ಕೊಡಗು: ಮುಸ್ಲಿಂ ಸಮುದಾಯದ ಉನ್ನತಿಗೆ ಎಲ್ಲರೂ ಒಗ್ಗಟ್ಟಾಗಿ ಪ್ರಯತ್ನಿಸಬೇಕಿದೆ. ಈ ನಿಟ್ಟಿನಲ್ಲಿ ಸಮುದಾಯದ ಎಲ್ಲಾ ಸೇವನೆಗಳಿಗೆ ಕರ್ನಾಟಕ ಮುಸ್ಲಿಂ ಯೂನಿಟಿ ಸಂಸ್ಥೆ ಮುಂಚೂಣಿಯಲ್ಲಿದೆ ಎಂದು ಸಂಸ್ಥೆಯ ಗೌರವಾಧ್ಯಕ್ಷ ಜಿ ಏ ಬಾವಾರವರು ಹೇಳಿದರು.
ಅವರು ಕರ್ನಾಟಕ ಮುಸ್ಲಿಂ ಯೂನಿಟಿ (ರಿ) ಇದರ ಕೊಡಗು ಜಿಲ್ಲಾ ಘಟಕ ಉದ್ಘಾಟಿಸಿ ಮಾತನಾಡಿದರು.ಸಂಸ್ಥೆಯ ಮೂಲಕ ಹಲವು ಸೇವೆಗಳನ್ನು ನಾವು ಮಾಡಬೇಕು.
ರಾಜಕೀಯ ರಹಿತವಾಗಿ ಕಾನೂನಿನ ಚೌಕಟ್ಟಿನೊಳಗೆ ನಿಂತು ಸೇವೆ ಮುಂದುವರಿಸಿದರೆ ಅದು ಶಾಶ್ವತವಾಗಿ ಉಳಿದುಕೊಳ್ಳುತ್ತದೆ.
ಸರಕಾರದಿಂದ ಸಿಗುವ ಸವಲತ್ತುಗಳು, ಶಿಕ್ಷಣ ಮಾಹಿತಿ, ಬಡ ಮಕ್ಕಳ ಶಿಕ್ಷಣಕ್ಕೆ ಸಹಾಯ, ಸರಕಾರಿ ಉದ್ಯೋಗದ ಬಗ್ಗೆ ಅರಿವು ಮೂಡಿಸುವಿಕೆ, ಡ್ರಗ್ಸ್ ಮುಕ್ತ ಸಮಾಜದ ಬಗ್ಗೆ ಜಾಗೃತಿ ಮೂಡಿಸುವುದು ಹೀಗೆ ಹಲವಾರು ಯೋಜನೆಗಳೊಂದಿಗೆ ನಾವು ಮುನ್ನಡೆಯಬೇಕಿದೆ ಎಂದು ಸಲಹೆ ನೀಡಿದರು.
ಧಾರ್ಮಿಕ ಬೋಧನೆಯೊಂದಿಗೆ ಉತ್ತಮ ಸೇವೆಗೆ ಮುನ್ನಡೆದಾಗ ಅಲ್ಲಾಹನ ಸಹಾಯ ಸಿಗುತ್ತದೆ ಜೊತೆಗೆ ಜನರು ನಮ್ಮನ್ನು ಸ್ವೀಕರಿಸುತ್ತಾರೆ.
ನಾವು ಪ್ರಚೋದನೆಗೆ ಒಳಗಾಗಬಾರದು, ಪ್ರಚೋದಿಸುವವರು ಯಾವತ್ತೂ ಸಮಾಜದ ಒಳಿತನ್ನು ಬಯಸುವುದಿಲ್ಲ ಆದುದರಿಂದ ತಾಳ್ಮೆಯಿಂದ ಆಲೋಚಿಸಿ ಕಾರ್ಯಕ್ಕಿಳಿಯಬೇಕೆಂದು ಹೇಳಿದರು.
ನಾವೆಲ್ಲರೂ ಒಗ್ಗಟ್ಟಾಗಿ ಸಮುದಾಯ ಉನ್ನತಿಗೆ ಶ್ರಮಿಸೋಣ, ಪರಂಪರೆಯ ಸೌಹಾರ್ದತೆಯನ್ನು ಬೆಳೆಸೋಣ ಎಂದು ನಿವೃತ್ತ ಡಿಸಿಪಿ ಜಿ ಏ ಬಾವಾ ರವರು ಹೇಳಿದರು.