janadhvani

Kannada Online News Paper

ಬೆಳಗಾವಿ,ಜ.20- ದಿನಕಳೆದಂತೆ ತೀವ್ರ ಕುತೂಹಲ ಕೆರಳಿಸುತ್ತಿದೆ ರಾಜ್ಯ ರಾಜಕೀಯ . ಬಿಜೆಪಿಯ ಅಪರೇಷನ್ ಕಮಲ ಇಲ್ಲಿಗೇ ನಿಲ್ಲುವುದಿಲ್ಲ ಎಂದು ಅರಿತಿರುವ ಕಾಂಗ್ರೆಸ್, ಮಹಾ ಚಾಣಕ್ಯ ನೀತಿಗೆ ಕೈಹಾಕಿದೆ.

ಶೀಘ್ರ ಬಿಜೆಪಿಯ ಏಳು ಮಂದಿ ಶಾಸಕರನ್ನು ಅಪರೇಷನ್ ಕೈ ಮಾಡಿಸುವುದೇ ಈ ತಂತ್ರ. ಇದು ಯಶಸ್ವಿಯಾದರೆ ಗಡಿಜಿಲ್ಲೆಯ ಪ್ರಭಾವಿ ಕಮಲ ಶಾಸಕರೊಬ್ಬರು ಗಟ್ಟಿಯಾಗಿ ಕೈ ಅಪ್ಪಿಕೊಂಡು ಬಿಜೆಪಿಗೆ ಚಳ್ಳೆ ಹಣ್ಣು ತಿನ್ನಿಸಲು ಸಜ್ಜಾಗಿ ನಿಂತಿದ್ದಾರೆ.

ಏಳು ಶಾಸಕರನ್ನು ತಮ್ಮತ್ತ ಸೆಳೆದುಕೊಂಡರೆ ಅ ನಂತರ ಅಪರೇಷನ್ ಕಮಲ ಅಸಾಧ್ಯವಾಗಲಿದೆ ಎಂಬುದು ರಾಜ್ಯ ಕಾಂಗ್ರೆಸ್ ಮುಖಂಡರ ಚಿಂತನೆ. ಅದಕ್ಕಾಗಿಯೇ ತಂತ್ರಕ್ಕೆ ಪ್ರತಿತಂತ್ರ ಹೂಡಲು ಸಜ್ಜಾಗಿರುವ ಅವರು ಈಗಾಗಲೇ ಗಡಿಜಿಲ್ಲೆ ಬೆಳಗಾವಿ ಒಬ್ಬರು, ಮೈಸೂರು ಜಿಲ್ಲೆಯ ಒಬ್ಬರು ಸೇರಿದಂತೆ ಏಳು ಮಂದಿ ಬಿಜೆಪಿಯ ಇತ್ತೀಚಿನ ನಡಾವಳಿಗಳಿಂದ ಬೇಸತ್ತು ಕಾಂಗ್ರೆಸ್ ಪಾಳಯ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ ಎನ್ನಲಾಗಿದೆ.

ಈ ಸರ್ಜರಿಯಲ್ಲಿ ಕಾಂಗ್ರೆಸ್ ಭರ್ಜರಿಯಾಗಿ ಯಶಸ್ವಿಯಾದರೆ ಮುಂದೆಂದೂ ಬಜೆಪಿಗೆ ಆಪರೇಶನ್ ಕಮಲ ಅಸಾಧ್ಯವಾಗಲಿದೆ. ನಂತರ ಬಿಜೆಪಿ ಸರ್ಕಾರ ರಚನೆಗೆ ತಂತ್ರ ರೂಪಿಸಿದರೆ ಸರಾಸರಿ ಇಪ್ಪತ್ಮೂರು ಶಾಸಕರನ್ನು ಪಕ್ಷಕ್ಕೆ ಬರಸೆಳೆಯಬೇಕಾಗುತ್ತದೆ. ಇದು ಅಷ್ಟು ಸುಲಭದ ಮಾತಲ್ಲ ಎಂಬುದು ಕಾಂಗ್ರೆಸ್ ಚಿಂತನೆ.

ಒಟ್ಟಾರೆ ಏಟಿಗೆ ಎದುರೇಟು ಎಂಬಂತೆ ರಾಜ್ಯ ರಾಜಕೀಯ ಸಾಗುತ್ತಿದ್ದು ಈ ಎಲ್ಲಾ ಬೆಳವಣಿಗೆಗಳಿಂದ ರಾಜ್ಯದ ಜನರೂ ಬೇಸತ್ತಿದ್ದು ಪಕ್ಷಾಂತರಿಗಳು ಭರ್ಜರಿ ಮಹಾ ಮಂಗಳಾರತಿ ಆರಂಭಿಸಿದ್ದಾರೆ.

error: Content is protected !! Not allowed copy content from janadhvani.com