ಉಡುಪಿ: ಇಲ್ಲಿನ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಜಾಲು ಮುಖ್ಯ ರಸ್ತೆಯಲ್ಲಿ ದನದ ತಲೆ ಬುರುಡೆ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದು, ಆತನಿಗೆ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುಂಜಾಲು ರಾಮಮಂದಿರದ ಬಳಿಯ ಆಟೊ ನಿಲ್ದಾಣ ಸಮೀಪದ ರಸ್ತೆಯಲ್ಲಿ ದನದ ಕತ್ತರಿಸಿದ ತಲೆ ಮತ್ತು ಕಾಲುಗಳು ಪತ್ತೆಯಾಗಿದ್ದು, ಕೂಡಲೇ ಸ್ಥಳೀಯರು ಬ್ರಹ್ಮಾವರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಆಸುಪಾಸಿನಲ್ಲಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಸಫಲಾಗಿರುತ್ತಾರೆ.
ಈ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ ಶಂಕರ್ ಅವರು ಮಾಹಿತಿ ನೀಡಿದರು.
ಕುಂಜಾರು ಗ್ರಾಮ ನಿವಾಸಿಗಳಾದ ರಾಮ(49), ಪ್ರಸಾದ್(21), ನವೀನ್(35), ಕೇಶವ ನಾಯ್ಕ(50), ಸಂದೇಶ(35), ರಾಜೇಶ್ (28) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಇವರು ದನವನ್ನು ಖರೀದಿಸಿ ಮಾಂಸ ಮಾಡಿ ಅದರ ಕಳೇಬರವನ್ನು ವಿಲೇವಾರಿ ಮಾಡಲು ಸ್ಕೂಟರಿನಲ್ಲಿ ಸಾಗಿಸುತ್ತಿದ್ದು, ಈ ವೇಳೆ ದನದ ತಲೆ ಬುರುಡೆ ಹಾಗೂ ಇತರ ಭಾಗಗಳು ರಸ್ತೆಗೆ ಬಿದ್ದಿರುವುದಾಗಿ ಮಾಹಿತಿ ನೀಡಿದ್ದಾರೆ.
ಹಿಂದೂಪರ ಹಾಗೂ ಬಿಜೆಪಿ ಕಾರ್ಯಕರ್ತರಿಂದ ಸಭೆ
ಸ್ಥಳಕ್ಕೆ ಭಾನುವಾರ ಭೇಟಿ ನೀಡಿದ ಶಾಸಕ ಯಶ್‌ಪಾಲ್ ಸುವರ್ಣ ಅವರು ಹಿಂದೂಪರ ಹಾಗೂ ಬಿಜೆಪಿ ಕಾರ್ಯಕರ್ತರ ಸಭೆ ನಡೆಸಿ, ಘಟನೆಯನ್ನು ಖಂಡಿಸಿದರು. ಈ ಅಮಾನುಷ ಕೃತ್ಯ ನಡೆಸಿದ ವ್ಯಕ್ತಿಗಳನ್ನು 24 ಗಂಟೆಯೊಳಗೆ ಬಂಧಿಸುವಂತೆ ಸಭೆಯಲ್ಲಿ ಆಗ್ರಹಿಸಲಾಯಿತು.
ಸಭೆಯಲ್ಲಿ ಮಾತನಾಡಿದ ಶಾಸಕ ಯಶ್‌ಪಾಲ್ ಸುವರ್ಣ, ‘ಈ ಘಟನೆಯಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದ್ದು, ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಗೋ ಕಳ್ಳತನ, ಗೋವಧೆ ಮಾಡುವವರನ್ನು ಬಂಧಿಸಿ ಗಡೀಪಾರು ಮಾಡಬೇಕು. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು’ ಎಂದಿದ್ದರು.
ಈ ಹಿಂದೆಯೂ ಬ್ರಹ್ಮಾವರ ಪರಿಸರದಲ್ಲಿ ಇದೇ ರೀತಿ ಘಟನೆಗಳು ಈ ಹಿಂದೆ ನಡೆದರೂ ಪೊಲೀಸ್ ಇಲಾಖೆ ಯಾವುದೇ ವ್ಯಕ್ತಿಗಳನ್ನು ಬಂಧಿಸಿಲ್ಲ. ಜಿಲ್ಲೆಯಲ್ಲಿ ಅವ್ಯಾಹತವಾಗಿರುವ ಗೋ ಕಳ್ಳತ ಜಾಲವನ್ನು ತಕ್ಷಣ ಪತ್ತೆಹಚ್ಚಿ ಮಟ್ಟಹಾಕುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದ್ದರು.
ಈಗ ಆರೋಪಿಗಳ ಹೆಸರನ್ನು ಉಡುಪಿ ಜಿಲ್ಲಾ ಪೊಲೀಸರು ಬಹಿರಂಗಗೊಳಿಸುತ್ತಿದ್ದಂತೆಯೇ ಬಿಜೆಪಿ, ಸಂಘಪರಿವಾರಕ್ಕೆ ಹಿನ್ನಡೆಯಾಗಿದೆ.
ಮಸೀದಿ ಸಮಿತಿ ಖಂಡನೆ: ಗೋವಿನ ಕಳೇಬರವನ್ನು ರಸ್ತೆಗೆ ಎಸೆದಿರುವ ಘಟನೆ ಖಂಡನೀಯ. ಈ ಭಾಗದಲ್ಲಿ ಇರುವ ಅನ್ಯೋನ್ಯತೆ ಮತ್ತು ಶಾಂತಿಯನ್ನು ಕದಡಲು ಈ ರೀತಿ ಮಾಡಿರುವ ಅನುಮಾನ ಮೂಡುತ್ತಿದ್ದು, ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಬೇಕು ಎಂದು ಆಗ್ರಹಿಸಿ ಕುಂಜಾಲಿನ ನೂರ್ ಜುಮ್ಮಾ ಮಸೀದಿ ಸಮಿತಿ ವತಿಯಿಂದ ಬ್ರಹ್ಮಾವರ ಠಾಣಾಧಿಕಾರಿಗೆ ಮನವಿ ಸಲ್ಲಿಸಲಾಗಿತ್ತು.