಾಂಗ್ರೆಸ್​ನಲ್ಲಿ ಯಾರು ಬೇಕಾದರೂ ಸಿಎಂ ಆಗಿ ಎಂದು ನಮ್ಮ ಬಳಿ ಹೇಳಿದ್ದಾರೆ ಎಂದು ಸಚಿವ ಡಿ.ಕೆ. ಶಿವಕುಮಾರ್ ಒಪ್ಪಿಕೊಂಡಿದ್ದಾರೆ.

ಸರ್ಕಾರ ಉಳಿಯಬೇಕೆಂದರೆ ನಾವು ಯಾವ ತ್ಯಾಗಕ್ಕೂ ಸಿದ್ಧ ಎಂದು ಜೆಡಿಎಸ್​ ನಾಯಕರು ಹೇಳಿದ್ದಾರೆ. ನೀವು ಯಾರಿಗೆ ಬೇಕೋ ಅವರನ್ನು ಸಿಎಂ ಮಾಡಿ, ನಮಗೇನೂ ಅಭ್ಯಂತರವಿಲ್ಲ ಎಂದು ಸಿದ್ದರಾಮಯ್ಯ, ಪರಮೇಶ್ವರ್ ಮತ್ತು ನನ್ನ ಬಳಿ ಹೇಳಿದ್ದಾರೆ. ನಿಮ್ಮಲ್ಲೇ ಯಾರಾದರೂ ಮುಖ್ಯಮಂತ್ರಿಯಾಗಿ ಎಂದು ಕೂಡ ಹೇಳಿದ್ದಾರೆ. ಈ ಬಗ್ಗೆ ನಮ್ಮ ಹೈಕಮಾಂಡ್ ಜೊತೆಗೂ ಮಾತಾಡಿದ್ದಾರೆ ಎಂದು ಡಿಕೆಶಿ ಹೇಳಿದ್ದಾರೆ.

ಶಾಸಕ ಎನ್. ಮಹೇಶ್ ನಾಳೆ ಸದನಕ್ಕೆ ಬರುವುದಿಲ್ಲ ಎಂದು ಹೇಳಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸಚಿವ ಡಿ.ಕೆ. ಶಿವಕುಮಾರ್, ಎನ್. ಮಹೇಶ್ ನಾಳೆ ಬರ್ತಾರೆ ಅನ್ನೋ ವಿಶ್ವಾಸ ನಮಗಿದೆ. ನಾಳೆ ಏನಾಗುತ್ತೆ ಅಂತ ಹೇಳೋಕ್ಕೆ ನನಗೆ ಭವಿಷ್ಯವಾಣಿ ಗೊತ್ತಿಲ್ಲ. ನಮ್ಮ ಮೈತ್ರಿ ಸರ್ಕಾರ ಸುಭದ್ರವಾಗಿರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಶ್ವಾಸ ಮತಯಾಚನೆಗೆ ಗುರುವಾರ ಸಮಯ ಕೇಳಿದ್ದ ಸಿಎಂ ಕುಮಾರಸ್ವಾಮಿ ಇನ್ನೂ ವಿಶ್ವಾಸ ಮತಯಾಚನೆ ಮಾಡಿಲ್ಲ. ಈ ವಿಚಾರದಲ್ಲಿ ಈಗಾಗಲೇ ರಾಜ್ಯಪಾಲ ವಜುಭಾಯಿ ವಾಲಾ ಮಧ್ಯಪ್ರವೇಶ ಮಾಡಿದ್ದು, ಅವರು ನೀಡಿದ ಗಡುವಿಗೆ ಯಾವುದೇ ಬೆಲೆ ಕೊಡದೆ ಸಿಎಂ ಕಾಲಹರಣ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ನಾಳೆಯ ಅಧಿವೇಶನದಲ್ಲಿ ವಿಶ್ವಾಸ ಮತಯಾಚನೆ ಮಾಡುವುದಾಗಿ ತಿಳಿಸಿರುವ ಸಿಎಂ ಕುಮಾರಸ್ವಾಮಿ ನಡೆಯ ಬಗ್ಗೆ ಕುತೂಹಲ ಸೃಷ್ಟಿಯಾಗಿದೆ.