janadhvani

Kannada Online News Paper

ಸೌಹಾರ್ದತೆಗೆ ಸಾಕ್ಷಿಯಾದ ಈದ್ ಮಿಲಾದ್

 

ಸೌಹಾರ್ದತೆ ಎಂಬೂದು ಮನುಷ್ಯ ಜೀವಗಳ ನಡುವೆ ಇರುವ ಒಂದು ಅಭೂತಪೂರ್ವ ಸಂದೇಶ. ನಾವು ಹಲವಾರು ಬಾರಿ ಕಾರ್ಯಕ್ರಮಗಳಲ್ಲಿ ಸೌಹಾರ್ದತೆಯ ವಿಷಯವನ್ನು ಪ್ರಸ್ರಾಪಿಸುವುದನ್ನು ಗಮನಿಸಿರಬಹುದು. ಇನ್ನು ಕೆಲವು ಕಡೆ ಅದನ್ನು ಕೇವಲ ಮಾತಿಗೆ ಮಾತ್ರ ಸೀಮಿತಗೊಳಿಸದೆ ಕಾರ್ಯರೂಪಕ್ಕೆ ತರುವುದನ್ನೂ ಕಂಡಿರಬಹುದು. ಇದೆಲ್ಲವೂ ಮನುಷ್ಯ ಜೀವಗಳ ನಡುವೆ
ಜಾತಿ – ಧರ್ಮ ಎಂಬ ವಿಷಬೀಜವನ್ನು ಹೋಗಲಾಡಿಸಿ ಮಾನವೀಯ ಮೌಲ್ಯಗಳ ಸಂಪಾದನೆಗೆ ದಾರಿಯಾಗುತ್ತದೆ.

ಇಂದು ಲೋಕ ಪ್ರವಾದಿ (ಸ.ಅ) ರವರ ಜನ್ಮ ದಿನದ ಪ್ರಯುಕ್ತ ಪ್ರತೀ
ವರ್ಷದಂತೆ ಈ ಸಲವೂ ಮುಸ್ಲಿಂ‌ ಬಾಂಧವರು ಮಂಗಳೂರು ನಗರದ ಹಲವು ಕಡೆಗಳಲ್ಲಿ ಮೆರವಣಿಗೆಯನ್ನು ಹೊರಟಿದ್ದರು.. ಈ ಸಂದರ್ಭದಲ್ಲಿ ಅಲ್ಲಿಯ ಹಿಂದೂ ಸಹೋದರರು ಮೆರವಣಿಗೆ ಹೊರಟ ಮುಸ್ಲಿ ಬಾಂಧವರಿಗಾಗಿ ಸಿಹಿತಿಂಡಿಯನ್ನು ವಿತರಿಸುವುದರ ಮೂಲಕ ಸೌಹಾರ್ದತೆ ಇನ್ನೂ ಮರೆಯಾಗಿಲ್ಲ ಎಂಬ ಸಂದೇಶವನ್ನು ನೀಡಿದರು.

ನನಗಂತೂ ಆ ದೃಶ್ಯಗಳನ್ನು ನೋಡಿದಾಕ್ಷಣ ಮನಸ್ಸಿಗೆ ಏನೋ ಒಂದು ರೀತಿಯ ಸಂತೋಷವುಂಟಾಯಿತು. ಕೋಮುದ್ವೇಷಗಳ ಸೂಕ್ಷ್ಮ ಪ್ರದೇಶವಾದ ಮಂಗಳೂರಿನಂತಹ ನಗರದಲ್ಲಿ ಇಂದು ಒಂದು ಸೌಹಾರ್ದತೆ ಬೆಳೆಸುವ ಕಾರ್ಯ ನಡೆದಿದೆ ಎಂದರೆ ಖಂಡಿತವಾಗಿಯೂ ಆ ಹಿಂದೂ ಸಹೋದರರ ಮನಸ್ಸನ್ನು ಮೆಚ್ಚಲೇಬೇಕಾದಂತದ್ದು.
ಈ ನಾಲ್ಕು ದಿನದ ಇಹಲೋಕ ಬದುಕಿನಲ್ಲಿ ಯಾರಿಗೂ ಇಲ್ಲಿ ಕೋಮುದ್ವೇಷ , ಜಾತಿ ಕಲಹ ಬೇಡ. ಎಲ್ಲರೂ ಒಂದಲ್ಲ ಒಂದು ದಿನ ಈ ಭೂಮಿ ಬಿಟ್ಟು ಪರಲೋಕ ಯಾತ್ರೆ ನಡೆಸಲೇಬೇಕು. ಧರ್ಮದ ಹೆಸರಿನಲ್ಲಿ ಪರಸ್ಪರ ಕಚ್ಚಾಡಿ ಎಂದೂ ಯಾವುದೇ ಧರ್ಮದ ಪವಿತ್ರ ಗ್ರಂಥ ಕೂಡ ಸೂಚಿಸಿಲ್ಲ. ಎಲ್ಲಾ ಧರ್ಮದ , ಎಲ್ಲಾ ಜಾತಿಯ ಜನರು ಪರಸ್ಪರ ಅನ್ಯೋನ್ಯತೆಯಿಂದ , ಸೌಹಾರ್ದತಯುತವಾಗಿ, ಮಾನವೀಯ ಮೌಲ್ಯಗಳಿಗೆ ಬೆಲೆಯನ್ನು ಕಲ್ಪಿಸುವುದರ ಮೂಲಕ ಈ ಸಮಾಜದಲ್ಲಿ ಮುಂದುವರಿದರೆ, ಎಲ್ಲರಿಗೂ ನೆಮ್ಮದಿ ಬದುಕು ದೊರಕಿದಂತಾಗುತ್ತದೆ.

ಕೊನೆಯದಾಗಿ ಇಂದಿನ ಸೌಹಾರ್ದತೆಗೆ ಕಾರಣಕರ್ತರಾದ ಹಿಂದೂ ಸಹೋದರರಿಗೆ ಧನ್ಯವಾದವನ್ನು ಸಲ್ಲಿಸುತ್ತಾ , ಈ ಸೌಹಾರ್ದ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತಗೊಳಿಸದೆ, ಜೀವನದುದ್ದಕ್ಕೂ ಸೌಹಾರ್ದತಯುತವಾಗಿ ಬದುಕಿ ಎಂದೂ ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ ಎಲ್ಲಾ ಮತಬಾಂಧವರಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ.

ಹಸೈನಾರ್ ಕಾಟಿಪಳ್ಳ

error: Content is protected !! Not allowed copy content from janadhvani.com