ದುಬೈ: ಯುಎಇಯಲ್ಲಿ ಹೊಸ ಫೆಡರಲ್ ಟ್ರಾಫಿಕ್ ಕಾನೂನುಗಳು ಚಲಾವಣೆಗೆ ಬಂದಿದ್ದು, ವಿವಿಧ ಉಲ್ಲಂಘನೆಗಳಿಗೆ ವಿಧಿಸುವ ಫೆನಾಲ್ಟಿಯಲ್ಲೂ ಬದಲಾವಣೆ ತರಲಾಗಿದೆ.
ವಿವಿಧ ಅಪರಾಧಗಳಿಗೆ ದಂಡವನ್ನು ಏಕೀಕರಣ ಗೊಳಿಸಿದ ಹೊರತಾಗಿ, ರಸ್ತೆಯಲ್ಲಿ ನಡೆಯುವ ಕ್ಷುಲ್ಲಕ ಅಪರಾಧವಾಗಿ ಕಾಣುವ ಕಾನೂನು ಉಲ್ಲಂಘನೆಗೂ ಭಾರೀ ದಂಡ ವಿಧಿಸಲಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಕಾನೂನು ಉಲ್ಲಂಘನೆಗಾಗಿ ಅಧಿಕಾರಿಗಳು ವಶಪಡಿಸಿಕೊಂಡ ವಾಹನಗಳನ್ನು ನಿಶ್ಚಿತ ಕಾಲಾವಧಿ ಮುಗಿದರೂ ರಿಲೀಸ್ ಮಾಡದಿದ್ದಲ್ಲಿ, ಒಂದೊಂದು ದಿನಗಳಿಗೂ ದಂಡ ವಿಧಿಸಲಾಗುವುದು. ಸಣ್ಣ ಕಾರುಗಳಿಗೆ ದಿನಕ್ಕೆ 50 ದಿರ್ಹಂ ಮತ್ತು ಹೆವಿ ವಾಹನಗಳಿಗೆ 100 ದಿರ್ಹಂ ದಂಡ ವಿಧಿಸಲಾಗುತ್ತದೆ. ಹೀಗೆ ವಾಹನದ ಮಾಲೀಕ ಗರಿಷ್ಟ 3000 ವರೆಗೆ ದಂಡ ಪಾವತಿಸಿದ ನಂತರವೇ ವಾಹನವನ್ನು ಮರಳಿಸಲಾಗುತ್ತದೆ.
ಪ್ರತ್ಯೇಕ ಪರವಾನಗಿ ಇಲ್ಲದ ವಾಹನಗಳಲ್ಲಿ ಬೆಂಕಿ ಹಿಡಿಯಬಹುದಾ ವಸದತುಗಳನ್ನು ಕೊಂಡೊಯ್ದರೆ 3000 ದಿರ್ಹಂ ಮತ್ತು 24 ಕಪ್ಪು ಚುಕ್ಕೆಗಳನ್ನು ದಂಡವಾಗಿ ವಿಧಿಸಲಾಗುತ್ತದೆ. ವಾಹನವನ್ನು 60 ದಿನಗಳವರೆಗೆ ಮುಟ್ಟುಗೋಲು ಮಾಡಲಾಗುವುದು. ವಾಹನದಲ್ಲಿ ಪ್ರಯಾಣಿಕರನ್ನು ಪರವಾನಗಿ ಇಲ್ಲದೆ ಕರೆದೊಯ್ದರೆ, ವಾಹನವನ್ನು 30 ದಿನಗಳ ಕಾಲ ವಶಪಡಿಸಿಕೊಳ್ಳಲಾಗುತ್ತದೆ.
ಮಕ್ಕಳಿಗೆ ತಮ್ಮ ಕಾರಿನಲ್ಲಿ ವಿಶೇಷ ಸೀಟನ್ನು ಹೊಂದಿಲ್ಲ ಎಂಬ ಅಂಶವನ್ನು ಉಲ್ಲಂಘನೆ ಎಂದು ಹಲವರು ಪರಿಗಣಿಸುವುದಿಲ್ಲ. ಆದರೆ, ನಾಲ್ಕು ವರ್ಷ ವಯಸ್ಸಿನ ಮಕ್ಕಳನ್ನು ಪ್ರತ್ಯೇಕ ಸೀಟ್ ಇಲ್ಲದ ವಾಹನದಲ್ಲಿ ಕೊಂಡೊಯ್ಯುವುದು 400 ದಿರ್ಹಂ ದಂಡ ಪಾವತಿಸಬೇಕಾದ ಅಪರಾಧವಾಗಿದೆ.
ಭಾರೀ ವಾಹನಗಳನ್ನು ಚಾಲನೆ ಮಾಡುವಾಗ ಸಾರ್ವಜನಿಕ ಆಸ್ತಿ ಅಥವಾ ಖಾಸಗಿ ಆಸ್ತಿಗೆ ನಾಶ ಉಂಟು ಮಾಡುವುದು, ಕೆಂಪು ಸಿಗ್ನಲ್ ತಪ್ಪಿಸುವುದು, ಅನುಮತಿ ರಹಿತ ಸ್ಥಳಗಳಲ್ಲಿ ಓವರ್ಟೇಕ್ ಮಾಡುವುದು ಮುಂತಾದವುಗಳಿಗೆ 3000 ದಿರ್ಹಂ ದಂಡ ಮತ್ತು ಪರವಾನಗಿಯನ್ನು ಒಂದು ವರ್ಷದ ವರೆಗೆ ಮುಟ್ಟುಗೋಲು ಮಾಡಲಾಗುವುದು. ಶಾಲೆಯ ಬಸ್‌ಗಳ ಸ್ಟಾಪ್ ಸಿಗ್ನಲ್ ಅನ್ನು ನಿರ್ಲಕ್ಷಿಸಿದರೆ, 1000 ದಿರ್ಹಂ ದಂಡ ಮತ್ತು 10 ಕಪ್ಪು ಚುಕ್ಕೆಗಳನ್ನು ನೀಡಲಾಗುವುದು.
ಸಂಚಾರ ಸಂಕೇತಗಳನ್ನು ಮುರಿದು ರಸ್ತೆಯಲ್ಲಿ ಅಡಚಣೆ ಉಂಟು ಮಾಡುವವರು 500 ದಿರ್ಹಂ ದಂಡ ಮತ್ತು ಐದು ಕಪ್ಪು ಚುಕ್ಕೆಗಳನ್ನು ಪಡೆಯುತ್ತಾರೆ.
ಅನಧಿಕೃತ ವಾಹನದ ರ್ಯಾಲಿಗಳಿಗೂ ಸಹ 500 ದಿರ್ಹಂ ದಂಡ ಮತ್ತು ಆರು ಕಪ್ಪು ಚುಕ್ಕೆಗಳನ್ನು ನೀಡಿ, 15 ದಿನಗಳ ಕಾಲ ವಾಹನವನ್ನು ವಶಪಡಿಸಿಕೊಳ್ಳಲಾಗುವುದು. ಅನಧಿಕೃತ ಡ್ರೈವಿಂಗ್ ತರಗತಿಗಳನ್ನು ನಡೆಸುವವರು 300 ದಿರ್ಹಂ ದಂಡಕ್ಕೆ ಗುರಿಯಾಗುವರು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.