ದುಬೈ: ವಿನೋದ ಯಾತ್ರಿಗಳಲ್ಲಿ 18 ವರ್ಷಕ್ಕಿಂತ ಕಡಿಮೆ ಪ್ರಾಯವಿರುವ ಮಕ್ಕಳಿಗೆ ವೀಸಾ ಶುಲ್ಕವನ್ನು ಕಡಿತಗೊಳಿಸಲು ಯುಎಇ ಸಚಿವಾಲಯ ತೀರ್ಮಾನ ಕೈಗೊಂಡಿದೆ.ಪ್ರತೀ ವರ್ಷ ಜುಲೈ 15 ರಿಂದ ಸೆಪ್ಟೆಂಬರ್ 15 ರವರೆಗೆ ಮಕ್ಕಳ ಸಂದರ್ಶನ ವೀಸಾ ಶುಲ್ಕ ಮುಕ್ತವಾಗಲಿವೆ.ಬೇಸಿಗೆ ರಜೆಯನ್ನು ಕಳೆಯಲು ಯುಎಇಗೆ ತಲುಪುವ ಕುಟುಂಬಗಳ ಹೊರೆಯನ್ನು ತಗ್ಗಿಸಲು ಈ ತೀರ್ಮಾನ ಎನ್ನಲಾಗಿದೆ.
ವಿಶ್ವದ ಪ್ರವಾಸೋದ್ಯಮ ವಲಯದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ಒಂದು ಪ್ರಮುಖ ಅಸ್ತಿತ್ವವನ್ನು ಹೊಂದಿದೆ. ಪ್ರಪಂಚದ ವಿಭಿನ್ನ ಭಾಗಗಳಿಂದ ಹೆಚ್ಚಿನ ಪ್ರವಾಸಿಗರನ್ನು ಮತ್ತು ಕುಟುಂಬಗಳನ್ನು ಆಕರ್ಷಿಸಲು ವಿಷೇಶ ಮುತುವರ್ಜಿಯನ್ನು ಅದು ನೀಡುತ್ತಿದೆ.ಪ್ರಸಕ್ತ ವರ್ಷದ ಮೊದಲ ಅರ್ಧದಲ್ಲಿ 3.28 ದಶಲಕ್ಷ ಪ್ರಯಾಣಿಕರು ದೇಶದ ವಿಮಾನ ನಿಲ್ದಾಣಗಳ ಮೂಲಕ ಹಾದು ಹೋಗಿದ್ದಾರೆ.
ಪ್ರವಾಸೋದ್ಯಮದ ವೈವಿಧ್ಯತೆಗಳನ್ನು ಆನಂದಿಸಲು ಯುಎಇಗೆ ಪ್ರವಾಸಿಗರು ಬರುತ್ತಾರೆ, ಉನ್ನತ ಸೇವೆಯನ್ನು ನೀಡುವ ಹೋಟೆಲ್ ಗಳಲ್ಲಿ ಉಳಿಯಲು ಮತ್ತು ದೇಶದ ಪ್ರಮುಖ ಉತ್ಸವಗಳ ಮನರಂಜನೆಯನ್ನು ಆನಂದಿಸುವುದು ಪ್ರವಾಸಿಗರ ಗುರಿಯಾಗಿದೆ.
ದೇಶದಲ್ಲಿ ಬರುವ ಟ್ರಾನ್ಸಿಟ್ ಪ್ರಯಾಣಿಕರಿಗೆ ಮೊದಲ 48 ಗಂಟೆಗಳ ವೀಸಾ ಶುಲ್ಕವನ್ನು ಪಾವತಿಸಬೇಕಾಗಿಲ್ಲ ಎನ್ನುವ ಸರ್ಕಾರದ ನಿರ್ಧಾರಕ್ಕೆ ಉತ್ತಮ ಪ್ರತಿಕ್ರಿಯೆ ಲಭಿಸಿರುವ ಹಿನ್ನೆಲೆಯಲ್ಲಿ 18 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ವಿಸಾ ದರವನ್ನು ತಾತ್ಕಾಲಿಕವಾಗಿ ತಡೆಹಿಡಿಯಲು ಕ್ಯಾಬಿನೆಟ್ ನಿರ್ಧರಿಸಿದೆ ಎನ್ನಲಾಗಿದೆ.