janadhvani

Kannada Online News Paper

ಕುಂದಾಪುರ ಮೂಲದ ವ್ಯಕ್ತಿ ರಿಯಾದ್ ನಲ್ಲಿ ಮೃತ್ಯು. ನೆರವಿಗೆ ಧಾವಿಸಿದ ಕೆಸಿಎಫ್

ರಿಯಾದ್: ಕುಂದಾಪುರ ತಾಲೂಕಿನ ಕೋಡಿ ನಿವಾಸಿ ಉಸ್ಮಾನ್ (48) ಎಂಬವರು ಮೊನ್ನೆ ಇಲ್ಲಿ ಹೃದಯಾಘಾತದಿಂದ ನಿಧನರಾಗಿದ್ದು ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಸಂಘಟನೆಯ ನೆರವಿನೊಂದಿಗೆ ಇಲ್ಲಿನ ನಸೀಂ ಸಾರ್ವಜನಿಕ ಖಬರಸ್ಥಾನದಲ್ಲಿ ದಫನ ಮಾಡಲಾಯಿತು.

ಕಳೆದ ಹದಿನೈದು ವರ್ಷಗಳಿಂದ ರಿಯಾದ್ ನ ವಿವಿಧ ಭಾಗಗಳಲ್ಲಿ ಕಂಪ್ಯೂಟರ್ ಬಿಡಿ ಭಾಗಗಳ ಮಾರಾಟ ನಡೆಸುತ್ತಿದ್ದ ಉಸ್ಮಾನ್ ರವರಿಗೆ ಮೊನ್ನೆ ಇದ್ದಕ್ಕಿದ್ದಂತೆ ಎದೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲೇ ಅಸುನೀಗಿದ್ದರು.

ಕರಾವಳಿ ಮೂಲದ ವ್ಯಕ್ತಿಯೊಬ್ಬರ ನಿಧನವಾಗಿದೆ ಎಂಬ ಸುದ್ದಿ ತಿಳಿದುಕೊಂಡ ಕೆಸಿಎಫ್ ರಿಯಾದ್ ಝೋನ್ ಮುಖಂಡರು ತಕ್ಷಣವೇ ಸ್ಪಂದಿಸಿ ಮೃತರ ಪಾರ್ಥಿವ ಶರೀರವನ್ನು ಇರಿಸಲಾಗಿದ್ದ ಉಬೈದ್ ಆಸ್ಪತ್ರೆಗೆ ತೆರಳಿ ಮರಣೋತ್ತರ ಕ್ರಿಯೆಗೆ ಅಗತ್ಯವಿರುವ ದಾಖಲೆಗಳನ್ನು ಹೊಂದಿಸಲು ನೆರವಾಗಿದ್ದಾರೆ.

ಕೆಸಿಎಫ್ ರಿಯಾದ್ ಝೋನ್ ನಾಯಕ ಮಜೀದ್ ವಿಟ್ಲ, ಭಾರತೀಯ ರಾಯಭಾರಿ ಕಚೇರಿ, ಸೌದಿ ಪಾಸ್‌ಪೋರ್ಟ್ ಇಲಾಖೆ, ಸ್ಥಳೀಯ ಪೋಲಿಸ್ ಸ್ಟೇಶನ್ ಸೇರಿದಂತೆ ವಿವಿಧ ಇಲಾಖೆಗಳಿಂದ ಹಾಗೂ ಊರಿನ ಕುಟುಂಬಸ್ಥರಿಂದ ದೊರೆಯಬೇಕಾಗಿದ್ದ ಕಾಗದಪತ್ರಗಳನ್ನು ಸರಿಪಡಿಸಲು ನೆರವಾಗಿದ್ದು ಮೃತರ ಸಹೋದರ ಅಬ್ದುರಹೀಂ ಹಾಗೂ ಇನ್ನೋರ್ವ ಬಂಧು ಸಲೀಮ್ ಎಲ್ಲ ರೀತಿಯ ಸಹಕಾರ ನೀಡಿದ್ದಾರೆ.

ನಸೀಂ ಮಸೀದಿಯಲ್ಲಿ ನಡೆದ ಜನಾಝ ನಮಾಝ್ ಹಾಗೂ ಬಳಿಕ ನಡೆದ ದಫನ ಕ್ರಿಯೆಯಲ್ಲಿ ಕೆಸಿಎಫ್ ನೇತಾರರಾದ ಹಸನ್ ಸಾಗರ್, ಜಾಫರ್ ಸಾದಿಕ್ ತಂಗಳ್, ಶರೀಫ್ ಮದನಿ ಲಾಯ್ಲ ಹಾಗೂ ಮೃತರ ಬಂಧುಗಳು, ಆಪ್ತರು, ಸ್ಥಳೀಯರು ಸೇರಿದಂತೆ ನೂರಾರು ಜನರು ಭಾಗವಾಗಿದ್ದರು.

ಮೃತರು ಪತ್ನಿ , ಇಬ್ಬರು ಮಕ್ಕಳು ಸೇರಿದಂತೆ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.

error: Content is protected !! Not allowed copy content from janadhvani.com