janadhvani

Kannada Online News Paper

ಹಜ್‌ ಭವನ ಅಡ್ಯಾರ್‌ ಕಣ್ಣೂರಿನಲ್ಲಿ ನಿರ್ಮಿಸಲಾಗುವುದು- ಜಮೀರ್ ಅಹಮ್ಮದ್ ಖಾನ್‌

ಮಂಗಳೂರು: ‘ನಗರದ ಬಜ್ಪೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಸ್ಥಳದ ಬದಲಿಗೆ ಅಡ್ಯಾರ್‌ ಕಣ್ಣೂರು ಮಸೀದಿ ಎದುರಿನಲ್ಲಿ ಮಂಗಳೂರು ಹಜ್‌ ಭವನ ನಿರ್ಮಿಸಲಾಗುವುದು’ ಎಂದು ಹಜ್‌ ಮತ್ತು ವಕ್ಫ್‌ ಸಚಿವ ಬಿ.ಜೆಡ್.ಜಮೀರ್ ಅಹಮ್ಮದ್ ಖಾನ್‌ ತಿಳಿಸಿದರು.

ಬಜ್ಪೆಯ ಅನ್ಸಾರ್‌ ಶಾಲೆಯ ಸಭಾಂಗಣದಲ್ಲಿ ಶನಿವಾರ ನಡೆದ ಪ್ರಸಕ್ತ ಸಾಲಿನ ಹಜ್‌ ಯಾತ್ರಿಕರ ಬೀಳ್ಕೊಡುಗೆ ಸಮಾರಂಭವನ್ನು  ಉದ್ಘಾಟಿಸಿ ಮಾತನಾಡಿದ ಅವರು, ‘ಬಜ್ಪೆಯಲ್ಲಿ ಈಗ ಗುರುತಿಸಿರುವ ಸ್ಥಳದಲ್ಲಿ ಹಜ್‌ ಭವನ ನಿರ್ಮಿಸಿದರೆ ಹಜ್‌ ಯಾತ್ರೆ ಸಂದರ್ಭದ ಹೊರತಾಗಿ ಜನರ ಬಳಕೆಗೆ ಲಭ್ಯವಾಗುವುದಿಲ್ಲ. ಈ ಕಾರಣದಿಂದ ಅಡ್ಯಾರ್‌ ಮಸೀದಿ ಎದುರಿನಲ್ಲಿ ಹಜ್ ಭವನ ನಿರ್ಮಿಸಿ, ಉಳಿದ ಸಮಯದಲ್ಲಿ ಅದನ್ನು ಬಡವರಿಗೆ ಮದುವೆ ಮತ್ತಿತರ ಸಮಾರಂಭಗಳಿಗೆ ರಿಯಾಯ್ತಿ ದರದಲ್ಲಿ ಒದಗಿಸುವ ಯೋಚನೆ ಇದೆ’ ಎಂದರು.

ಅಡ್ಯಾರ್‌ ಮಸೀದಿ ಎದುರಿನಲ್ಲಿರುವ 1 ಎಕರೆ ನಿವೇಶನವೊಂದನ್ನು ಖರೀದಿಸಿ ಹಜ್‌ ಭವನ ನಿರ್ಮಿಸುವ ಉದ್ದೇಶವಿದೆ. ತಾವು ಶುಕ್ರವಾರ ಖುದ್ದಾಗಿ ನಿವೇಶನ ಪರಿಶೀಲಿಸಿದ್ದು, ಅದರ ಮಾಲೀಕರೊಂದಿಗೆ ಚರ್ಚಿಸಲಾಗಿದೆ. ಹಜ್‌ ಭವನಕ್ಕೆ ಇಲಾಖೆಯಿಂದ  10 ಕೋಟಿ ಅನುದಾನ ಒದಗಿಸಿದ್ದು, ಜನರಿಗೆ ಹೆಚ್ಚು ಅನುಕೂಲವಾಗುವ ರೀತಿಯಲ್ಲಿ ಕಟ್ಟಡ ನಿರ್ಮಿಸಲಾಗುವುದು ಎಂದು ತಿಳಿಸಿದರು.

ಬಡವರನ್ನು ಯಾತ್ರೆಗೆ ಕಳಿಸಿ:

ಖುರ್‌ ಆನ್‌ ಗ್ರಂಥದಲ್ಲಿ ಹೇಳಿರುವಂತೆ ನಾವು ಎಷ್ಟೇ ಶ್ರೀಮಂತರಾಗಿದ್ದರೂ ಒಂದು ಬಾರಿಯ ಹಜ್‌ ಯಾತ್ರೆಗೆ ಮಾನ್ಯತೆ ಇದೆ. ಶ್ರೀಮಂತರು ಹಣವಿದೆ ಎಂದು ಎಷ್ಟು ಬಾರಿ ಯಾತ್ರೆ ಮಾಡಿದರೂ ಹೆಚ್ಚೇನೂ ಸಾಧಿಸಲು ಆಗದು. ಆದ್ದರಿಂದ ಶ್ರೀಮಂತರು ಬಡವರನ್ನು ಹಜ್‌ ಯಾತ್ರೆಗೆ ಕಳುಹಿಸಲು ನೆರವಾಗಬೇಕು. ಅದರಿಂದ ಹಜ್‌ ಯಾತ್ರೆಗಿಂತಲೂ ದೊಡ್ಡ ಸೇವೆ ಮಾಡಿದಂತಾಗುತ್ತದೆ ಎಂದು ಮನವಿ ಮಾಡಿದರು.

‘ನಾನು 22 ವರ್ಷದಿಂದ ಮಸೀದಿಯ ಇಮಾಮ್‌ಗಳನ್ನು ಸ್ವಂತ ಖರ್ಚಿನಲ್ಲಿ ಹಜ್‌ ಯಾತ್ರೆಗೆ ಕಳುಹಿಸುತ್ತಿದ್ದೇನೆ. ಈ ಬಾರಿ 52 ಜನ ಧರ್ಮಗುರುಗಳ ಯಾತ್ರೆಯ ವೆಚ್ಚ ಭರಿಸುತ್ತಿದ್ದೇನೆ. ಎಲ್ಲ ಧರ್ಮ ಗುರುಗಳೂ ಜೀವನದಲ್ಲಿ ಒಮ್ಮೆಯಾದರೂ ಹಜ್‌ ಯಾತ್ರೆ ಕೈಗೊಳ್ಳುವಂತಾಗಬೇಕು. ನನಗೆ ಶಕ್ತಿ ದೊರೆತರೆ ಆ ಕೆಲಸ ಮಾಡುತ್ತೇನೆ’ ಎಂದರು.

ರಾಜ್ಯದಲ್ಲಿ ಈ ಬಾರಿ ಹಜ್‌ ಯಾತ್ರೆಗೆ ಅವಕಾಶ ಕೋರಿ 18,427 ಮಂದಿ ಅರ್ಜಿ ಸಲ್ಲಿಸಿದ್ದರು. ಆದರೆ, 6,624 ಮಂದಿಗೆ ಅವಕಾಶ ದೊರೆತಿದೆ. 658 ಹಿರಿಯ ನಾಗರಿಕರು ಮತ್ತು 28 ಮಹಿಳೆಯರನ್ನು ನೇರವಾಗಿ ಆಯ್ಕೆ ಮಾಡಲಾಗಿದೆ. 5,938 ಮಂದಿಯನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗಿದೆ ಎಂದು ಸಚಿವ ಜಮೀರ್ ಅಹಮ್ಮದ್ ಖಾನ್‌ ತಿಳಿಸಿದರು.

ಹಜ್‌ ಯಾತ್ರಿಕರ ಪಾಸ್‌ಪೋರ್ಟ್ ಬಿಡುಗಡೆ ಮಾಡಿ ಮಾತನಾಡಿದ ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್, ‘ಹಜ್‌ ಯಾತ್ರಿಕರಿಗೆ ಅಗತ್ಯವಿರುವ ಎಲ್ಲ ಸೌಕರ್ಯಗಳನ್ನು ರಾಜ್ಯ ಹಜ್‌ ಸಮಿತಿ ಒದಗಿಸುತ್ತಿದೆ. ಯಾತ್ರೆಯ ಆರಂಭದಿಂದ ಅಂತ್ಯದವರೆಗೆ ಸಮಿತಿ ನಿಯೋಜಿಸಿರುವ ಸ್ವಯಂಸೇವಕರ ಜೊತೆ ಸಂಪ‌ರ್ಕದಲ್ಲಿ ಇರಿ. ವಾಪಸು ಬರುವಾಗ ವಿಮಾನ ವಿಳಂಬ ಆಗಬಹುದು. ಆದರೆ, ಗಲಿಬಿಲಿಗೊಳ್ಳದೇ ಸಹಕರಿಸಿ’ ಎಂದು ಕಿವಿಮಾತು ಹೇಳಿದರು.

ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಖಾಝಿ ಇಬ್ರಾಹಿಂ ಮುಸ್ಲಿಯಾರ್‌ ಬೇಕಲ್‌, ಬಜ್ಪೆ ಮಸೀದಿಯ ಧರ್ಮಗುರು ಅಬ್ದುಲ್ ರಝಾಖ್ ಮದನಿ,ವಿಧಾನ ಪರಿಷತ್‌ ಸದಸ್ಯ ಬಿ.ಎಂ.ಫಾರೂಕ್‌, ಮಾಜಿ ಶಾಸಕ ಬಿ.ಎ.ಮೊಹಿಯುದ್ದೀನ್ ಬಾವಾ, ಜಿಲ್ಲಾ ವಕ್ಫ್‌ ಸಲಹಾ ಮಂಡಳಿ ಅಧ್ಯಕ್ಷ ಯು.ಕೆ.ಕಣಚೂರು ಮೋನು, ಹಜ್‌ ಸಮಿತಿ ಸದಸ್ಯ ಕೆ.ಎಂ.ಅಬೂಬಕ್ಕರ್ ಸಿದ್ದೀಖ್, ವಿಧಾನ ಪರಿಷತ್‌ ಮಾಜಿ ಸದಸ್ಯ ಕೆ.ಎಸ್‌.ಎಂ.ಮಸೂದ್‌, ಯೇನೆಪೋಯ ಡೀಮ್ಡ್ ವಿಶ್ವವಿದ್ಯಾಲಯದ ಕುಲಾಧಿಪತಿ ವೈ.ಅಬ್ದುಲ್ಲಾ ಕುಂಞಿ, ರಾಜ್ಯ ಹಜ್‌ ಸಮಿತಿ ಅಧ್ಯಕ್ಷ ವೈ.ಮೊಹಮ್ಮದ್ ಕುಂಞಿ, ಅಲ್ಪಸಂಖ್ಯಾತರ ಅಭಿವೃದ್ಧಿ, ಹಜ್‌ ಮತ್ತು ವಕ್ಫ್‌ ಇಲಾಖೆ ಕಾರ್ಯದರ್ಶಿ ಮೊಹಮ್ಮದ್ ಮೊಹ್ಸಿನ್‌, ಹಜ್‌ ಸಮಿತಿ ಕಾರ್ಯನಿರ್ವಾಹಕ ಅಧಿಕಾರಿ ಸರ್ಫರಾಜ್‌ ಖಾನ್‌ ಸರ್ದಾರ್‌, ಮಂಗಳೂರು ಹಜ್‌ ಕ್ಯಾಂಪ್‌ ಸಂಘಟನಾ ಸಮಿತಿ ಕಾರ್ಯದರ್ಶಿ ಎಸ್‌.ಎಂ.ರಶೀದ್‌  ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com