janadhvani

Kannada Online News Paper

ಸರಕಾರವನ್ನು ಅಸ್ಥಿರಗೊಳಿಸುವುದಿಲ್ಲ-ಬಿ ಎಸ್ ವೈ, ನುಡಿದಂತೆ ನಡೆಯಲಿ-ಸಿದ್ದು

ಬೆಂಗಳೂರು: “ನಾವು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಜೆಡಿಎಸ್ ಸರ್ಕಾರವನ್ನು ಅಸ್ಥಿರಗೊಳಿಸುವುದಿಲ್ಲ. ಮೈತ್ರಿ ಸರ್ಕಾರದ ನಾಯಕರು ಚಿಂತಿಸುವ ಅಗತ್ಯವಿಲ್ಲ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ. ಆಪರೇಷನ್ ಕಮಲದ ಯತ್ನ ವಿಫಲವಾಗುತ್ತಿದ್ದಂತೆಯೇ ಗುರುಗ್ರಾಮದ ರೆಸಾರ್ಟ್ ನಲ್ಲಿ ತಂಗಿದ್ದ ಬಿಜೆಪಿ ಶಾಸಕರೆಲ್ಲರನ್ನೂ ವಾಪಸ್ಸಾಗುವಂತೆ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ. ಆ ನಂತರ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು ತಾವು ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿಲ್ಲ ಎಂದಿದ್ದಾರೆ.

ಯಡಿಯೂರಪ್ಪ ಸಿಎಂ ಆಗ್ತಾರೆ ಎಂದಿದ್ದ ಕೇರಳ ಜ್ಯೋತಿಷಿ ಮಾತು ನಿಜವಾಗುತ್ತಾ? ಆದರೆ ನಿಜಕ್ಕೂ ಆಪರೇಷನ್ ಕಮಲದ ಪ್ಲ್ಯಾನ್ ಫೇಲ್ ಆಗಿದೆಯಾ? ಅಥವಾ ಯಡಿಯೂರಪ್ಪ ಅವರ ಈ ಹೇಳಿಕೆಯೂ ಹೊಸದೊಂದು ತಂತ್ರದ ಭಾಗವಾ ಎಂಬುದು ಈಗಿರುವ ಪ್ರಶ್ನೆ. ನಾಲ್ಕು ದಿನಗಳಿಂದಲೂ ರಾಜ್ಯ ರಾಜಕಾರಣದಲ್ಲಿ ಬಿರುಸಿನ ಚಟುವಟಿಕೆ ನಡೆಯುತ್ತಿದ್ದು, ಬಿಜೆಪಿಯ ಶಾಸಕರೆಲ್ಲರೂ ಗುರುಗ್ರಾಮದ ರೆಸಾರ್ಟ್ ವೊಂದರಲ್ಲಿ ತಂಗಿದ್ದರೆ, ಕಾಂಗ್ರೆಸ್ಸಿನ ಕೆಲ ಶಾಸಕರು ಮುಂಬೈಗೆ ತೆರಳಿ, ಸಂಪರ್ಕಕ್ಕೆ ಸಿಕ್ಕದಂತೆ ನಾಪತ್ತೆಯಾಗಿದ್ದರು.

ನುಡಿದಂತೆ ನಡೆಯಲಿ-ಸಿದ್ದರಾಮಯ್ಯ :
ರಾಜ್ಯದ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನು ಬಿಜೆಪಿ ಮಾಡುವುದಿಲ್ಲ ಎಂಬ ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪನವರನ್ನು ಹೇಳಿಕೆಯನ್ನು ಸ್ವಾಗತಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಯಡಿಯೂರಪ್ಪನವರು ನುಡಿದಂತೆ ನಡೆಯಲಿ ಎಂದಿದ್ದಾರೆ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ನಿರ್ಧಾರನ್ನು ಟ್ವೀಟ್ ಮಾಡುವ ಮೂಲಕ ಸ್ವಾಗತಿಸಿರುವ ಸಿದ್ದರಾಮಯ್ಯ, ಯಡಿಯೂರಪ್ಪ ನುಡಿದಂತೆ ನಡೆದು, ರಾಜ್ಯದ ಜನತೆಯ ನಂಬಿಕೆ ಉಳಿಸಿಕೊಳ್ಳಲಿ ಎಂದರು. ದೆಹಲಿಯಲ್ಲಿರುವ ಬಿಜೆಪಿ ಶಾಸಕರನ್ನು ರಾಜ್ಯಕ್ಕೆ ಕರೆಸಿಕೊಂಡು ಬರ ನಿರ್ವಹಣೆಗೆ ಕಳುಹಿಸುತ್ತೇನೆ ಎಂಬ ಯಡಿಯೂರಪ್ಪನವರ ಹೇಳಿಕೆ ಸ್ವಾಗತಾರ್ಹ ಎಂದು ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.

error: Content is protected !! Not allowed copy content from janadhvani.com