ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕೊಳತ್ತಮಜಲು ಎಂಬಲ್ಲಿ ಇತ್ತೀಚೆಗೆ ಕೋಮು ದ್ವೇಷಕ್ಕೆ ಬಲಿಯಾದ ಅಮಾಯಕ ರಹೀಂ ಕುಟುಂಬಕ್ಕೆ ವೈಯಕ್ತಿಕವಾಗಿ 50 ಲಕ್ಷ ರೂ ಸಹಾಯಧನ ನೀಡುವುದಾಗಿ ಭರವಸೆ ನೀಡಿರುವ ರಾಜ್ಯ ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರಾದ ಝಮೀರ್ ಅಹ್ಮದ್ ಖಾನ್ ಅವರು ತಮ್ಮ ಮಾತನ್ನು ಪೂರೈಸಿದ್ದಾರೆ.
ಕೋಮು ದ್ವೇಷಕ್ಕೆ ಬಲಿಯಾದ ರಹೀಂ ಅವರ ಮನೆಗೆ ಭೇಟಿ ನೀಡಿದ್ದ ಕರ್ನಾಟಕ ವಕ್ಫ್ ಕೌನ್ಸಿಲ್ ಇದರ ಉಪಾಧ್ಯಕ್ಷರಾದ ಮೌಲಾನಾ ಶಾಫಿ ಸಅದಿ ಆವರು, ಕುಟುಂಬಕ್ಕೆ ಸಾಂತ್ವನ ನೀಡುವುದರೊಂದಿಗೆ. ವಕ್ಫ್ ಕೌನ್ಸಿಲ್ ಅಧ್ಯಕ್ಷರಾದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ವಕ್ಫ್ ಸಚಿವರಾದ ಝಮೀರ್ ಅಹ್ಮದ್ ಖಾನ್ ಅವರು ವೈಯಕ್ತಿಕವಾಗಿ 50 ಲಕ್ಷ ರೂ ಸಹಾಯಧನ ನೀಡಲಿದ್ದಾರೆಂದು ಸಚಿವರು ನೀಡಿರುವ ಭರವಸೆ ಬಗ್ಗೆ ಶಾಫಿ ಸಅದಿಯವರು ರಹೀಮ್ ಕುಟುಂಬಕ್ಕೆ ಮಾಹಿತಿ ನೀಡಿದ್ದರು.
ಇಂದು ಬೆಂಗಳೂರಿನಲ್ಲಿ ವಿಧಾನ ಸಭಾ ಸ್ಪೀಕರ್ ಯು.ಟಿ. ಖಾದರ್ ಅವರ ವಸತಿಯಲ್ಲಿ ಖಾಝಿಗಳಾದ ತ್ವಾಖಾ ಅಹ್ಮದ್ ಮುಸ್ಲಿಯಾರ್ ಮತ್ತು ಮಾಣಿ ಉಸ್ತಾದರನ್ನೊಳಗೊಂಡ ನಿಯೋಗಕ್ಕೆ ಸಚಿವ ಝಮೀರ್ ಖಾನ್ ಅವರು 50 ಲಕ್ಷ ರೂ. ಸಹಾಯಧನವನ್ನು ಹಸ್ತಾಂತರಿಸಿದರು. ಈ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಂಡು ಝಮೀರ್ ಅಹಮದ್ ಖಾನ್ ಅವರು ಸೈ ಎನಿಸಿಕೊಂಡಿದ್ದಾರೆ.ದುಷ್ಕರ್ಮಿಗಳ ದಾಳಿಯಿಂದ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಶಾಫಿ ಅವರಿಗೂ 5 ಲಕ್ಷ ರೂ. ಸಹಾಯಧನ ನೀಡಿದ್ದಾರೆ.
ನಿಯೋಗದಲ್ಲಿ ವಕ್ಫ್ ಕೌನ್ಸಿಲ್ ಇದರ ಉಪಾಧ್ಯಕ್ಷರಾದ ಮೌಲಾನಾ ಶಾಫಿ ಸಅದಿ, ನಿವೃತ್ತ ಡಿಸಿಪಿ ಜಿ.ಎ.ಬಾವ, ದ.ಕ.ಜಿಲ್ಲಾ ವಖ್ಫ್ ಸಲಹಾ ಸಮಿತಿ ಅಧ್ಯಕ್ಷರಾದ ನಾಸಿರ್ ಲಕ್ಕಿ ಸ್ಟಾರ್ ಸಹಿತವಿರುವ ಧಾರ್ಮಿಕ ಹಾಗೂ ರಾಜಕೀಯ ಮುಖಂಡರಿದ್ದರು.