janadhvani

Kannada Online News Paper

ಸಾಹಿತ್ಯಕ್ಕೆ ವಿವಿಧ ಸಮಾಜಗಳನ್ನು ಒಗ್ಗೂಡಿಸುವ ಅದ್ಭುತ ಸಾಮರ್ಥ್ಯವಿದೆ- ಕೆ.ಎಂ.ಇಖ್ಬಾಲ್ ಬಾಳಿಲ

ಕರ್ನಾಟಕ ಭಾವೈಕ್ಯ ಪರಿಷತ್ ವತಿಯಿಂದ ನಡೆದ ಆನ್‌ಲೈನ್‌ ಕವಿಗೋಷ್ಠಿ ಹಾಗೂ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಮಂಗಳೂರು: ನಾಡಿನಲ್ಲಿ ವಿವಿಧ ಸಮಾಜದ ನಡುವೆ ಭಾವೈಕ್ಯತೆಯ ಕೊಂಡಿಯಾಗಿ ಕಾರ್ಯಾಚರಣೆ ನಡೆಸಲು ಬಯಸುವ ಕರ್ನಾಟಕ ಭಾವೈಕ್ಯ ಪರಿಷತ್ ಸಾಹಿತ್ಯದ ಮೂಲಕ ಸ್ವಸ್ಥ ಸಮಾಜ ನಿರ್ಮಾಣದ ಕನಸು ಹೊಂದಿದೆ ಎಂದು ಕರ್ನಾಟಕ ಭಾವೈಕ್ಯ ಪರಿಷತ್ ಅಧ್ಯಕ್ಷ ಕೆ.ಎಂ.ಇಖ್ಬಾಲ್ ಬಾಳಿಲ‌ ಹೇಳಿದ್ದಾರೆ.

ಕರ್ನಾಟಕ ಭಾವೈಕ್ಯ ಪರಿಷತ್ ವತಿಯಿಂದ ನಡೆದ ಆನ್‌ಲೈನ್‌ ಕವಿಗೋಷ್ಠಿ ಹಾಗೂ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಸಾಹಿತ್ಯ ಎಂಬುದು ಅದ್ಭುತ ಶಕ್ತಿಯಾಗಿದ್ದು ವಿವಿಧ ಸಮಾಜವನ್ನು ಒಗ್ಗೂಡಿಸುವ ಸಾಮರ್ಥ್ಯ ಸಾಹಿತ್ಯಕ್ಕಿದೆ.ಸಮಾನ ಸಮಾಜದ ಅಮೂಲ್ಯ ಸೊತ್ತುಗಳಾಗಿರುವ ಕವಿಗಳು, ಲೇಖಕರು ಸಾಮರಸ್ಯದ ಸಮಾಜ ನಿರ್ಮಾಣದಲ್ಲಿ ಮಹತ್ತರ ಪಾತ್ರ ವಹಿಸುತ್ತಿದ್ದಾರೆಂದು ಅವರು ಹೇಳಿದರು.

ಪ್ರಾಸ್ತಾವಿಕ ಭಾಷಣ ಮಾಡಿದ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಎ.ಅಬೂಬಕರ್ ಅನಿಲಕಟ್ಟೆ‌ ವಿಟ್ಲ‌ ಅವರು ” ಸಮಾಜದಲ್ಲಿ ಬದಲಾವಣೆಯ ಧ್ಯೇಯದೊಂದಿಗೆ ಕಾರ್ಯಾಚರಣೆ ಮಾಡುವ ಕರ್ನಾಟಕ ಭಾವೈಕ್ಯ ಪರಿಷತ್ ವಿವಿಧ ಕಾರ್ಯಕ್ರಮಗಳ ಮೂಲಕ ಭಾವೈಕ್ಯ ಸಂದೇಶ ಸಾರುವಲ್ಲಿ ಯಶಸ್ವಿಯಾಗಿದೆ ” ಎಂದರು.

ಕವಿಗೋಷ್ಠಿ ಹಾಗೂ ಭಾವೈಕ್ಯ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಭಾವೈಕ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ,ಸಾಹಿತಿ ಹೆಚ್.ಭೀಮರಾವ್ ವಾಷ್ಠರ್ ಸುಳ್ಯ ಅವರು ಮಾತನಾಡಿ ” ಭಾರತದ ಪವಿತ್ರ ಭೂಮಿ ಧರ್ಮ, ಸತ್ಯ,ನ್ಯಾಯ,ನೀತಿಗಳ ನೆಲವೀಡಾಗಿದೆ.
ಗುರುಹಿರಿಯರ ನಡೆ ನುಡಿಗಳು ಸಮಾಜಕ್ಕೆ ಮಾದರಿಯಾಗಿದ್ದು ಅವರ ಜೀವನ ವಿಧಾನವನ್ನು ಅನುಸರಿಸಿ ಪ್ರತಿಯೊಬ್ಬರೂ ಅತ್ಯುತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು.
ತಾಳ್ಮೆ,ತ್ಯಾಗ ಮನೋಭಾವ, ಧನಾತ್ಮಕ ಚಿಂತನೆಗಳು ಮಾನವರಲ್ಲಿ ಸಹಬಾಳ್ವೆಯ ಗುಣವನ್ನು ಬೆಳೆಸುತ್ತದೆ.
ಹುಟ್ಟು ಸಹಜ, ಮರಣ ಖಚಿತ. ಮನುಷ್ಯ ಜನ್ಮವನ್ನು ಪರೋಪಕಾರಕ್ಕೆ ವ್ಯಯಿಸಿದರೆ ಜೀವನ ಸಾರ್ಥಕ. ಜಗತ್ತಿನ ಮಾನವರೆಲ್ಲರೂ ಸಹೋದರ, ಸಹೋದರಿಯರು ಭಾರತ ಸರ್ವ ಜನ ಬಾಂಧವರ ಸುಂದರ ಭೂಮಿ. ವೇಷ, ಭಾಷೆ, ಸಂಸ್ಕೃತಿಗಳು ಭಾರತದ ಸೌಂದರ್ಯವನ್ನು ಹೆಚ್ಚಿಸಿದೆ.
ಜಾತಿ ಆಧಾರದಲ್ಲಿ ಜನರನ್ನು ವಿಭಜಿಸುವ ಸಮಾಜ ಕಂಟಕರನ್ನು ಯಾವ ಕಾರಣಕ್ಕೂ ಅನುಸರಿಸಬಾರದು.
ಅದು ಭವ್ಯ ಭಾರತ ದೇಶದ ಭವಿಷ್ಯಕ್ಕೆ ಮಾರಕ.
ಭಾವೈಕ್ಯತೆ ಬಗ್ಗೆ ಬಸವಣ್ಣನವರ ವಚನಗಳು ಒಂಬೈನೂರು ವರ್ಷಗಳ ಹಿಂದೆ ಕ್ರಾಂತಿ ಸೃಷ್ಟಿಸಿದ್ದು ಅದು ಇಂದಿಗೂ ಮನ, ಮನೆಗಳಲ್ಲಿ ಅನುರಣಿಸುತ್ತಿದೆ.
ಕುಲ ಕುಲ ಎಂದು ಬಡಿದಾಡುವ ಬದಲು ಎಲ್ಲರೂ ಸಮಾನರು ಎಂಬ ವಿಶಾಲ ಮನೋಭಾವ ಬೆಳೆಸಿಕೊಂಡಾಗ ಸಮಾಜ ಸುಭದ್ರವಾಗುತ್ತದೆ.
ಅದಕ್ಕೆ ಸಾಹಿತ್ಯ ಕ್ಷೇತ್ರವು ಪೂರಕವಾಗಿದೆ ಎಂದರು ”

ಸಾಹಿತಿ,ಸಾಮಾಜಿಕ ಮುಖಂಡ ಡಿ‌.ಐ.ಅಬೂಬಕರ್
ಮಾತನಾಡಿ ” ಭಾವೈಕ್ಯತೆಯ ನೆಲೆಗಟ್ಟಿನಲ್ಲಿ ಸಮಾಜವನ್ನು ಒಗ್ಗೂಡಿಸುವುದು ಇಂದಿನ ಅಗತ್ಯವಾಗಿದೆ. ಕವಿಪುಂಗವರ ಕವನಗಳು, ನುಡಿಗಳು ಸಮಾಜದಲ್ಲಿ ಏಕತೆ ಮೂಡಿಸುವ ಸಂದೇಶಗಳನ್ನು ಸಾರುತ್ತಿದೆ.
ಇದು ನಮ್ಮಲ್ಲಿ ಬದಲಾವಣೆಗೆ ಪ್ರೇರಣೆಯಾಗಬೇಕು ಎಂದು ಹೇಳಿದರು.

ಭಾವೈಕ್ಯತೆಯ ಸಂದೇಶ ನೀಡಿದ ಸಾಮಾಜಿಕ ಯುವ ಮುಖಂಡ ಉಬೈದ್ ಕೆ.ವಿಟ್ಲ ಅವರು ” ಮನುಷ್ಯ ಮನಸ್ಸುಗಳು ಅಶಾಂತಿಯ ತಾಣವಾಗುತ್ತಿರುವಾಗ ಭಾವೈಕ್ಯ ಸಂದೇಶಗಳು ಮನಸ್ಸುಗಳನ್ನು ಬೆಸೆಯುತ್ತಿರುವುದು ಆಶಾದಾಯಕ ಬೆಳೆವಣಿಗೆ.
ಕೇವಲ, ಭಾಷಣ,ಬರಹಗಳಿಂದ ಮಾತ್ರ ಸಮಾಜದ ಅಂಕುಡೊಂಕುಗಳು ದೂರವಾಗದು.
ಮನುಷ್ಯರ ಮನೋಭಾವ ಬದಲಾವಣೆಯಾಗಿ ಸಕಾರಾತ್ಮಕ ಚಿಂತನೆಗಳು ಮೂಡಿದಾಗ ಉತ್ತಮ ಮತ್ತು ಮಾದರೀ ಸಮಾಜ ನಿರ್ಮಾಣ ಸಾಧ್ಯ ಎಂದರು.

ಭಾವೈಕ್ಯ ಸಂದೇಶ ನೀಡಿದ ಖ್ಯಾತ ಬರಹಗಾರ,ಚಿಂತಕ ಎಸ್.ಬಿ.ಮುಹಮ್ಮದ್ ದಾರಿಮಿ‌ ಉಪ್ಪಿನಂಗಡಿ ಮಾತನಾಡಿ ” ಭಾಷಣ,ಬರಹ,ಕವನಗಳು ಸಮಾಜದ ಬೆಳವಣಿಗೆಗೆ ಪೂರಕವಾಗಿರಬೇಕೇ ವಿನಃ ಸಮಾಜವನ್ನು ವಿಭಜಿಸುವಂತೆ ಮಾರಕವಾಗಿರಬಾರದು.
ನಮ್ಮ ನಮ್ಮ ಧರ್ಮ ಧಾರ್ಮಿಕ ಚೌಕಟ್ಟಿನಲ್ಲಿ ಭಾರತದ ಪರಮೋಚ್ಚ ಸಂವಿಧಾನವನ್ನು ಪಾಲಿಸಿ ಪ್ರತಿಯೊಬ್ಬರೂ ಭಾವೈಕ್ಯ ಸಮಾಜ ನಿರ್ಮಾಣದ ಉದ್ದೇಶದೊಂದಿಗೆ ಕಾರ್ಯಾಚರಿಸಿದರೆ ನಮ್ಮ ನಾಡು ಸೌಹಾರ್ದತೆಯ ಬೀಡಾಗಲು ಸಾಧ್ಯ ಎಂದು ಅವರು ಹೇಳಿದರು”

ಖ್ಯಾತ ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ ಅವರು ” ಭಾರತ ಮಾತೆ ಸರ್ವ ಸಂಪನ್ನೆ.
ಮನಸ್ಸಿನಲ್ಲಿ ಬೆಳಕು ತುಂಬಿದಾಗ ಇಡೀ ಸಮಾಜ ಬೆಳಗುತ್ತದೆ.
ಭಾರತೀಯರಾದ ನಾವೆಲ್ಲರೂ ಸಹೋದರ,ಸಹೋದರಿಯರಂತೆ ಬಾಳಬೇಕೆಂಬ ಮಹೋನ್ನತ ಸಂದೇಶವನ್ನು ಸಾರುವ ಕರ್ನಾಟಕ ಭಾವೈಕ್ಯ ಪರಿಷತ್ ಸಮಾಜದಲ್ಲಿ ಹೊಸ ಬದಲಾವಣೆ ತರಲಿ ” ಎಂದು ಹಾರೈಸಿದರು.

ಲೇಖಕ ಡಿ.ಎ.ಅಬ್ಬಾಸ್ ಪಡಿಕ್ಕಲ್ ಮಾತನಾಡಿ ” ಭಾವೈಕ್ಯತೆ ಎಂದರೆ ಎಲ್ಲರೂ ಒಟ್ಟಾಗಿ ಪ್ರೀತಿ, ವಿಶ್ವಾಸದಿಂದ ಇರುವುದಾಗಿದೆ.
ವಿವಿಧ ಧರ್ಮ, ಭಾಷೆ,ಜಾತಿಗಳಿದ್ದರೂ ಸರ್ವರೂ ಒಂದೇ ಆಗಿದ್ದಾರೆ ಎಂಬ ವಿಶ್ವ ಭ್ರಾತೃತ್ವ ಭಾವನೆಗಳು ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಸೃಷ್ಟಿಸಬಹುದು.
ಭಾರತದ ವಿವಿಧತೆಗಳಲ್ಲಿ ಏಕತೆ ಎಂಬ ತತ್ವವನ್ನು ಅನುಸರಿಸಿ ಜೀವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ವಿಭಿನ್ನ ಸಂಸ್ಕೃತಿಗಳ ನಡುವೆ ನಾವೆಲ್ಲರೂ ಬದುಕುವಾಗ ಸಹನೆ,ತಾಳ್ಮೆ ಅಗತ್ಯ.
ಭಾರತೀಯ ಸಮಾಜದ ಒಗ್ಗಟ್ಟು ಇಡೀ ದೇಶವನ್ನು ಪ್ರಗತಿಪಥದತ್ತ ತಲುಪಿಸಲು ಕಾರಣವಾಗಲಿದೆ ” ಎಂದು ಅಭಿಪ್ರಾಯ ಪಟ್ಟರು.

ವಿಚಾರಗೋಷ್ಠಿ ಮಂಡಿಸಿ ಮಾತನಾಡಿದ ಕವಿ ಅಬ್ದುಲ್ ಖಾದರ್ ಸ‌ಅದಿ ಸರಳಿಕಟ್ಟೆ ಅವರು ” 6000 ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಶರಣರು, ಸೂಫಿ ಸಂತರು ಸಮಾಜವನ್ನು ಕಟ್ಟುವ ತಮ್ಮ ವಚನಗಳ ಮೂಲಕ ಶ್ರೀಮಂತಗೊಳಿಸಿದ್ದಾರೆ.
ಸಾಹಿತ್ಯಕ್ಕೆ ಸಾಧ್ಯವಾಗದ್ದು ಏನೂ ಇಲ್ಲ.
ಕುವೆಂಪು ಅವರ ವಿಶ್ವ ಮಾನವತೆಯ ಸಂದೇಶ ಸಾರುವ ಕವನಗಳು ಇಡೀ ದೇಶದಲ್ಲಿ ತಲ್ಲಣ
ಸೃಷ್ಟಿಸಿವೆ.
ಸಮಾಜವನ್ನು ಒಡೆಯುವ ಕೆಲಸ ಮಾಡುವವರಿಂದ ಸ್ವಸ್ಥ ಸಮಾಜ ನಿರ್ಮಾಣದ ಕನಸು ಭಗ್ನವಾಗುತ್ತಿದೆ.
ಇದಕ್ಕೆ ನಾಗರಿಕ ಸಮಾಜ ಅವಕಾಶ ಮಾಡಿಕೊಡಬಾರದು ”
ಎಂದು ಮಾರ್ಮಿಕವಾಗಿ ನುಡಿದರು.

ಕವಿಗಳಾದ ನಾರಾಯಣ ಕುಂಬ್ರ,
ಪೆರುಮಾಳ್ ಲಕ್ಷ್ಮಣ್ ಐವರ್ನಾಡು,
ಹಮೀದ್ ಹಸನ್ ಮಾಡೂರು,
ಅಬ್ದುಲ್ ಸಮದ್ ಬಾವಾ ಪುತ್ತೂರು,
ಎಂ.ಪಿ.ಬಶೀರ್ ಅಹ್ಮದ್ ಬಂಟ್ವಾಳ,
ಹೈದರಲಿ ಐವತ್ತೊಕ್ಲು,
ಹರೀಶ್ ಸುಲಾಯ ಒಡ್ಡಂಬೆಟ್ಟು,ಸಲೀಂ ಅನಾರ್ಕಲಿ ಮೊದಲಾದವರು ಕವನ ವಾಚನ ಮಾಡಿದರು.

ಇಖ್ಬಾಲ್ ಕೋಲ್ಪೆ,ಎ.ಬಿ.ಮೊಹಿದೀನ್ ಕಳಂಜ,ಎಂ.ಎ.ಅಬ್ದುರ್ರಹ್ಮಾನ್ ಝುಹ್‌ರಿ ಮಗಿರೆ ಕುಂಬ್ರ, ವಿಜಯದಾಸ ನವಲಿ ರಾಯಚೂರು, ಇಬ್ರಾಹಿಂ ಬಾತಿಷ ಝುಹ್‌ರಿ ಕುಂಬ್ರ, ಹನೀಫ್ ನಿಝಾಮಿ ಅಸೈಗೋಳಿ ಮೊದಲಾವರು ಮುಖ್ಯ ಅತಿಥಿಗಳಾಗಿದ್ದರು.

ಹವ್ಯಾಸಿ ಪತ್ರಕರ್ತ ಕೆ.ಎ.ಅಬ್ದುಲ್ ಅಝೀಝ್ ಪುಣಚ ಸ್ವಾಗತಿಸಿದರು.
ಯುವ ಕವಿ ಎಂ.ಎ.ಮುಸ್ತಫಾ ಬೆಳ್ಳಾರೆ ಕಾರ್ಯಕ್ರಮ ನಿರೂಪಣೆ ಮಾಡಿದರು.

ವರದಿ: ಕೆ.ಎ.ಅಬ್ದುಲ್ ಅಝೀಝ್ ಪುಣಚ