janadhvani

Kannada Online News Paper

‘ಸೌಹಾರ್ದ ನಡಿಗೆ’ ಕಾರ್ಯಕ್ರಮದಲ್ಲಿ ಯು.ಟಿ ಖಾದರ್ ಆಕ್ಷೇಪಾರ್ಹ ಹೇಳಿಕೆ- ಸವಾಲು ಸ್ವೀಕರಿಸಿದ ಎಸ್ಸೆಸ್ಸೆಫ್

ಸಮುದಾಯಕ್ಕೆ ಅಭದ್ರತೆ ಕಾಡಿದಾಗ ನಿಮ್ಮ ಮತದಾರರು ಅಥವಾ ನಿಮ್ಮಿಂದ ನ್ಯಾಯವನ್ನು ಬಯಸುವವರು ನಿಮ್ಮನ್ನು ಪ್ರಶ್ನಿಸಿದರೆ ಅದರಲ್ಲೇನು ತಪ್ಪಿದೆ?

ಬೆಂಗಳೂರು: ದೇಶದ ಉದಾತ್ತವಾದ ಅಸ್ಮಿತೆಯನ್ನು ಉಳಿಸಿಕೊಳ್ಳಲು ರಾಷ್ಟ್ರ ಮಟ್ಟದಲ್ಲಿ ವಿದ್ಯಾರ್ಥಿಗಳ ಧ್ವನಿಯಾಗಿ, ಸೌಹಾರ್ದ ಭಾರತದ ಸಾಕ್ಷಾತ್ಕಾರಕ್ಕಾಗಿ ನೈತಿಕ ಜಾಗೃತಿ ಮೂಡಿಸುತ್ತಿರುವ ಎಸ್ಸೆಸ್ಸೆಫ್ ನ ಕರ್ನಾಟಕ ರಾಜ್ಯ ಸಮಿತಿಯು ರಾಜ್ಯಾದ್ಯಂತ ಹಮ್ಮಿಕೊಂಡಿದ್ದ ‘ಸೌಹಾರ್ದ ನಡಿಗೆ’ ಕಾರ್ಯಕ್ರಮದ ಸಮಾರೋಪ ಸಮಾರಂಭವು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಯಿತು.

ಸರ್ವ ಧರ್ಮೀಯರು ಪಾಲ್ಗೊಂಡಿದ್ದ ಸಮಾರಂಭದಲ್ಲಿ ಅತಿಥಿಯಾಗಿ ಆಗಮಿಸಿದ, ರಾಜ್ಯ ವಿಧಾನಸಭಾ ಸ್ಪೀಕರ್ ಸನ್ಮಾನ್ಯ ಯು.ಟಿ.ಖಾದರ್ ಅವರು ವೇದಿಕೆಗೆ ಸೂಕ್ತವಲ್ಲದ ಮತ್ತು ಅನಗತ್ಯ ವಿಷಯಗಳನ್ನು ಎಳೆದು ತಂದು ಸಂಘಟನೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ತಪ್ಪುತಿಳುವಳಿಕೆ ಮೂಡಿಸಸುವಂತೆ ಮಾತನಾಡಿದ್ದಾರೆ.

ಎಸ್ಸೆಸ್ಸೆಫ್ ನ ಕೆಲವು ಕಾರ್ಯಕರ್ತರಿಂದಾಗಿ ಸಂಘಟನೆಗೆ ಕಪ್ಪು ಚುಕ್ಕೆ ಬರುವಂತಾಗಿದೆ ಎಂಬಿತ್ಯಾದಿಯಾಗಿ ಹೇಳಿಕೆ ನೀಡಿದ್ದಾರೆ. ಮುಂದುವರಿದು ಮಾತನಾಡಿದ ಅವರು, ಸಂಘಟನೆಯ ಘನತೆಗೆ ವಿರುದ್ಧವಾಗಿ ಕಾರ್ಯಕರ್ತರು ತನ್ನನ್ನು ಪ್ರಶ್ನಿಸಿರುವುದಾಗಿಯೂ, ಅದರ ಬಗ್ಗೆ ಸಮಾಲೋಚನೆಗೆ ಸಿದ್ಧನಿದ್ದೇನೆ ಎಂದಿದ್ದರು. ಇದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಎಸ್ಸೆಸ್ಸೆಫ್ ಸನ್ಮಾನ್ಯ ಯು.ಟಿ.ಖಾದರ್ ಅವರೊಂದಿಗೆ ಸಂವಾದಕ್ಕೆ ಮುಂದಾಗಿದೆ.

ಸಮುದಾಯಕ್ಕೆ ಉಂಟಾದ ಅನ್ಯಾಯದ ವಿರುದ್ಧ ಧ್ವನಿ ಎತ್ತುವುದು ಕಾನೂನು ವಿರುದ್ಧವೇ?. ಜಾತ್ಯಾತೀತ ಪಕ್ಷವೆನಿಸಿರುವ ಕಾಂಗ್ರೆಸ್ ನ ಅಭ್ಯರ್ಥಿಯಾಗಿ ಚುನಾಯಿತರಾದ ತಾವು, ತಮಗೆ ಓಟು ನೀಡಿರುವವರ ಬಗ್ಗೆ ಒಂದಿಷ್ಟೂ ಕಾಳಜಿ ಇಲ್ಲದಂತೆ ವರ್ತಿಸಿದರೆ ಪ್ರಶ್ನಿಸಬಾರದೇ?. ಅಮಾಯಕ ಮುಸ್ಲಿಮರ ಹತ್ಯೆ, ಹಲ್ಲೆ, ದಾಳಿ ಮುಂತಾದವುಗಳಿಂದ ಬೇಸತ್ತು ಹೋದ ಸಮುದಾಯವು, ಜಾತ್ಯತೀತರೆಂದು ಕರೆಸಿಕೊಳ್ಳುವ ಜವಾಬ್ದಾರಿಯುತ ಜನಪ್ರತಿನಿಧಿಗಳು ಮೃದು ಧೋರಣೆ ತಾಳಿದಾಗ ಸಹಜವಾಗಿಯೇ ನಮ್ಮ‌ ಕಾರ್ಯಕರ್ತರು ಅಥವಾ ಬೆಂಬಲಿಗರು ಪ್ರಶ್ನಿಸಿರಬಹುದು, ಅಲ್ಲದೇ ಅವರು ಮೌನಿಗಳಾಗಿ ಮುಂದುವರಿಯಬೇಕೇ? ಎಂಬಿತ್ಯಾದಿ ಸಂದೇಹಗಳು ಸನ್ಮಾನ್ಯ ಯು. ಟಿ. ಖಾದರ್ ಅವರ ಹೇಳಿಕೆಯಿಂದಾಗಿ ಕಾರ್ಯಕರ್ತರಲ್ಲಿ ಮೂಡಿಸಿದೆ.

ಈ ಬಗ್ಗೆ ಎಸ್ಸೆಸ್ಸೆಫ್ ರಾಜ್ಯ ಸಮಿತಿಯು ಸನ್ಮಾನ್ಯ ಯು.ಟಿ.ಖಾದರ್ ಅವರೊಂದಿಗೆ ವಸ್ತುನಿಷ್ಠ ಚರ್ಚೆಗೆ ತಯಾರಿರುವುದಾಗಿ ಬಹಿರಂಗ ಪತ್ರ ಬರೆದಿದ್ದು, ದಿನಾಂಕ ನಿಗದಿಪಡಿಸುವಂತೆ ಕೋರಿದೆ

ಪತ್ರದ ಪೂರ್ಣ ರೂಪ.

ಸನ್ಮಾನ್ಯ ಸ್ಪೀಕರ್ ಯು.ಟಿ. ಖಾದರ್ ಅವರೊಂದಿಗೆ..

ದೇಶದ ಉದಾತ್ತವಾದ ಅಸ್ಮಿತೆಯನ್ನು ಉಳಿಸಿಕೊಳ್ಳಲು ರಾಷ್ಟ್ರ ಮಟ್ಟದಲ್ಲಿ ವಿದ್ಯಾರ್ಥಿಗಳ ಧ್ವನಿಯಾಗಿ, ಸೌಹಾರ್ದ ಭಾರತದ ಸಾಕ್ಷಾತ್ಕಾರಕ್ಕಾಗಿ ನೈತಿಕ ಜಾಗೃತಿ ಮೂಡಿಸುತ್ತಿರುವ ಎಸ್ಸೆಸ್ಸೆಫ್ ನ ಕರ್ನಾಟಕ ರಾಜ್ಯ ಸಮಿತಿಯು ರಾಜ್ಯಾದ್ಯಂತ ಹಮ್ಮಿಕೊಂಡಿದ್ದ ‘ಸೌಹಾರ್ದ ನಡಿಗೆ’ ಸಮಾರೋಪದಲ್ಲಿ‌ ತಾವು ಮಾಡಿದ ಭಾಷಣದಲ್ಲಿ ಪ್ರಸ್ತಾಪಿಸಿರುವ ಕೆಲವು ವಿಷಯಗಳು ಆಕ್ಷೇಪಾರ್ಹವಾಗಿದೆ.

ನಮ್ಮ ಸಂಘಟನೆಯ ಕಾರ್ಯಕರ್ತರಲ್ಲಿ ಮಾನ ಕಳೆಯುವ ಕೆಲಸ ಮಾಡುತ್ತಿದ್ದಾರೆಂಬ ತಪ್ಪು ಸಂದೇಶವನ್ನು ನೀವು ಕೊಟ್ಟಿದ್ದೀರಿ. ಅದರಿಂದ ಸಂಘಟನೆಯ ಕಾರ್ಯಕರ್ತರು ಆಕ್ರೋಶಿತರಾಗಿದ್ದಾರೆಂದು ಈ ಮೂಲಕ ನಿಮಗೆ ತಿಳಿಸಲು ಬಯಸುತ್ತೇವೆ. ಈ ಸಮುದಾಯದ ಮಾನಕಳೆಯುವ ಯಾವ ಕೃತ್ಯವನ್ನೂ ಮಾಡಿಲ್ಲ ಎಂಬ ಖಚಿತತೆ ನಮಗಿರುವುದರಿಂದ ತಾವು ತಮ್ಮ‌ ಮಾತನ್ನು ಹಿಂಪಡೆಯಬೇಕಾಗಿ ಕೋರುತ್ತಿದ್ದೇವೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳನ್ನು ಪ್ರಶ್ನಿಸುವುದು ಪ್ರಜೆಗಳ ಕರ್ತವ್ಯವಾಗಿದೆ. ಈ ದೇಶದ ಪ್ರಜ್ಞಾವಂತ ಪ್ರಜೆಗಳಾದ ನಮ್ಮ ಸಂಘಟನೆಯ ಕಾರ್ಯಕರ್ತರು ಅಥವಾ ಬೆಂಬಲಿಗರು ಯಾವುದಾದರೂ ರಾಜಕಾರಣಿಯನ್ನಾಗಲಿ ಸೋಷಿಯಲ್ ಮೀಡಿಯಾಗಳಲ್ಲಿ ಪ್ರಶ್ನೆ ಮಾಡಿದ್ದರೆ ಅದು ಅವರ ಸಾಮಾಜಿಕ ಬದ್ಧತೆಯಾಗಿರುತ್ತದೆ.‌
ಜಾತ್ಯತೀತರೆಂದು ಕರೆಸಿಕೊಳ್ಳುವ ಜವಾಬ್ದಾರಿಯುತ ಜನಪ್ರತಿನಿಧಿಗಳು ಕೋಮು ಸಂಘರ್ಷ ಸಂದರ್ಭದಲ್ಲಿ ಮೃದು ಧೋರಣೆ ತಾಳಿದಾಗ ಸಹಜವಾಗಿಯೇ ನಮ್ಮ‌ ಕಾರ್ಯಕರ್ತರು ಅಥವಾ ಬೆಂಬಲಿಗರು ಪ್ರಶ್ನಿಸಿರಬಹುದು. ಹಾಗೆ ಪ್ರಶ್ನಿಸುವುದರಿಂದ ನಮ್ಮ ಸಂಘಟನೆಯ ಘನತೆಗೆ ಧಕ್ಕೆಯಾಗುತ್ತದೆ ಎಂಬರ್ಥದ ನಿಮ್ಮ ಮಾತುಗಳು ಅತ್ಯಂತ ಬಾಲಿಶವಾದುದು ಎಂದು ನೇರವಾಗಿ ಈ ಮೂಲಕ ನಿಮ್ಮ ಗಮನಕ್ಕೆ ತರುತ್ತಿದ್ದೇವೆ.

ನೀವು ಅತ್ಯುನ್ನತ ಹುದ್ದೆಯಲ್ಲಿರುವ ಸಂದರ್ಭದಲ್ಲೇ ನಿಮ್ಮದೇ ತವರು ಜಿಲ್ಲೆಯಲ್ಲಿ
ದ್ವೇಷಭಾಷಣ ಮಾಡಿದವರು, ಪ್ರತೀಕಾರಕ್ಕೆ ಬಹಿರಂಗ ಕರೆಕೊಟ್ಟವರು, ಕೊಲೆಗಾರರು ರಾಜಾರೋಷವಾಗಿ ಮೆರೆಯುತ್ತಿರುವುದರಿಂದ ನಿಮ್ಮ ಘನತೆಗೆ ಧಕ್ಕೆಯಾಗಿದೆ ಎಂಬುದನ್ನೂ ತಮ್ಮ ಗಮನಕ್ಕೆ ತರುತ್ತಿದ್ದೇವೆ.‌
ಸಮುದಾಯಕ್ಕೆ ಅಭದ್ರತೆ ಕಾಡಿದಾಗ ನಿಮ್ಮ ಮತದಾರರು ಅಥವಾ ನಿಮ್ಮಿಂದ ನ್ಯಾಯವನ್ನು ಬಯಸುವವರು ನಿಮ್ಮನ್ನು ಪ್ರಶ್ನಿಸಿದರೆ ಅದರಲ್ಲೇನು ತಪ್ಪಿದೆ? ಅದನ್ನು ತಾವು ಸಕಾರಾತ್ಮಕವಾಗಿ ಸ್ವೀಕರಿಸಿ ಮುತ್ಸದಿತನ ತೋರಬೇಕಾದವರು ತಾವು ಎಂಬುದನ್ನು ನೆನಪಿಸ ಬಯಸುತ್ತಿದ್ದೇವೆ.

ವೇದಿಕೆಗೆ ಸೂಕ್ತವಲ್ಲದ ಮತ್ತು ಅನಗತ್ಯ ವಿಷಯಗಳನ್ನು ಎಳೆದು ತಂದು ಸಂಘಟನೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ತಪ್ಪುತಿಳುವಳಿಕೆ ಮೂಡಿಸಿದ ನಿಮ್ಮ ಮಾತುಗಳಿಗೆ ಸಂಘಟನೆಯ ತೀರ್ವ ಆಕ್ಷೇಪವಿದೆ.
ನಮ್ಮ ಸಂಘಟನೆಯವರು ಯಾವುದೇ ದ್ವೇಷಭಾಷಣ ಮಾಡಿದವರಲ್ಲ, ಪ್ರತೀಕಾರದ ಬೆದರಿಕೆ ಹಾಕಿದವರಲ್ಲ, ನಿಷೇಧಾಜ್ಞೆ ಆದೇಶ ಉಲ್ಲಂಘಿಸಿ ಯಾವುದೇ ಸಭೆ ಸಮಾರಂಭ ಮಾಡಿದವರಲ್ಲ. ತಮ್ಮನ್ನು ಯಾರು ಯಾವ ವಿಷಯದಲ್ಲಿ ಪ್ರಶ್ನಿಸಿದ್ದಾರೆ? ಆ ಬಗ್ಗೆ ವಸ್ತುನಿಷ್ಠ ಚರ್ಚೆಗೆ ಬರುವುದಾಗಿಯೂ ಹೇಳಿದ್ದೀರಿ‌. ಚರ್ಚೆಗೆ ದಿನಾಂಕ ಸ್ಥಳ ನಿಗದಿಪಡಿಸಬೇಕಾಗಿ ಕೋರಿಕೆ‌. ನಿಮ್ಮ ಬಗ್ಗೆ ಮುಸ್ಲಿಂ ಸಮುದಾಯಕ್ಕಿರುವ ಅಸಮಾಧಾನಗಳೇನು ಎಂಬ ಪಟ್ಟಿಯನ್ನು ನಿಮ್ಮ ಮುಂದಿಡಲು ಸಿದ್ದರಿದ್ದೇವೆ.
ತಮ್ಮ ಪ್ರತಿಕ್ರಿಯೆಯ ನಿರೀಕ್ಷೆಯೊಂದಿಗೆ..